ಜಿಲ್ಲಾದ್ಯಂತ ವಿವಿಧೆಡೆ ಇಳೆಗೆ ತಂಪೆರೆದ ಮಳೆ

KannadaprabhaNewsNetwork |  
Published : May 17, 2024, 12:44 AM IST
16ಕೆಡಿವಿಜಿ12, 13, 14, 15-ದಾವಣಗೆರೆ ಅಕ್ಕ ಮಹಾದೇವಿ ರಸ್ತೆಯಲ್ಲಿ ಗುರುವಾರ ಸಂಜೆ ಮಳೆಯಲ್ಲಿ ಕೊಡೆ ಹಿಡಿದು ಸಾಗುತ್ತಿರುವ ವಿದ್ಯಾರ್ಥಿನಿಯರು. | Kannada Prabha

ಸಾರಾಂಶ

ಕಾದ ಕಾವಲಿಯಂತಾಗಿದ್ದ ಕಾಂಕ್ರೀಟ್ ನಗರಿ ದಾವಣಗೆರೆ ನಗರ ಸೇರಿದಂತೆ ಜಿಲ್ಲಾದ್ಯಂತ ಗುರುವಾರ ಸಂಜೆ 4 ಗಂಟೆಯಿಂದ ಭಾರಿ ಸಿಡಿಲು, ಮಿಂಚು, ಗುಡುಗಿನ ಆರ್ಭಟದೊಂದಿಗೆ ಮಳೆರಾಯನ ಆಗಮನವಾಗಿದೆ. ತಡರಾತ್ರಿವರೆಗೂ ತುಂತುರು ಮಳೆ ಸುರಿದು ಭೂಮಿಯನ್ನು ತಂಪಾಗಿಸಿದೆ.

- ಜನ, ಜಾನುವಾರು, ಪಕ್ಷಿಗಳಿಗೆ ನವೋಲ್ಲಾಸ, ಹಸಿರು ಸಂಪತ್ತಿಗೂ ಉಸಿರು - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಕಾದ ಕಾವಲಿಯಂತಾಗಿದ್ದ ಕಾಂಕ್ರೀಟ್ ನಗರಿ ದಾವಣಗೆರೆ ನಗರ ಸೇರಿದಂತೆ ಜಿಲ್ಲಾದ್ಯಂತ ಗುರುವಾರ ಸಂಜೆ 4 ಗಂಟೆಯಿಂದ ಭಾರಿ ಸಿಡಿಲು, ಮಿಂಚು, ಗುಡುಗಿನ ಆರ್ಭಟದೊಂದಿಗೆ ಮಳೆರಾಯನ ಆಗಮನವಾಗಿದೆ. ತಡರಾತ್ರಿವರೆಗೂ ತುಂತುರು ಮಳೆ ಸುರಿದು ಭೂಮಿಯನ್ನು ತಂಪಾಗಿಸಿದೆ.

ಕೆಲ ತಿಂಗಳಿನಿಂದ ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶ, ಜಿಲ್ಲೆ ವಿವಿಧೆಡೆ ಮಳೆಯಾಗಿದೆ. ಆದರೆ, ದಾವಣಗೆರೆ ಜಿಲ್ಲಾ ಕೇಂದ್ರ, ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆ ಕೈಕೊಟ್ಟಿತ್ತು.

ಮಳೆಯಿಂದಾಗಿ ಬರಪೀಡಿತ ಜಿಲ್ಲೆಯ ವಿವಿಧ ಭಾಗದ ರೈತರು, ಗ್ರಾಮೀಣರು, ನಗರ, ಪಟ್ಟಣ ವಾಸಿಗಳು ಒಂದಿಷ್ಟು ನೆಮ್ಮದಿಯ ನಿಟ್ಟಿಸಿರು ಬಿಡುವಂತಾಗಿದೆ. ಜನ, ಜಾನುವಾರು, ಪ್ರಾಣಿ, ಪಕ್ಷಿಗಳಲ್ಲಿ ಒಂದಿಷ್ಟು ಲವಲವಿಕೆ ಮೂಡುವಂತಾಗಿದೆ. ಹೊಲ, ಗದ್ದೆ, ತೋಟದಲ್ಲಿನ ಬೆಳೆಗಳು ಬದುಕಲು ನೆಲ ತಣಿಯುವಂತೆ ಸಣ್ಣ ಹನಿಗಳ ಮಳೆಯಾಗಿದೆ.

ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ಅಂತರ್ಜಲ ಕ್ಷೀಣವಾಗಿದೆ. ಜನರಿಗೆ ನೀರೊದಗಿಸುವುದೇ ಆಡಳಿತ ಯಂತ್ರಕ್ಕೆ ತಲೆನೋವಾಗಿದೆ. ಸರ್ಕಾರಿ ಕೊಳವೆಬಾವಿಗಳು ವಿಫಲವಾಗಿವೆ. ಅಂತರ್ಜಲ ಕುಸಿತ ಕಂಡಿವೆ. ಇದರಿಂದ ಅನಿವಾರ್ಯವಾಗಿ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು, ನೀರು ಪೂರೈಸುವ ಕೆಲಸ ವಾಗುತ್ತಿದೆ. ಈ ಮಧ್ಯೆ ಹೀಗೆ ಸಣ್ಣದಾಗಿ ನಿರಂತರ ಮಳೆಯಾದರೂ ಅಂತರ್ಜಲ ಮಟ್ಟ ಸ್ವಲ್ಪಮಟ್ಟಿಗೆ ಸುಧಾರಿಸಲಿದೆ. ಬತ್ತಿದ್ದ ಬಾವಿಗಳಿಗೆ ಒಂದಿಷ್ಟು ನೀರು ಬಂದು, ಕೆಲ ದಿನಗಳ ಮಟ್ಟಿಗಾದರೂ ನೀರಿನ ಸಮಸ್ಯೆ ನಿವಾರಣೆ ಆಗುತ್ತದೆಂಬ ಮಾತು ಕೇಳಿಬರುತ್ತಿದೆ.

ಸಂಜೆ ಕಚೇರಿ, ಅಂಗಡಿ, ಕೆಲಸ, ವ್ಯಾಪಾರ ಮುಗಿಸಿಕೊಂಡವರು ಖುಷಿಯಲ್ಲಿ ಮಳೆ ನೀರಿನಲ್ಲಿ ನೆನೆಯುತ್ತಾ ಸಾಗಿದರು. ಇನ್ನು ಕಾಲೇಜು ಬಿಡುವ ಸಮಯಕ್ಕೆ ಮಳೆಯಾಗಿದ್ದರಿಂದ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಮನೆಗಳಿಗೆ ಹೋಗಲು ಪರದಾಡಿದರು. ರಾತ್ರಿಯೂ ಮಳೆ ಮುಂದುವರಿದಿದ್ದು, ಮಳೆಯ ವಾತಾವರಣ ಜನರಲ್ಲಿ ನವೋಲ್ಲಾಸವಂತೂ ತಂದಿದೆ.

- - - -16ಕೆಡಿವಿಜಿ12, 13, 14, 15:

ದಾವಣಗೆರೆ ಅಕ್ಕ ಮಹಾದೇವಿ ರಸ್ತೆಯಲ್ಲಿ ಗುರುವಾರ ಸಂಜೆ ಮಳೆಯಲ್ಲಿ ಕೊಡೆ ಹಿಡಿದು ಸಾಗುತ್ತಿರುವ ವಿದ್ಯಾರ್ಥಿನಿಯರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ