ಶಾಲೆಗೆ ನುಗ್ಗಿದ ಮಳೆ ನೀರು, ಶಿಕ್ಷಕರು, ಗ್ರಾಮಸ್ಥರಿಂದ ಮಕ್ಕಳ ರಕ್ಷಣೆ

KannadaprabhaNewsNetwork | Published : Mar 28, 2025 12:30 AM

ಸಾರಾಂಶ

ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಶಾಲೆ ಸುತ್ತಲೂ ಚರಂಡಿ ಹಾಗೂ ಕಂಪೌಂಡ್ ಹಾಗೂ ಶಾಲೆ ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದು ಇನ್ನೂ ಈಡೇರಿಲ್ಲ

ಕಲಘಟಗಿ: ಶಾಲೆಯ ಆಟದ ಮೈದಾನ ಹಾಗೂ ತರಗತಿ ಕೊಠಡಿಗೆ ಬಾರಿ ಪ್ರಮಾಣದ ಮಳೆ ನೀರು ನುಗ್ಗಿದ ಪರಿಣಾಮ ಪ್ರಾಣ ಭೀತಿಯಲ್ಲಿದ್ದ ಮಕ್ಕಳನ್ನು ಗ್ರಾಮಸ್ಥರು ಹಾಗೂ ಶಿಕ್ಷಕರು ವಾಹನದ ಮೂಲಕ ಸುರಕ್ಷಿತವಾಗಿ ಕರೆದೋಯ್ಯಲು ಹರಸಾಹಸ ಪಟ್ಟ ಘಟನೆ ಬುಧವಾರ ಜರುಗಿದೆ.

ತಾಲೂಕಿನ ಬಿ. ಗುಡಿಹಾಳ ಗ್ರಾಮದಲ್ಲಿ ಬಾರಿ ಪ್ರಮಾಣದ ಮಳೆ ಸುರಿದಿದ್ದರಿಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ.

ಮಳೆ ಗಾಳಿಗೆ 3 ಕೊಠಡಿಯ ಮೇಲ್ಛಾವಣಿ ಹಾರಿ ಬಿದ್ದಿದ್ದು, 3 ತೆಂಗಿನ ಮರ ನೆಲಕ್ಕೆ ಉರುಳಿವೆ, ಧ್ವಜದ ಕಂಬ ಕೂಡಾ ಕುಸಿದು ಬಿದ್ದು ಹಾನಿ ಸಂಭವಿಸಿದೆ, ಆದರೆ ಮಕ್ಕಳಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಶಿಕ್ಷಕರು ಮಾಹಿತಿ ನೀಡಿದರು.

ಅಧಿಕಾರಿಗಳು ನೀಡಿದ ಭರವಸೆ ಈಡೇರಿಲ್ಲ:

ಕಳೆದ ವರ್ಷವೂ ಸಹ ಶಾಲೆಗೆ ಮಳೆ ನೀರು ನುಗ್ಗಿ ಮಕ್ಕಳಿಗೆ ತೊಂದರೆಯಾಗಿತ್ತು. ಆಗ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಶಾಲೆ ಸುತ್ತಲೂ ಚರಂಡಿ ಹಾಗೂ ಕಂಪೌಂಡ್ ಹಾಗೂ ಶಾಲೆ ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದು ಇನ್ನೂ ಈಡೇರಿಲ್ಲ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಳೆಗಾಲ ಬಂತೆಂದರೆ ಶಾಲಾ ಶಿಕ್ಷಕರು ಹಾಗೂ ಮಕ್ಕಳು ಭಯದ ವಾತಾವರಣದಲ್ಲಿ ಆಟ ಪಾಠ ಕಲಿಕೆ ಮಾಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ.

"ಶಾಲಾ ಕೊಠಡಿ ಮೇಲೆ ಕಳಪೆ ತಗಡು ಹಾಕಿದ್ದರಿಂದ ಮಳೆ ಗಾಳಿಗೆ ಹಾರಿ ಬಿದ್ದು ಮಕ್ಕಳು ಪ್ರಾಣ ಹಂಗು ತೊರೆದು ಓಡೋಡಿ ಹೋಗಿದ್ದಾರೆ. ಪ್ರಾಣ ಭೀತಿಯಲ್ಲಿದ್ದ ಸಣ್ಣ ಮಕ್ಕಳನ್ನು ಖಾಸಗಿ ವಾಹನದ ಮೂಲಕ ರಕ್ಷಣೆ ಮಾಡಲಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಮಕ್ಕಳ ಹಿತ ದೃಷ್ಟಿಯಿಂದ ಶಾಲೆ ಅಭಿವೃದ್ಧಿ ಪಡಿಸಬೇಕು ಇನ್ನು ಮುಂದೆ ಮಕ್ಕಳಿಗೆ ತೊಂದರೆಯಾದರೆ ಅಧಿಕಾರಿಗಳೇ ಹೊಣೆಗಾರರು ಎಂದು ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಾ ದಾನ್ವೆನವರ್ ತಿಳಿಸಿದರು.

Share this article