ಹಾವೇರಿ: ನಿಂತ ನೀರಿನಲ್ಲಿ ಈಡೀಸ್ ಈಜಿಪ್ಟೆ ಸೊಳ್ಳೆ ಉತ್ಪಾದನೆಯಿಂದ ಡೆಂಘೀ ಹರಡುವ ಸಾಧ್ಯತೆ ಇದ್ದು, ಇದರ ತಡೆಗೆ ಮುಂಜಾಗ್ರತಾ ಕ್ರಮಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಜಿಲ್ಲೆಯಲ್ಲಿ ಡೆಂಘೀ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಜೊತೆಗೆ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.
ಡೆಂಘೀ ನಿಯಂತ್ರಣಕ್ಕೆ ಕೈಜೋಡಿಸಿ: ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಚಾವಣಿ, ಕಲ್ಲು ಗಣಿಗಾರಿಕೆ ಮತ್ತು ಕೃಷಿ ಹೊಂಡಗಳಲ್ಲಿ, ಕೆಎಸ್ಸಾರ್ಟಿಸಿ ಡಿಪೋಗಳಲ್ಲಿನ ಟೈರ್‌ನಲ್ಲಿ ನೀರು ನಿಂತು ಅಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಡೆಂಘೀ ತಡೆಗೆ ಆರೋಗ್ಯ ಇಲಾಖೆಯೊಂದಿಗೆ ಸಾರಿಗೆ ಇಲಾಖೆ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೀನುಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಕೈಜೋಡಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಜಗದೀಶ್ ಪಾಟೀಲ ಮಾತನಾಡಿ, ಜನವರಿಯಿಂದ ಮಾರ್ಚ್‌ವರೆಗೆ ಜಿಲ್ಲೆಯಲ್ಲಿ ಆರು ಡೆಂಘೀ ಪ್ರಕರಣಗಳು ಹಾಗೂ ಮೂರು ಚಿಕೂನ್‌ಗುನ್ಯ ಪ್ರಕರಣಗಳು ಪತ್ತೆಯಾಗಿವೆ. ಡೆಂಘೀ ಈಡೀಸ್ ಈಜಿಪ್ತಿ ಸೊಳ್ಳೆ ಹಗಲು ಹೊತ್ತು ಕಚ್ಚುವುದರಿಂದ ಡೆಂಘೀ ಜ್ವರ ಬರುತ್ತದೆ. ಇದು ಸಂಗ್ರಹಿಸಿದ ಸ್ವಚ್ಛ ನೀರಿನಲ್ಲಿ ಉತ್ಪತ್ತಿಯಾಗುತ್ತದೆ. ಹಾಗಾಗಿ, ಸಾರ್ವಜನಿಕ ಸ್ಥಳಗಳು, ಕಚೇರಿ ಹಾಗೂ ಮನೆ ಸುತ್ತಮುತ್ತ ನೀರು ನಿಲ್ಲದಂತೆ ಕ್ರಮವಹಿಸಬೇಕು. ಮನೆಗಳಲ್ಲಿ ಡ್ರಮ್ಮು, ಬ್ಯಾರಲ್, ಸಿಮೆಂಟ್ ತೊಟ್ಟಿ, ಕಲ್ಲುಬಾನಿ, ಟೈರ್, ತೆಂಗಿನ ಚಿಪ್ಪು ಹಾಗೂ ಇತರೆ ಘನ ತ್ಯಾಜ್ಯ ವಸ್ತುಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದರು.ಜಿಲ್ಲೆಯಲ್ಲಿರುವ ಕೆರೆ, ಹೊಂಡ, ಬಾವಿ ಹಳ್ಳ ಮುಂತಾದ ನೀರಿನ ಮೂಲಗಳಿಗೆ ಡೆಂಘೀ ಲಾರ್ವಾಹಾರಿ ಗಪ್ಪಿ ಮತ್ತು ಗಂಬೂಸಿಯಾ ಮೀನುಗಳನ್ನು ಬಿಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಹೊಲ, ಗದ್ದೆ ಕಟ್ಟಡ, ನಿರ್ಮಾಣ ಪ್ರದೇಶ ಮತ್ತು ಇತರೆ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರಿಗೆ, ಅಂಗನವಾಡಿ ಹಾಗೂ ಶಾಲೆಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಅಗತ್ಯ ಆರೋಗ್ಯ ಶಿಕ್ಷಣ ನೀಡಬೇಕು ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಯಾನಂದ, ಡಾ. ಚನ್ನಬಸಯ್ಯ ವಿರಕ್ತ ಮಠ, ಡಾ. ಸರಿತಾ, ಡಾ. ನೀಲೇಶ, ತಾಲೂಕು ಆರೋಗ್ಯಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.