ಬಾಣಂತಿಯರ ಹೊರಗಿಡುವ ಪದ್ಧತಿ ಕುರಿತು ಜಾಗೃತಿ ಮೂಡಿಸಿ: ಶಾಸಕಿ ಅನ್ನಪೂರ್ಣ

KannadaprabhaNewsNetwork |  
Published : Aug 12, 2026, 02:30 AM IST
ಸಂಡೂರಿನ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕಿ ಅನ್ನಪೂರ್ಣ ಈ ತುಕಾರಾಂ ಅವರು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದರು. | Kannada Prabha

ಸಾರಾಂಶ

ಈಗಲೂ ಕೆಲ ಹಟ್ಟಿಗಳಲ್ಲಿ ಗರ್ಭಿಣಿಯರನ್ನು ಮನೆಯಿಂದ ಹೊರಗಿಡುತ್ತಿರುವ ಸಂಪ್ರದಾಯ ಮುಂದುರಿದಿರುವುದು ತಲೆ ತಗ್ಗಿಸುವಂತಹದ್ದಾಗಿದೆ. ಈ ಕುರಿತು ಹಟ್ಟಿಗಳಲ್ಲಿನ ಜನರಲ್ಲಿ ಸೂಕ್ತ ಜಾಗೃತಿ ಮೂಡಿಸಿ, ಇಂತಹ ಸಂಪ್ರದಾಯವನ್ನು ಕೊನೆಗಾಣಿಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಶಾಸಕರು ಸೂಚಿಸಿದರು.

ಸಂಡೂರು: ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ಶಾಸಕಿ ಅನ್ನಪೂರ್ಣ ಈ ತುಕಾರಾಂ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆ ಜರುಗಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲಿಸಿದ ಶಾಸಕರು, ಈಗಲೂ ಕೆಲ ಹಟ್ಟಿಗಳಲ್ಲಿ ಬಾಣಂತಿಯರನ್ನು ಮನೆಯಿಂದ ಹೊರಗಿಡುತ್ತಿರುವ ಸಂಪ್ರದಾಯ ಮುಂದುರಿದಿರುವುದು ತಲೆ ತಗ್ಗಿಸುವಂತಹದ್ದಾಗಿದೆ. ಈ ಕುರಿತು ಹಟ್ಟಿಗಳಲ್ಲಿನ ಜನರಲ್ಲಿ ಸೂಕ್ತ ಜಾಗೃತಿ ಮೂಡಿಸಿ, ಇಂತಹ ಸಂಪ್ರದಾಯವನ್ನು ಕೊನೆಗಾಣಿಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗರಾಜ್ ಮಾತನಾಡಿ, ಈಗಾಗಲೇ ಹಟ್ಟಿಗಳಲ್ಲಿ ಅಧಿಕಾರಿಗಳು ಹಾಗೂ ಅಲ್ಲಿನ ವಿದ್ಯಾವಂತರಿಂದ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ತಾಲೂಕಿನಲ್ಲಿ 71 ಬಾಲ ಬಾಣಂತಿಯರು ಪತ್ತೆಯಾಗಿದ್ದು, ಇದರಲ್ಲಿ 52 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಉಳಿದ 19 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲು ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ. ತಾಲೂಕಿನಲ್ಲಿ 26 ಅಪೌಷ್ಟಿಕ ಮಕ್ಕಳು ಪತ್ತೆಯಾಗಿದ್ದು, ಅವರಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

ಅಸಮಾಧಾನ

ದರೋಜಿ ಕೆರೆಗೆ ಕಾರ್ಖಾನೆಗಳ ಕಲುಷಿತ ನೀರು ಸೇರುತ್ತಿದೆ. ಇದರಿಂದ ಕೆರೆಯಲ್ಲಿನ ಮೀನುಗಳು ಸಾಯುತ್ತಿರುವುದನ್ನು ನಾನು ನೋಡಿದ್ದೇನೆ. ಜಿಂದಾಲ್ ಕಾರ್ಖಾನೆಯವರು ತ್ಯಾಜ್ಯ ನೀರನ್ನು ಸಂಸ್ಕರಿಸಿ ಬಿಡುವಂತೆ ತಿಳಿಸಿದರು. ಇಲ್ಲಿನ ಮಾಲಿನ್ಯವನ್ನು ನೋಡಿದರೆ ಮಾಲಿನ್ಯ ನಿಯಂತ್ರಣ ಮಂಡಳಿ ಇದೆಯೋ? ಇಲ್ಲವೋ? ಗೊತ್ತಾಗುತ್ತಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕು ವೈದ್ಯಾಧಿಕಾರಿ ಡಾ. ಹರೀಶ್ ಮಾತನಾಡಿ, ಪಟ್ಟಣದಲ್ಲಿ 200 ಹಾಸಿಗೆಯ ಆಸ್ಪತ್ರೆಯ ಪ್ರಸ್ತಾವ ಡಿಪಿಆರ್ ಹಂತದಲ್ಲಿದೆ. ತಾಲೂಕಿನಲ್ಲಿ ಚರ್ಮ ರೋಗ, ತುರಿಕೆ ಕಾಯಿಲೆ ಹೆಚ್ಚಾಗಿ ಕಂಡು ಬರುತ್ತಿದೆ. ಸ್ವಚ್ಛತೆಯ ಕೊರತೆಯಿಂದ ಹೀಗಾಗುತ್ತಿದೆ ಎಂದರು.

ತಾಲೂಕಿನಲ್ಲಿ 209 ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು ಕಂಡು ಬಂದಿವೆ. ವ್ಯಾಕ್ಸಿನ್ ನೀಡಲಾಗುತ್ತಿದೆ. ಈ ಕುರಿತು ಜಾಗೃತಿಯನ್ನೂ ಮೂಡಿಸಲಾಗುತ್ತಿದೆ ಎಂದರು. ಶಾಸಕರು ಮಾತನಾಡಿ, ಈ ಕುರಿತು ಸಮೀಕ್ಷೆ ನಡೆಸಿ ವರದಿ ನೀಡಿ. ಗ್ರಾಮಾಂತರ ಪ್ರದೇಶಗಳಲ್ಲಿಯೂ ಈ ಕುರಿತು ಜಾಗೃತಿ ಮೂಡಿಸಿ. ನಿಯಂತ್ರಣಕ್ಕೆ ಅಗತ್ಯ ವ್ಯಾಕ್ಸಿನ್ ಕೊಡಿಸೋಣ. ಆಯುಷ್ ಇಲಾಖೆಯ ಔಷಧಿಗಳು ಕೆರೆ, ಹಳ್ಳಗಳಲ್ಲಿ ಸಿಗುತ್ತಿವೆ. ಇದನ್ನು ತಡೆಯಬೇಕು. ಆಸ್ಪತ್ರೆಗಳು ಜನಸ್ನೇಹಿಯಾಗಬೇಕು ಎಂದರು.

ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ರೂಪಿಸಬೇಕಿದೆ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಹಾಗೂ ನಾಗರಿಕ ಪ್ರಜ್ಞೆಯನ್ನು ಮೂಡಿಸಬೇಕು. ವಾರಕ್ಕೆ 2 ಅವಧಿ ಪುಸ್ತಕ ಓದಲು ಬಿಡಬೇಕು. ಪಾಠ ಪುನರಾವರ್ತನೆಯಾಗಬೇಕು. ಮಕ್ಕಳಲ್ಲಿ ಗ್ರಹಿಸುವ ಸಾಮರ್ಥ್ಯ ಹೆಚ್ಚಿಸಬೇಕು ಹಾಗೂ 8ನೇ ತರಗತಿಯಿಂದ ಮಕ್ಕಳಿಗೆ ಟೀಮ್ ವರ್ಕ್ ರೀತಿಯ ಚಟುವಟಿಕೆಗಳನ್ನು ಹೆಚ್ಚಾಗಿ ನೀಡಬೇಕು. ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ಉತ್ತಮ ಸಮಾಜ ನಿರ್ಮಾಣ ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕೈಗೊಳ್ಳಬೇಕಿದೆ ಎಂದರು.

ಈ ಬಾರಿ ಮಳೆ ಕೊರತೆಯಾಗಿದೆ. ನಾರಿಹಳ್ಳ ಜಲಾಶಯದಿಂದ 33 ಗ್ರಾಮಗಳಿಗೆ ನೀರನ್ನು ಪೂರೈಸಲಾಗುತ್ತಿದೆ. ಇದಕ್ಕೆ ಸಾಕಷ್ಟ ಅನುದಾನವನ್ನು ಖರ್ಚು ಮಾಡಲಾಗಿದೆ. ಆದರೆ, ಕೆಲವೆಡೆ ನೀರನ್ನು ಜನತೆ ಪೋಲು ಮಾಡುತ್ತಿದ್ದಾರೆ. ಹಲವು ಗ್ರಾಮಗಳಲ್ಲಿ ನಲ್ಲಿಗಳನ್ನು ಕಿತ್ತು, ಪೈಪ್‌ಗೆ ಮೋಟಾರ್ ಹಚ್ಚುತ್ತಿದ್ದಾರೆ. ಈ ಕುರಿತು ಹಲವು ದೂರುಗಳು ಬಂದಿವೆ. ಅಧಿಕಾರಿಗಳು ಜಾಣ ಕುರುಡು ತೋರಬಾರದು. ನೀರು ಪೋಲಾಗುವುದನ್ನು ತಡೆಯಲು ಕ್ರಮಕೈಗೊಳ್ಳಬೇಕು ಎಂದು ಶಾಸಕರು ಪಿಡಿಒಗಳಿಗೆ ಸೂಚಿಸಿದರಲ್ಲದೆ, ಅಪಘಾತಗಳನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ನೂರುದ್ದೀನ್, ಗ್ರೇಡ್ 2 ತಹಸೀಲ್ದಾರ್ ಸುಧಾ ಅರಮನೆ, ತಾಪಂ ಇಒ ಮಡಗಿನ ಬಸಪ್ಪ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಪಿಡಿಒಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಲುವೆಗಳಿಗೆ 90 ದಿನಗಳ ಕಾಲ ನೀರು: ತಂಗಡಗಿ
ನಾಗೇಂದ್ರ ಯಾಕೆ ರಾಜೀನಾಮೆ ಕೊಡಬೇಕು: ತಂಗಡಗಿ