ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಲೈಂಗಿಕ ಸಮಸ್ಯೆಗಳಿಂದ ಅರಿವಿಲ್ಲದೆ ಹಲವು ಮಾರಣಾಂತಿಕ ಸಮಸ್ಯೆಗಳು ಬರುತ್ತಿವೆ ಎಂದು ಆರೋಗ್ಯ ಆಪ್ತ ಸಮಾಲೋಚಕ ಎಂ.ಸತೀಶ್ ಎಚ್ಚರಿಸಿದರು.ಪಟ್ಟಣದ ಕುರುಹಿನಶೆಟ್ಟಿ ಭವನದಲ್ಲಿ ಕಿಕ್ಕೇರಿ ಸಮುದಾಯ ಆರೋಗ್ಯ ಇಲಾಖೆ ಹಾಗೂ ಯುವಜನ ಮತ್ತು ಅಭಿವೃದ್ಧಿ ಇಲಾಖೆ ಏರ್ಪಡಿಸಿದ್ದ ಎಚ್‌ಐವಿ, ಲೈಂಗಿಕ ಸಮಸ್ಯೆ ಕುರಿತು ಅರಿವು, ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಚ್‌ಐವಿ ಜೊತೆಗೆ ಕುಷ್ಟ ರೋಗ ತಡೆಯುವುದು ಇಲಾಖೆ ಪ್ರಮುಖ ಉದ್ದೇಶವಾಗಿದೆ. ಜಿಲ್ಲಾದ್ಯಂತ ಎಚ್‌ಐವಿ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಉಚಿತ ಪರೀಕ್ಷೆ, ಚಿಕಿತ್ಸೆ ನೀಡಿ ಎಚ್‌ಐವಿ ಹರಡದಂತೆ ತಡೆಗಟ್ಟಲು ಜಾಗೃತಿ ಮೂಡಿಸಲಾಗುತ್ತಿದೆ. ಹಳ್ಳಿಗಾಡು ಪ್ರದೇಶದಲ್ಲಿ ತಿಳಿವಳಿಕೆ ಇಲ್ಲದ ಪರಿಣಾಮ ಆರೋಗ್ಯ ಸಮಸ್ಯೆಗಳು ಹೆಚ್ಚು ಬೆಳಕಿಗೆ ಬರುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ವಿಭಾಗೀಯ ಮೇಲ್ವಿಚಾರಕ ಪರಮೇಶ್ ಎಚ್‌ಐವಿ ಹಾಗೂ ಕ್ಷಯಮುಕ್ತ ಸಮಾಜ ನಿರ್ಮಿಸಲು ಸಮುದಾಯದ ಸಹಕಾರ ಅವಶ್ಯವಿದೆ. ರೋಗ ತಡೆಗಟ್ಟಲು ಆರೋಗ್ಯದಲ್ಲಿ ಸಣ್ಣ ಸಮಸ್ಯೆ ಕಾಡಿದರೂ ತಡಮಾಡದೆ ಆರೋಗ್ಯ ತಪಾಸಣೆ, ಚಿಕಿತ್ಸೆಗೆ ಮುಂದಾಗುವಂತೆ ಕಿವಿಮಾತು ಹೇಳಿದರು.ಈ ವೇಳೆ ಟಿಬಿ ಮೇಲ್ವಿಚಾರಕ ವರದರಾಜು, ಸಂಪರ್ಕಕಾರ್ಯಕರ್ತರಾದ ಪವಿತ್ರ, ಸುಷ್ಮಾ, ತೇಜಾವತಿ, ಶೃತಿ ಇದ್ದರು.
ಪರಿಸರ ಸ್ವಚ್ಛತೆ ಪ್ರತಿಯೊಬ್ಬರ ಜವಾಬ್ದಾರಿ: ಯಶವಂತ್ಪಾಂಡವಪುರ:
ಧಾರ್ಮಿಕ ಕೇಂದ್ರ, ಶಾಲೆಗಳು ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ಯಶವಂತ್ ಹೇಳಿದರು.ಮರಕ ಸಂಕ್ರಾಂತಿ ಹಬ್ಬದ ಅಂಗವಾಗಿ ಸಂಸ್ಥೆಯಿಂದ ತಾಲೂಕಿನ ವಿವಿಧ ಗ್ರಾಮದಲ್ಲಿ ಸ್ವಚ್ಛತೆ ನಡೆಸಿ ಬಳಿಕ ಮಾತನಾಡಿ, ಸಂಸ್ಥೆಯೂ ಡಾ.ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದೊಂದಿಗೆ ಪ್ರತಿ ವರ್ಷವು ಶ್ರದ್ಧಾಕೇಂದ್ರ ಸ್ವಚ್ಛತಾ ಕಾರ್‍ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುತ್ತಿದೆ ಎಂದರು.
ತಾಲೂಕಿನ ಕ್ಯಾತನಹಳ್ಳಿ ಕೋದಂಡರಾಮ ದೇವಸ್ಥಾನ, ಬನ್ನಂಗಾಡಿ ಈಶ್ವರ ದೇವಸ್ಥಾನ, ನಾರ್ಥ್ ಬ್ಯಾಂಕ್ ವೇಣುಗೋಪಾಲ ಸ್ವಾಮಿ ಹಾಗೂ ಮಲ್ಲಿಗೆರೆ ಲಕ್ಷ್ಮೀದೇವಿ ದೇವಸ್ಥಾನಗಳು ಸೇರಿ ಸುಮಾರು 100ಕ್ಕೂ ಅಧಿಕ ಶ್ರದ್ಧಾಕೇಂದ್ರಗಳಲ್ಲಿ ಸ್ವಚ್ಛತೆ ನಡೆಸಲಾಗಿದೆ. ಅದೇ ರೀತಿ ಪ್ರತಿವರ್ಷವೂ ಸ್ವಚ್ಛತಾ ಕಾರ್ಯ ಮಾಡಲಾಗುವುದು ಎಂದರು.ಈ ವೇಳೆ ಆಯಾ ಗ್ರಾಮಗಳ ದೇವಸ್ಥಾನಗಳ ಪದಾಧಿಕಾರಿಗಳು, ಗ್ರಾಮದ ಮುಖಂಡರು, ಒಕ್ಕೂಟದ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು.