ಲಕ್ಷ್ಮೇಶ್ವರ: ಮಕ್ಕಳು ದೇಶದ ಸಂಪತ್ತು. ಅವರನ್ನು ಸಮಾಜಮುಖಿಗಳನ್ನಾಗಿ ಬೆಳೆಸುವ ಜವಾಬ್ದಾರಿ ಪಾಲಕರ ಮೇಲಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.
ಮಕ್ಕಳ ಕಲ್ಯಾಣ ಸಮಿತಿ ಬಿ.ಎನ್. ಸಂಶಿ ಮಾತನಾಡಿ, ಬಾಲಾಪರಾಧಿ ಮಕ್ಕಳಿಗೆ ಅಪರಾಧಿಗಳು ಎನ್ನದೆ ಅವರನ್ನು ಕಾನೂನಿನ ಸಂಘರ್ಷಕ್ಕೆ ಒಳಗಾದ ಮಕ್ಕಳು ಎಂದು ಕರೆಯಲಾಗುತ್ತದೆ. ಮಕ್ಕಳನ್ನು ವಿಚಾರಣೆ ನಡೆಸುವ ಪೊಲೀಸರಿಗೆ ಯುನಿಫಾರ್ಮ್ ಇರುವುದಿಲ್ಲ. ಅವರು ಮಕ್ಕಳ ಸ್ನೇಹಿತರಾಗಿ ಕೆಲಸ ಮಾಡುತ್ತಾರೆ. ದೌರ್ಜನ್ಯಕ್ಕೆ ಒಳಗಾದ ಹೆಣ್ಣು ಮಗುವಿಗೆ ಆಪ್ತ ಸಮಾಲೋಚನೆ ಅಗತ್ಯವಾಗಿರುತ್ತದೆ. ಆ ಕೆಲಸವನ್ನು ಮಕ್ಕಳ ಕಲ್ಯಾಣ ಸಮಿತಿ ಮಾಡುತ್ತಿದೆ. ಬಾಲಕಿಯರಿಗಾಗಿ ಬಾಲಕಿಯರ ಮಂದಿರ ಮತ್ತು ಬಾಲಕರಿಗಾಗಿ ಬಾಲಕರ ಮಂದಿರದಲ್ಲಿ ಪರಿತ್ಯಕ್ತ ಮಕ್ಕಳ ಪಾಲನೆ, ಪೋಷಣೆ ನಡೆಯುತ್ತದೆ. ಸಮಾಜದಿಂದ ಪರಿತ್ಯಕ್ತ ಮಕ್ಕಳು, ಅನಾಥ ಮಕ್ಕಳ ಪಾಲನೆ-ಪೋಷಣೆ ಸಮಿತಿಯಿಂದ ನಡೆಯುತ್ತದೆ. ತಕ್ಕ ವಯೋಮಾನದ ವರೆಗೆ ಅವರನ್ನು ಪೋಷಣೆ ಮಾಡಿ ಮತ್ತೆ ಸಮಾಜಕ್ಕೆ ಸಮರ್ಪಿಸುವುದು ಸಮಿತಿಯ ಕೆಲಸವಾಗಿದೆ ಎಂದರು.
ಬಾಲ ನ್ಯಾಯ ಮಂಡಳಿ ಸದಸ್ಯ ಪಿ.ಎಂ. ವಾಲಿ ಮಾತನಾಡಿ, ಗಂಡು ಮಕ್ಕಳೇ ಅಪರಾಧ ಚಟುವಟಿಕೆಯಲ್ಲಿ ಭಾಗಿ ಆಗುವುದು ಹೆಚ್ಚು. ಇದಕ್ಕೆ ಪಾಲಕರ ನಿರ್ಲಕ್ಷ್ಯವೇ ಕಾರಣ. ಹೆಣ್ಣು ಮಗುವಿನ ಮೇಲಿನ ಕಾಳಜಿ ಗಂಡು ಮಕ್ಕಳ ಮೇಲಿದ್ದರೆ ಅವರಲ್ಲಿ ಅಪರಾಧಿ ಭಾವನೆ ಕಡಿಮೆ ಆಗುತ್ತದೆ. ಈ ನಿಟ್ಟಿನಲ್ಲಿ ತಾಯಿ ಆದವಳು ತನ್ನ ಗಂಡು ಮಕ್ಕಳನ್ನು ಅತಿ ಜವಾಬ್ದಾರಿಯಿಂದ ಬೆಳೆಸಬೇಕು ಎಂದರು.ಸಿ.ಜಿ. ಹಿರೇಮಠ, ಪೂರ್ಣಾಜಿ ಖರಾಟೆ, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಲ್.ಎಸ್. ಅರಳಹಳ್ಳಿ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ನಿರ್ಮಲಾ ಅರಳಿ, ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗರಾಜ ಹಣಗಿ ಮಾತನಾಡಿದರು. ರೇಖಾ ವಡಕಣ್ಣವರ ಕಾರ್ಯಕ್ರಮ ನಿರೂಪಿಸಿದರು. ಮಾಲಾದೇವಿ ದಂಧರಗಿ ಸ್ವಾಗತಿಸಿದರು. ಸೋಮಣ್ಣ ಯತ್ತಿನಹಳ್ಳಿ ವಂದಿಸಿದರು.