ಕನ್ನಡಪ್ರಭ ವಾರ್ತೆ ಬಾಗಲಕೋಟೆಸಿಎಂ ಸಿದ್ದರಾಮಯ್ಯ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಕಾಂಗ್ರೆಸ್ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಕಾಂಗ್ರೆಸ್ ಮುಖಂಡರು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರ ಪ್ರತಿಕೃತಿ ದಹಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ನವನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಎಲ್ಐಸಿ ಸರ್ಕಲ್, ಪೊಲೀಸ್ ಪ್ಯಾಲೇಸ್, ಬಸ್ ನಿಲ್ದಾಣದ ಮೂಲಕ ಜಿಲ್ಲಾಡಳಿತ ಭವನ ತಲುಪಿತು. ಅಲ್ಲಿ ರಾಜ್ಯಪಾಲರ ಪೃತಿಕೃತಿ ದಹಿಸಿದ ಕಾಯಕರ್ತರು ಕೇಂದ್ರ ಬಿಜೆಪಿ ಸರ್ಕಾರ ವಿರುದ್ಧ ಕಿಡಿಕಾರಿದರು. ಸಿಎಂ ಸಿದ್ದರಾಮಯ್ಯ ಕರ್ನಾಟಕ ಹಾಗೂ ದೇಶಕಂಡ ಅತ್ಯಂತ ಪ್ರಮಾಣಿಕ ಆಡಳಿತಗಾರ ಎಂದು ಘೋಷಣೆಗಳನ್ನು ಕೂಗಿದರು.ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಹಾಗೂ ದೇಶಕಂಡ ಪ್ರಮಾಣಿಕ ಆಡಳಿತಗಾರ. ಬಡವರು, ದೀನ ದಲಿತರ ಬಗ್ಗೆ ಕಾಳಜಿ ಹೊಂದಿದ್ದಾರೆ. ಅವರಿಗೆ ಕಪ್ಪು ಚುಕ್ಕೆ ತರಲು ಬಿಜೆಪಿ ಮುಂದಾಗಿದೆ. ರಾಜ್ಯಪಾಲರ ಭವನ ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ಸಂವಿಧಾನ ಕಾಪಾಡಲು ರಾಜ್ಯಪಾಲರು ಇದ್ದಾರೇ, ಅದು ಬಿಟ್ಟು ಪ್ರಧಾನಿ ಮೋದಿ, ಅಮಿತ ಶಾ ಸೇವೆಗೆ ಅಲ್ಲ. ಸಂವಿಧಾನ ಕಾಯಲು ಬಂದಿದ್ದೇನೆ, ಸೇವೆಗೆ ಅಲ್ಲ ಎಂದು ಹೇಳಿದ್ದರೇ ರಾಜ್ಯಪಾಲರ ಗೌರವ ಹೆಚ್ಚುತಿತ್ತು. ಸದ್ಯದ ಅವರ ನಡೆ ರಾಜ್ಯಪಾಲರ ಹುದ್ದೆಗೆ ಕೂಡಲು ಯೋಗ್ಯತೆ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮುಡಾ ಪ್ರಕರಣದ ಭೂಮಿ 90 ವರ್ಷದ ಹಳೆಯದಾಗಿದ್ದು, ಇದು ಸಿಎಂ ಭಾವನ ಹೆಸರಿನಲ್ಲಿತ್ತು. ಅದನ್ನು ಸಿಎಂ ಪತ್ನಿ ಪಾರ್ವತಿ ಅವರಿಗೆ ಊಡೊಗೊರೆಯಾಗಿ ನೀಡಲಾಗಿದೆ. ಇದೇ ಸ್ಥಳದಲ್ಲಿ ಜಾಗ ಕೊಡಿ ಅಂತ ಕೇಳಿರಲಿಲ್ಲ. ಪರಿಹಾರ ರೂಪದಲ್ಲಿ ಮುಡಾ 50:50 ಅನುಪಾತದಲ್ಲಿ ಹಂಚಿಕೆ ಮಾಡಿದೆ. ಎಂದು ಗುಡುಗಿದರು. ಶಾಸಕ ಎಚ್.ವೈ.ಮೇಟಿ ಮಾತನಾಡಿ, ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಇದು ಖಂಡನೀಯ. ಸಿಎಂ ಸಿದ್ದರಾಮಯ್ಯ ವಿರೋಧ ಪಕ್ಷದ ಮುಖಂಡರು ಮೆಚ್ಚುವಂತೆ ಕೆಲಸ ಮಾಡುತ್ತಿದ್ದಾರೆ. ಇಂತಹ ಪ್ರಮಾಣಿಕ ಸಿಎಂ ವಿರುದ್ಧ ಆರೋಪ ಮಾಡುವುದು ಸಲ್ಲದು ಎಂದರು.ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಖುರ್ಚಿಯನ್ನು ಎಲ್ಲಿ ಸಿದ್ದರಾಮಯ್ಯ ಕಸಿದುಕೊಳ್ಳುತ್ತಾರೋ ಎಂಬ ಭಯ ಮೂಡಿದೆ. ಹೀಗಾಗಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇಂತಹ ಎಜೆಂಟರಾಗಿ ರಾಜ್ಯಪಾಲರು ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಮನೆಯಲ್ಲಿ ಭ್ರಷ್ಟಾಚಾರ ಅಡಗಿದೆ. ನಿಮ್ಮ ಉಸಿರು ಇರುವರೆಗೂ ಸಿದ್ದರಾಮಯ್ಯ ಹೆಸರು ಕೆಡಿಸಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.ಶಾಸಕ ಜೆ.ಟಿ.ಪಾಟೀಲ, ಶಾಸಕ ಬಿ.ಬಿ.ಚಿಮ್ಮನಕಟ್ಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಸಂಯುಕ್ತ ಪಾಟೀಲ, ಜಿಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ, ಮುಖಂಡರಾದ ರಕ್ಷಿತಾ ಭರತಕುಮಾರ ಈಟಿ, ನಾಗರಾಜ ಹದ್ಲಿ, ತಿಮ್ಮಣ್ಣ ಬಟಕುರ್ಕಿ, ಹೊಳಬಸ್ಸು ಶೆಟ್ಟರ, ಉಮೇಶ ಮೇಟಿ, ಮಲ್ಲಿಕಾರ್ಜುನ ಮೇಟಿ, ಸಂಜೀವ ವಾಡಕರ, ನಾರಾಯಣ ದೇಸಾಯಿ, ಎಂ.ಬಿ.ಸೌದಾಗರ, ಚನ್ನವೀರ ಅಂಗಡಿ, ಆನಂದ ಜಿಗಜಿನ್ನಿ ಮುಂತಾದವರು ಇದ್ದರು. ಕೋಟ್
ಎಲ್ಲವು ಕಾನೂನು ಬದ್ಧವಾಗಿದೆ. ಆದರೆ, ಬಿಜೆಪಿ ರಾಜಕೀಯ ದುರುದ್ದೇಶದಿಂದ ಇದನ್ನು ಕೆದಕಿದೆ. ದೇಶದ ಜನರು ಮೋದಿಗೂ ಅಧಿಕಾರ ಮಾಡುವ ಅವಕಾಶ ನೀಡಿಲ್ಲ. ಅವರಿವರನ್ನು ಸೇರಿಸಿಕೊಂಡು ಆಡಳಿತ ನಡೆಸುತ್ತಿದ್ದೀರಿ. ರಾಜ್ಯದ ಜನತೆ ಹಾಗೂ ರಾಜಕಾರಣಿಗಳು ನಿಮ್ಮ ಕುತಂತ್ರಕ್ಕೆ ಬಗ್ಗುವದಿಲ್ಲ.ಆರ್.ಬಿ.ತಿಮ್ಮಾಪುರ, ಉಸ್ತುವಾರಿ ಸಚಿವ