ಬಳ್ಳಾರಿ: ಪೋಕ್ಸೋ ವಿಶೇಷ ನ್ಯಾಯಾಲಯವಿದ್ದರೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವ ಪ್ರಮಾಣ ಹೆಚ್ಚಾಗಬೇಕಿದೆ. ಸಮಾಜಬಾಹಿರ ಚಟುವಟಿಕೆಗಳಲ್ಲಿ ತೊಡಗುವವರಿಗೆ ಶಿಕ್ಷೆಯಾದಾಗ ಮಾತ್ರ ಇಡೀ ಸಮಾಜಕ್ಕೆ ಸರಿಯಾದ ಸಂದೇಶ ರವಾನೆಯಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಸಿದ್ಧಲಿಂಗ ಪ್ರಭು ತಿಳಿಸಿದರು.
ಪೋಕ್ಸೋ ಪ್ರಕರಣಗಳಲ್ಲಿ ಪೊಲೀಸ್ ಮತ್ತು ನ್ಯಾಯಾಂಗದ ಜೊತೆಗೆ ಸಮಾಜ ಹಾಗೂ ವಿದ್ಯಾರ್ಥಿಗಳ ಪಾತ್ರವೂ ಪ್ರಮುಖವಾಗಿದೆ. ನಕಲಿ ದಾಖಲೆಗಳನ್ನು ಬಳಸಿ ಬ್ಯಾಂಕ್ ಖಾತೆ ತೆರೆಯುವುದು ಹಾಗೂ ಯುವತಿಯರ ಫೋಟೋಗಳನ್ನು ದುರ್ಬಳಕೆ ಮಾಡಿಕೊಂಡು ಬೆದರಿಕೆ ಹಾಕುವ ಪ್ರಕರಣಗಳ ವಿರುದ್ಧ ಮುಂಜಾಗ್ರತಾ ಕ್ರಮಗಳನ್ನು ವಹಿಸುವುದು ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳಿಗೆ ಮದುವೆ ಮಾಡುವುದರಿಂದ ಅವರ ಆರೋಗ್ಯ ಹಾಗೂ ವೈವಾಹಿಕ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಬಾಲ್ಯವಿವಾಹಗಳ ಕುರಿತು ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು. ಇಂತಹ ಘಟನೆಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸರು ಅಥವಾ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಇತ್ತೀಚೆಗೆ ಹೆಚ್ಚುತ್ತಿರುವ ಬ್ಯಾಂಕಿಂಗ್ ವಂಚನೆಗಳು, ಉದ್ಯೋಗದ ಹೆಸರಿನಲ್ಲಿ ವಂಚನೆ ಹಾಗೂ ಸಾಮಾಜಿಕ ಮಾಧ್ಯಮಗಳ ದುರ್ಬಳಕೆ ಕುರಿತು ವಿದ್ಯಾರ್ಥಿಗಳು ಜಾಗೃತರಾಗಿರಬೇಕು ಎಂದು ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪೆನ್ನೇಕರ್ ಮಾತನಾಡಿ, ಬಾಲ್ಯ ವಿವಾಹವು ಹೆಣ್ಣುಮಕ್ಕಳ ಜೀವನ ಮತ್ತು ಭವಿಷ್ಯವನ್ನು ಅಂಧಕಾರಕ್ಕೆ ತಳ್ಳುತ್ತದೆ. ಇಡೀ ಜೀವನವನ್ನು ಗಂಡ, ಮಕ್ಕಳ ಸೇವೆಯಲ್ಲೇ ಕಳೆದುಹೋಗುವಂತೆ ಮಾಡುವ ಈ ಪದ್ಧತಿಯನ್ನು ತಡೆಯಲೇಬೇಕಾಗಿದೆ ಎಂದು ಹೇಳಿದರು.
ಸಮಾವೇಶದಲ್ಲಿ ಹದಿಹರೆಯದ ಹೆಣ್ಣುಮಕ್ಕಳು ಬಾಲ್ಯವಿವಾಹದ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ನಗರದ ಎಸ್‌ಪಿ ಕಚೇರಿಯಿಂದ ಗಡಿಗಿ ಚೆನ್ನಪ್ಪ ವೃತ್ತ, ರಾಘವ ಕಲಾ ಮಂದಿರದ ವೇದಿಕೆ ಸಭಾಂಗಣದವರೆಗೆ ಜಾಗೃತಿ ಜಾಥಾ ನಡೆಯಿತು.