ಕೆಎಸ್ಆರ್ಪಿಯ ಡೆಪ್ಯುಟಿ ಕಮಾಂಡೆಂಟ್ ಚಂದ್ರಶೇಖರ್ ಮಾತನಾಡಿ, 2030ರೊಳಗೆ ಡ್ರಗ್ಸ್ ಮುಕ್ತ ಭಾರತವನ್ನು ಮಾಡುವ ಗುರಿ ಹೊಂದಲಾಗಿದೆ ಎಂದರು.
ಕಾರವಾರ: ಯುವಜನತೆಯನ್ನು ಹಾಗೂ ದೇಶದ ಭವಿಷ್ಯವನ್ನು ಹಾಳು ಮಾಡುವ ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸುವುದು ಮತ್ತು ಇದರ ವಿರುದ್ಧ ಹೋರಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಶಶಿ ಹೇಳಿದರು.ಸೋಮವಾರ ರವೀಂದ್ರನಾಥ್ ಠಾಗೋರ್ ಕಡಲತೀರದ ಮಯೂರ ವರ್ಮ ವೇದಿಕೆಯಲ್ಲಿ ಕಾರವಾರಕ್ಕೆ ಆಗಮಿಸಿದ, ಮಾದಕ ವಸ್ತುಗಳ ವಿರುದ್ಧ ಹೋರಾಟದ ಜಾಗೃತಿಯ ಏಕತಾ ಪರೇಡ್ ಮತ್ತು ಮೋಟರ್ ಸೈಕಲ್ ರಾಷ್ಟ್ರೀಯ ರ್ಯಾಲಿ- 2026 ತಂಡಗಳನ್ನು ಸ್ವಾಗತಿಸಿ, ಆಯೋಜಿಸಲಾದ ವೇದಿಕೆ ಕಾರ್ಯಕ್ರಮನ್ನು ಅವರು ಉದ್ಘಾಟಿಸಿ ಮಾತನಾಡಿದರು.ಮಾದಕ ದ್ರವ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಒನ್ ನೇಶನ್, ಒನ್ ರೈಡ್, ಡ್ರಗ್ಸ್ ಫ್ರೀ ಇಂಡಿಯಾ ಅಭಿಯಾನದಡಿ ಕೇರಳ, ಲಕ್ಷದ್ವೀಪ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಶಾಲಾ, ಕಾಲೇಜು, ಕಚೇರಿಗಳಲ್ಲಿ ಕಾರ್ಯಕ್ರಮ ಮಾಡುವ ಮೂಲಕ ಸಮಾಜಕ್ಕೆ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಕೆಎಸ್ಆರ್ಪಿಯ ಡೆಪ್ಯುಟಿ ಕಮಾಂಡೆಂಟ್ ಚಂದ್ರಶೇಖರ್ ಮಾತನಾಡಿ, 2030ರೊಳಗೆ ಡ್ರಗ್ಸ್ ಮುಕ್ತ ಭಾರತವನ್ನು ಮಾಡುವ ಗುರಿ ಹೊಂದಲಾಗಿದೆ ಎಂದರು.
ಕೇಂದ್ರ ಗೃಹ ಸಚಿವಾಲಯದಿಂದ ಮಾದಕ ವಸ್ತುಗಳ ಹಾವಳಿ ಹಾಗೂ ಅದರ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ದೇಶವ್ಯಾಪಿ ಈ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಅ. 16ರಂದು ಆರಂಭವಾದ ಈ ಜಾಗೃತಿ ಬೈಕ್ ರ್ಯಾಲಿ ಸೋಮವಾರ ಕಾರವಾರ ತಲುಪಿದೆ. ಲಕ್ಷದ್ವೀಪ ಮತ್ತು ಕೇರಳದ ಪೊಲೀಸ್ ತಂಡಗಳು ಈಗಾಗಲೇ ಅಭಿಯಾನದಲ್ಲಿ ಸೇರಿಕೊಂಡಿದ್ದು, ಹೈದರಾಬಾದ್, ತೆಲಂಗಾಣ, ಮಹಾರಾಷ್ಟ್ರ ಹಾಗೂ ತಮಿಳುನಾಡು ಭಾಗಗಳಿಂದಲೂ ಪೊಲೀಸ್ ತಂಡಗಳು ಭಾಗವಹಿಸುತ್ತಿವೆ. ಈ ರ್ಯಾಲಿ ಮೂಲಕ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಾರ್ವಜಕರಿಗೆ ಅರಿವು ಮೂಡಿಸಲಾಗುತಿದ್ದು, ಮಾದಕ ವಸ್ತುಗಳ ವಿರುದ್ಧದ ಹೋರಾಟದಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಜಾಗೃತಿ, ಮುನ್ನೆಚ್ಚರಿಕೆ ಮೂಲಕ ಈ ಪಿಡುಗನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿಲೀಪ್ ಎಂ.ಎನ್., ಸಮಾಜಕ್ಕೆ ಡ್ರಗ್ಸ್ ಎಂಬುವುದು ಕ್ಯಾನ್ಸರ್ ಇದ್ದಂತೆ. ಸಾಹಸ ಮತ್ತು ಕುತೂಹಲಕ್ಕೆ ಯಾವುದೇ ಮಾದಕ ವಸ್ತುಗಳನ್ನು ಒಮ್ಮೆ ಪ್ರಯೋಗಿಸಿ ನೋಡಬೇಕೆಂಬ ಮನೋಭಾವ ಯುವಜನರನ್ನು ವ್ಯಸನದ ಸುಳಿಗೆ ತಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಬೈಕ್ ರೈಡರ್ಗಳು, ಪೊಲೀಸ್ ಇಲಾಖೆಯ ಅಧಿಕಾರಿ ಸಿಬ್ಬಂದಿ, ಶಾಲಾ- ಕಾಲೇಜು ವಿದ್ಯಾರ್ಥಿಗಳು ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.