ಬಳ್ಳಾರಿ: ಬರ ಪರಿಹಾರ ಸೇರಿದಂತೆ ರೈತರ ಖಾತೆಗಳಿಗೆ ಸರ್ಕಾರದಿಂದ ಬರುವ ಹಣವನ್ನು ಬ್ಯಾಂಕ್ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯಾಧ್ಯಕ್ಷ ಆರ್.ಮಾಧವ ರೆಡ್ಡಿ ಆಗ್ರಹಿಸಿದ್ದಾರೆ.
ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಹಲವು ವರ್ಷಗಳಿಂದಿರುವ ಸಾಲವನ್ನು ಏಕತೀರುವಳಿ (ಒಟಿಎಸ್) ಮೂಲಕ ಬಗೆಹರಿಸಬೇಕು. ಜೂನ್ ತಿಂಗಳಲ್ಲಿ ಒಟಿಎಸ್ ಜಾರಿಗೊಳಿಸಿ, ದಿನಾಂಕವನ್ನು ನಿಗದಿಗೊಳಿಸಬೇಕು. ಈ ಕುರಿತು ಗ್ರಾಮೀಣ ಭಾಗದಲ್ಲಿವ್ಯಾಪಕವಾದ ಪ್ರಚಾರ ಮಾಡಬೇಕು. ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ರೈತರ ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿರುವ ಬ್ಯಾಂಕ್‌ಗಳ ವಿರುದ್ದ ವಿಪತ್ತು ನಿರ್ವಹಣಾ ಇಲಾಖೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಒಟಿಎಸ್ ಮೂಲಕ ಸಾಲ ತೀರುವಳಿಯಾದ ಬಳಿಕ ರೈತರಿಗೆ ಮತ್ತೆ ಕೃಷಿ ಸಾಲವನ್ನು ನೀಡಬೇಕು ಎಂದು ಆಗ್ರಹಿಸಿದರು.
ಗ್ರಾಮೀಣ ಬ್ಯಾಂಕ್ ರೈತರ ಹಿತ ಕಾಯಲು ಮುಂದಾಗುತ್ತಿಲ್ಲ. ಸಂಕಷ್ಟದಲ್ಲಿರುವ ಅನ್ನದಾತರಿಗೆ ನೆರವಿಗೆ ಬರುತ್ತಿಲ್ಲ. ಹೀಗಾಗಿಯೇ ಅನೇಕ ಬಾರಿ ಹೋರಾಟಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಬ್ಯಾಂಕ್ ಆಡಳಿತ ಕೂಡಲೇ ರೈತರ ಸಾಲವನ್ನು ಒಟಿಎಸ್ ಮಾಡುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಹಂತದ ಹೋರಾಟಗಳನ್ನು ರೂಪಿಸುವ ಕುರಿತು ಸಂಘದಲ್ಲಿ ಚರ್ಚಿಸಿ, ಸೂಕ್ತ ನಿಲುವು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.ರೈತ ಮುಖಂಡರಾದ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಶ್ರೀಶೈಲ, ಆಲದಹಳ್ಳಿ ಬಸವರಾಜ, ಸ್ವಾಮಿ, ಪೊಂಪನಗೌಡ, ಸುರೇಂದ್ರ, ತಿಮ್ಮರೆಡ್ಡಿ ಇತರರಿದ್ದರು.