ಕನ್ನಡಪ್ರಭ ವಾರ್ತೆ ಬೀದರ್ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಕುರಿತು ಶುಕ್ರವಾರ ರೈತ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಇಲ್ಲ ಸಲ್ಲದ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾಗಿದೆ ಎಂದು ಕಾರ್ಖಾನೆಯ ನಾಲ್ಕು ನಿರ್ದೇಶಕರು ಸ್ಪಷ್ಟಿಕರಣ ನೀಡಿದ್ದಾರೆ.
ಈ ಕುರಿತು ನಿರ್ದೇಶಕ ವಿಶ್ವನಾಥ ಪಾಟೀಲ್ ಮಾಡಗೂಳ, ಮಲ್ಲಿಕಾರ್ಜುನ ಪಾರಾ, ರಾಜಪ್ಪ ಶೇರಿಕಾರ ಹಾಗೂ ಅಪ್ಪಣ್ಣ ಇಸ್ಮಾಯಿಲಪ್ಪ ಜಂಟಿ ಪ್ರಕಟಣೆ ನೀಡಿ, ಜಿಲ್ಲೆಯ ಅತ್ಯಂತ ಹಳೆಯ ಕೃಷಿ ಆಧಾರಿತ ಸಹಕಾರ ಕ್ಷೇತ್ರದ ಕಾರ್ಖಾನೆಯಾಗಿದ್ದು, 1968-69ನೇ ಸಾಲಿನಿಂದ ಕಬ್ಬು ನುರಿಸುವ ಕಾರ್ಯ ನಿರ್ವಹಿಸುತ್ತಿದೆ. ಆದರೆ 2015-16ರಿಂದ 5 ಹಂಗಾಮಿನಲ್ಲಿ ಕೇವಲ 2 ಲಕ್ಷ ಟನ್ ಮಾತ್ರ ಕಬ್ಬು ನುರಿಸಿದ್ದು, ಕಾರ್ಖಾನೆಯ ಕ್ಲಿಷ್ಟಕರವಾಗಿ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದೆ. 2019-20 ಮತ್ತು 2020-21ನೇ ಸಾಲಿನ ಹಂಗಾಮು ಪ್ರಾರಂಭಿಸದ ಕಾರಣ ಅನೇಕ ಯಂತ್ರೋಪಕರಣಗಳು ತುಕ್ಕು ಹಿಡಿದು ಪೈಪಲೈನ್‌ಗಳು ಇತ್ಯಾದಿ ಹಾಳಾಗಿರುತ್ತವೆ.ಕಾರ್ಖಾನೆಯು 2020-21ರ ಮಾರ್ಚ ಅಂತ್ಯಕ್ಕೆ ಸುಮಾರು 300 ಕೋಟಿಗಳ ಸಾಲ ಹೊಂದಿರುತ್ತದೆ. ಏಪ್ರಿಲ್ 2021ರಲ್ಲಿ ನಮ್ಮ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡಿರುತ್ತದೆ. ನಾವು ಅಧಿಕಾರ ವಹಿಸಿಕೊಂಡಗೆ ಹಳೆಯ 5 ವರ್ಷಗಳ ಲೆಕ್ಕ ಪತ್ರಗಳ ಆಡಿಟ್ ಮತ್ತು 3 ವರ್ಷಗಳ ವಾರ್ಷಿಕ ಮಹಾಸಭೆ ಜರುಗಿರಲಿಲ್ಲ. ಬ್ಯಾಂಕಿನಿಂದಾಗಲಿ ಅಥವಾ ಸರ್ಕಾರದಿಂದಾಗಲಿ ಆರ್ಥಿಕ ಸಹಾಯ ಸಾಲ ದೊರಕದೆ ಇರುವುದರಿಂದ ಸಕ್ಕರೆ ಮತ್ತು ಮೊಲಾಸೆಸ್ ಖರೀದಿದಾರರಿಂದ ಸುಮಾರು 11.40 ಕೋಟಿಗಳ ವೈಯಕ್ತಿಕ ಗ್ಯಾಂರಟಿ ನೀಡಿ ಮುಂಗಡ ಪಡೆದು ಯಂತ್ರೋಪಕರಣಗಳ ದುರುಸ್ತಿ, ಬಿಡಿಭಾಗಗಳ ಖರೀದಿ ಮತ್ತು ಕಬ್ಬು ಕಟಾವು ಸಾಗಾಣಿಕೆ, ಗುತ್ತಿಗೆದಾರರಿಗೆ ಮುಂಗಡ ನೀಡಿ 2021-22ನೇ ಸಾಲಿನ ಹಂಗಾಮು ಟ್ರಾಯಲ್ ಆಧಾರದ ಮೇಲೆ ಪ್ರಾರಂಭಿಸಿ ಯಂತ್ರೋಪಕರಣಗಳು, ಪೈಪ್‌ಲೈನ್‌ಗಳು ತುಕ್ಕು (ಜಂಗು) ಹಿಡಿದು ಹಾಳಾಗಿರುವುದರಿಂದ ಜ್ಯಾಸ್ ಹರಿದು ಹೋಗಿ ರಿಕವರಿ ಕಡಿಮೆ ಆಗಿರುವುದಲ್ಲದೆ, ಅನೇಕ ತೊಂದರೆಗಳನ್ನು ಎದುರಿಸಿ 54574 ಮೆಟ್ರಿಕ್ ಟನ್ ಕಬ್ಬು ನುರಿಸಿ ಹಂಗಾಮು ಮುಕ್ತಾಯಗೊಳಿಸಲಾಯಿತು ಎಂದು ನಿರ್ದೇಶಕರು ಸ್ಪಷ್ಟಿಕರಣ ನೀಡಿದ್ದಾರೆ..
ಕಾರ್ಖಾನೆಯಲ್ಲಿ ಸುಮಾರು ವರ್ಷಗಳಿಂದ ಸಾಗವಾನಿ ಮರಗಳು ಗೊಳ್ಳಿ ಹತ್ತಿ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಹಾಳಾಗಿರುವುದರಿಂದ ಮತ್ತು ಕಳ್ಳತನದಿಂದ ಗಿಡಗಳು ಕಡಿದುಕೊಂಡು ಹೋಗುತ್ತಿರುವ ಪ್ರಯುಕ್ತ ಟೆಂಡರ್ ಕರೆದು ಮಾರಾಟ ಮಾಡಲಾಗಿರುತ್ತದೆ.ಸುಭಾಷ ಕಲ್ಲೂರ ಕಾರ್ಖಾನೆಯ ಅದ್ಯಕ್ಷರು ಹಾಳಾಗಿ ಬಂದ್ ಆಗಿರುವ ಕಾರ್ಖಾನೆ ಪ್ರಾರಂಭಿಸಿರುವುದರಿಂದ ಕಾರ್ಖಾನೆಯ ಸ್ಕ್ರ್ಯಾಪ್ ಮಾರಾಟ ಆಗುವುದನ್ನು ತಪ್ಪಿಸಿ ಲೀಸ್‌ಗೆ ಕೊಡಲು ಸಾಕಷ್ಟು ಪ್ರಯತ್ನಿಸಲಾಗುತ್ತಿದೆ. ಇದನ್ನು ರೈತ ಬಾಂಧವರು ಮನವರಿಕೆ ಮಾಡಿಕೊಳ್ಳಬೇಕಾಗಿ ಕೋರುತ್ತೇವೆ ಎಂದರು.
ಯಾರಾದರೂ ಜವಾಬ್ದಾರಿ ತೆಗೆದುಕೊಂಡು ಕಾರ್ಖಾನೆ ಪ್ರಾರಂಭಿಸಲು ತಯಾರಾಗಿದ್ದರೆ, ನಮಗೆ ಮನವರಿಕೆ ಮಾಡಿಕೊಟ್ಟಲ್ಲಿ ಆಡಳಿತ ಮಂಡಳಿಯವರು ರಾಜೀನಾಮೆ ಸಲ್ಲಿಸಲು ಬದ್ದರಾಗಿರುತ್ತೇವೆ ಎಂದು ಜಂಟಿಯಾಗಿ ತಿಳಿಸಿದ್ದಾರೆ.