ಕ್ರೇಜಿಸ್ಟಾರ್‌ ರವಿಚಂದ್ರನ್‌ 63ನೇ ವರ್ಷದ ಹುಟ್ಟುಹಬ್ಬಕ್ಕೆ ಶುಭ ಕೋರಿದ ಅಭಿಮಾನಿಗಳು

KannadaprabhaNewsNetwork |  
Published : Jun 03, 2024, 12:32 AM IST
38 | Kannada Prabha

ಸಾರಾಂಶ

ಕ್ರೇಜಿಸ್ಟಾರ್ ಡಾ.ವಿ. ರವಿಚಂದ್ರನ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗಿನಿಂದ ಪ್ರಥಮವಾಗಿ ಸ್ಥಾಪಿತವಾದ ಅಭಿಮಾನಿಗಳ ಸಂಘ ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘವಾಗಿದ್ದು, ಕಳೆದ 31 ವರ್ಷಗಳಿಂದ ಮನರಂಜನೆ ಸೇರಿದಂತೆ ಶೈಕ್ಷಣಿಕ ಧಾರ್ಮಿಕ ಆರೋಗ್ಯ ಸಾಮಾಜಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಚಿತ್ರನಟ ಕ್ರೇಜಿಸ್ಟಾರ್ ರವಿಚಂದ್ರನ್ ಹುಟ್ಟುಹಬ್ಬದಂದು ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘದ ಮೈಸೂರು ಜಿಲ್ಲಾ ಪದಾಧಿಕಾರಿಗಳು ರಾಜ್ಯಾಧ್ಯಕ್ಷರಾದ ಜೆ.ಕೆ. ಮೋಹನ್ ಅವರ ನೇತೃತ್ವದಲ್ಲಿ ಬೆಂಗಳೂರಿನ ರಾಜಾಜಿನಗರದ ರವಿಕಲಾ ನಿವಾಸದಲ್ಲಿ ಕ್ರೇಜಿಸ್ಟಾರ್ ಅವರನ್ನು ಭೇಟಿ ಮಾಡಿ 63ನೇ ವರ್ಷದ ಹುಟ್ಟುಹಬ್ಬದ ಶುಭ ಕೋರಿದರು.

ಈ ವೇಳೆ ಅಭಿಮಾನಿ ಸಂಘದ ಪದಾಧಿಕಾರಿಗಳು ಹಾಗೂ ದೂರದ ಊರುಗಳಿಂದ ಆಗಮಿಸಿದ್ದ ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಕ್ರೇಜಿಸ್ಟಾರ್ ತಮ್ಮ ಫ್ಯಾನ್ಸ್ ಗಳಿಗೆ ಸೆಲ್ಫಿ ನೀಡುವ ಮೂಲಕ ಸಂತಸ ಹಂಚಿಕೊಂಡರು, ಕ್ರೇಜಿಸ್ಟಾರ್ ನಟನೆಯ ಜಡ್ಜ್ ಮೆಂಟ್ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವುದು ಈ ಬಾರಿಯ ಹುಟ್ಟು ಹಬ್ಬದ ಸಂತೋಷವನ್ನು ಮತ್ತಷ್ಟು ಇಮ್ಮಡಿಗೊಳಿಸಿತ್ತು.

ಈ ವೇಳೆ ರಾಜ್ಯಾಧ್ಯಕ್ಷ ಜೆ.ಕೆ. ಮೋಹನ್ ಮಾತನಾಡಿ, ಕ್ರೇಜಿಸ್ಟಾರ್ ಡಾ.ವಿ. ರವಿಚಂದ್ರನ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗಿನಿಂದ ಪ್ರಥಮವಾಗಿ ಸ್ಥಾಪಿತವಾದ ಅಭಿಮಾನಿಗಳ ಸಂಘ ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘವಾಗಿದ್ದು, ಕಳೆದ 31 ವರ್ಷಗಳಿಂದ ಮನರಂಜನೆ ಸೇರಿದಂತೆ ಶೈಕ್ಷಣಿಕ ಧಾರ್ಮಿಕ ಆರೋಗ್ಯ ಸಾಮಾಜಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ ಎಂದರು.

ಮೈಸೂರು ಜಿಲ್ಲಾಧ್ಯಕ್ಷ ಸತೀಶ್ ಆರಾಧ್ಯ ಮಾತನಾಡಿ, ಚಿತ್ರನಟರ ಅಭಿಮಾನಿ ಸಂಘ ಕೇವಲ ಮನರಂಜನೆಗೆ ಸೀಮಿತವಾಗದೆ ಕಳೆದ ಮೂರು ದಶಕಗಳಿಂದ ರಾಜ್ಯಾಧ್ಯಕ್ಷ ಜೆ.ಕೆ. ಮೋಹನ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಬಿ. ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ಶೈಕ್ಷಣಿಕ ಆರೋಗ್ಯ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜನ ಮನ್ನಣೆ ಗಳಿಸಿದೆ, ಇತ್ತೀಚೆಗೆ ತೆರೆಕಂಡ ಜಡ್ಜ್ ಮೆಂಟ್ ಚಿತ್ರದಲ್ಲಿ ವಕೀಲ ಪಾತ್ರದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ, ಮುಂದಿನ ದಿನಗಳಲ್ಲಿ ಅವರಿಂದ ಮತ್ತಷ್ಟು ಹೊಸತನದ ಚಿತ್ರಗಳು ಮೂಡಿಬಂದು ಸಾಮಾಜಿಕ ಸಂದೇಶಗಳ ಮೂಲಕ ಜನಪ್ರಿಯವಾಗಲಿ ಎಂದರು.

ಈ ವೇಳೆ ಕ್ರೇಜಿಸ್ಟಾರ್ ಅವರಿಗೆ ಬೃಹತಾಕಾರದ ಗುಲಾಬಿ ಹೂವಿನ ಹಾರ ಹಾಕಿ, ನೆನಪಿನ ಕಾಣಿಕೆ ನೀಡುವ ಮೂಲಕ ಶುಭ ಕೋರಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಚಂದ್ರಶೇಖರ್, ದಾವಣಗೆರೆ ಜಿಲ್ಲಾಧ್ಯಕ್ಷ ಎಂ. ಮನು, ರಾಜ್ಯ ಪದಾಧಿಕಾರಿಗಳಾದ ಡಾ. ಶಿವಕುಮಾರ್, ಶಂಕರ್, ಚೌಡಾಚಾರಿ, ಬೆಕ್ಕರೆ ನಾಗೇಂದ್ರ, ಮೈಸೂರು ಮಂಜು, ರಾಣೆಬೆನ್ನೂರು ಮನೋಜ್ ಇದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌