ಕನ್ನಡಪ್ರಭ ವಾರ್ತೆ ಮೈಸೂರು
ಉದಯಗಿರಿಯ ಘಟನೆಗೆ ಕಾರಣನಾದ ವ್ಯಕ್ತಿಯನ್ನು, ಬಂಧಿಸಿ ಉದಯಗಿರಿ ಪೊಲೀಸ್ ಠಾಣೆಯಲ್ಲೇಕೆ ಇಡಬೇಕಿತ್ತು? ಉದಯಗಿರಿ ಪ್ರದೇಶ ಮುಸ್ಲಿಮರು ಹೆಚ್ಚಾಗಿರುವ ಸ್ಥಳ. ಪೊಲೀಸರಿಗೆ ಉದಯಗಿರಿ ಠಾಣೆ ಬದಲು ಬೇರೆ ಠಾಣೆಯಲ್ಲಿ ಇಡಲು ಏನಾಗಿತ್ತು? ಅಷ್ಟು ಕಾಮನ್ ಸೆನ್ಸ್ ಇಲ್ಲವೇ ಎಂದು ಬಡಬಡಿಸಿದ್ದಾರೆ!
ಕೆಲಸಕ್ಕೆ ಬಾರದವರು, ದಾರಿಹೋಕರಿಗೂ ಗೊತ್ತಿರುವಂತಹ ಪ್ರಾಥಮಿಕ ವಿಚಾರ ದೊಡ್ಡ ದೊಡ್ಡ ಬ್ಯಾಡ್ಜ್ ಹಾಕಿಕೊಂಡು ಹಿಂದೆ-ಮುಂದೆ ಹತ್ತಾರು ಸಿಬ್ಬಂದಿಗಳನ್ನು ಇಟ್ಟುಕೊಂಡು ಓಡಾಡುತ್ತಿರುವ ಪೊಲೀಸರಿಗೆ ಗೊತ್ತಾಗದೇ ಇರುವುದು ವಿಷಾದಕರ ಎಂದೂ ರಾಜಣ್ಣ ಗುಡುಗಿದ್ದಾರೆ!ರಾಜಣ್ಣ ಅವರು ರಾಜ್ಯದ ಗೃಹಮಂತ್ರಿ ಅಲ್ಲ. ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರೂ ಅಲ್ಲ!
ಗಲಭೆಕೋರರನ್ನು ಉದಯಗಿರಿ ಠಾಣೆಯಲ್ಲಿರುವ ಬದಲು ಬೇರೆ ಠಾಣೆಯಲ್ಲಿರಿಸಬೇಕಿತ್ತು ಎಂಬುದು ಕಾಮನ್ ಸೆನ್ಸ್ ಅಲ್ಲ ನಾನ್ ಸೆನ್ಸ್!
ಈ ಗಲಭೆಯ ವಿಚಾರವಾಗಿ ಮೈಸೂರಿನ ಉದಯಗಿರಿ ವ್ಯಾಪ್ತಿಯಲ್ಲಿ ಮತ್ತೊಂದು ಪೊಲೀಸ್ ಠಾಣೆ ಸ್ಥಾಪಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಅವರೂ ತಿಳಿಸಿದ್ದಾರೆ.
ಪೊಲೀಸರು ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿದು ಅಪಹಾಸ್ಯಕ್ಕೀಡಾಗುವ ಬದಲಾಗಿ ನ್ಯಾಯಾಲಯದ ಆದೇಶ, ತೀರ್ಪು, ಆಜ್ಞೆ ಹಾಗೂ ನಿರ್ದೇಶನಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಿದರೆ ಸಮಾಜದಲ್ಲಿ ಕಾನೂನು ಮತ್ತು ಸುವ್ಯಸ್ಥೆ ತನ್ನಿಂದ ತಾನೇ ಸುಧಾರಿಸುತ್ತದೆ.
ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯು ವಿದ್ಯಾರಣ್ಯಪುರದಲ್ಲಿಲ್ಲ.ಅದು ಜೆ.ಪಿ. ನಗರದಲ್ಲಿದೆ. ಜಯಲಕ್ಷ್ಮೀ ಪುರಂ ಪೊಲೀಸ್ ಠಾಣೆಯು ಜಯಲಕ್ಷ್ಮೀಪುರಂನಲ್ಲಿಲ್ಲ. ಅದು ವಿಜಯನಗರದಲ್ಲಿದೆ. ಬಹುಶಃ ರಾಜಣ್ಣನಂತಹವರ ಕಾಮನ್ ಸೆನ್ಸ್ ಮಾತುಗಳಿಗೆ ಇದೇ ಸ್ಫೂರ್ತಿಯಾಗಿರಬಹುದು.