ಕನ್ನಡಪ್ರಭ ವಾರ್ತೆ ಮಧುಗಿರಿ
ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ಕೆ.ಎನ್.ರಾಜಣ್ಣ ಅವರನ್ನು ಸಂಪುಟದಿಂದ ಕೈ ಬಿಟ್ಟಿರುವ ಕ್ರಮ ಖಂಡಿಸಿ ಕೊಡಿಗೇನಹಳ್ಳಿ ಹೋಬಳಿ ಕಾಂಗ್ರೆಸ್ ಕಾರ್ಯಕರ್ತರು, ದಲಿತಪರ , ಕನ್ನಡಪರ ಸಂಘಟನೆಗಳು, ಕೆಎನ್‌ಆರ್, ಮತ್ತು ಆರ್ ಆರ್ ಅಭಿಮಾನಿಗಳಿಂದ ಕೊಡಿಗೇನಹಳ್ಳಿಯಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.ಶಾಸಕ ಕೆ.ಎನ್.ರಾಜಣ್ಣ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಮಹಿಳೆಯರು,ಮುಖಂಡರು, ಹಾಗೂ ಅಭಿಮಾನಿಗಳು ರಾಜಣ್ಣ ಅವರ ಪೋಟೋ ಕೈಯಲ್ಲಿ ಹಿಡಿದು ಜೈ ಘೋಷಣೆ ಕೂಗುತ್ತಾ ಒಕ್ಕೂರಲಿನಿಂದ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಎಚ್.ಎಂ.ಆರ್.ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಕೆ.ಎನ್.ರಾಜಣ್ಣ ದೊಡ್ಡ ಶಕ್ತಿ, ಅವರು ಮನಸ್ಸು ಮಾಡಿದರೆ ಯಾವ ರಾಜಕೀಯ ಪಕ್ಷವನ್ನಾದರೂ ಸೋಲಿಸುವ, ಗೆದಿಸುವ ಸಾಮರ್ಥ್ಯ ಹೊಂದಿದ್ದು, ಅಂತಹ ರಾಜಣ್ಣರನ್ನು ಏಕಾಏಕಿ ಸಚಿವ ಸಂಪುಟದಿಂದ ವಜಾ ಮಾಡಿರುವುದು ಖಂಡನಾರ್ಹ. ಈ ಕೂಡಲೇ ಹೈಕಮಾಂಡ್ ಈ ವಿಚಾರದಲ್ಲಿ ಮತ್ತೆ ಪುನರ್ ಪರಿಶೀಲಿಸಿ ಅಹಿಂದ ನಾಯಕರಾದ ರಾಜಣ್ಣ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಇಲ್ಲದಿದ್ದರೆ ಕಾಂಗ್ರೆಸ್‌ಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಾಯಣರೆಡ್ಡಿ ಮಾತನಾಡಿ, ಎಲ್ಲ ಜಾತಿಯ ಬಡವರ,ರೈತರ ಹಾಗೂ ಕೂಲಿಕಾರ್ಮಿಕರ ಪರವಾಗಿ ಧ್ವನಿ ಎತ್ತುವ ಏಕೈಕ ವ್ಯಕ್ತಿ ರಾಜಣ್ಣ. ಇಂತಹ ವ್ಯಕ್ತಿಯನ್ನು ಸಂಪುಟಕ್ಕೆ ಕೂಡಲೇ ಸೇರಿಸಿಕೊಳ್ಲಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ತಾಲೂಕು ಒಬಿಸಿ ಘಟಕದ ಅಧ್ಯಕ್ಷ ಸಂಜೀವಗೌಡ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆದಿಸುವ ಶಕ್ತಿ ರಾಜಣ್ಣ ಅವರಿಗಿದೆ. ಆದ ಕಾರಣ ಹೈಕಮಾಂಡ್ ಇದನ್ನು ಪುನರ್ ಪರಿಶೀಲಿಸಿ ಸಚಿವ ಸಂಪುಟಕ್ಕೆ ಸೇರಿಸುವ ಮೂಲಕ ಪಕ್ಷ ಬಲ ಪಡಿಸಲು ಮುಂದಾಗುವಂತೆ ಒತ್ತಾಯಿಸಿದರು.ಕಡಗತ್ತೂರು ವಿಎಸ್‌ಎಸ್‌ಎನ್ ಅಧ್ಯಕ್ಷ ಮಾತನಾಡಿ, ಸದಾ ರೈತರ,ದೀನ ದಲಿತರ ಹಾಗೂ ಅಭಿವೃದ್ಧಿಗೆ ಬದ್ದರಾಗಿ ಕೆಲಸ ಮಾಡುವ ರಾಜಣ್ಣ ಅವರನ್ನು ಸಂಪುಟದಿಂದ ಕೈ ಬಿಟ್ಟಿರುವುದು ಸರಿಯಲ್ಲ,ಮತ್ತೆ ಮಂತಿರ ಮಾಡಬೇಕು ಎಂದು ಆಗ್ರಹಿಸಿದರು.
ಮಾಜಿ ಅಧ್ಯಕ್ಷ ಭಾಸ್ಕರ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ರಾಜಣ್ಣ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ನ್ಯಾಯ ದೊರಕಿಸಿಕೊಡಬೇಕು ಎಂದರು. ಪ್ರತಿಭಟನಾಕಾರರು ಶ್ರೀದೇವಿ ಸರ್ಕಲ್‌ನಲ್ಲಿ ಸಮಾವೇಶಗೊಂಡು ಪ್ರಮುಖ ಬೀದಿಗಳಲ್ಲಿ ಬೃಹತ್ ಪ್ರತಿಭಟನೆ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ನಂತರ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.ತುಮುಲ್ ನಿರ್ದೇಶಕ ಬಿ.ನಾಗೇಶ್‌ಬಾಬು, ಮುಖಂಡರಾದ ಕಾಂತರಾಜು, ಶಾಮೀರ್ ಅಹಮದ್, ಜಿ.ಡಿ.ವೆಂಕಟೇಶ್, ಮಾಜಿ ಅಧ್ಯಕ್ಷ ಕೆ.ವಿ.ವೆಂಕಟೇಶ್, ರಂಗನಾಥ್, ಮುಕ್ತಿಯಾರ್, ಕಷ್ಣ, ನಾಸೀರ್, ಜಬಿವುಲ್ಲಾ, ಮಾರುತಿ, ನರಸಿಂಹಯ್ಯ ಇತರರಿದ್ದರು.