ಕಾರ್ಕಳ: ಕಾರ್ಕಳದ ಜೋಡುರಸ್ತೆಯಲ್ಲಿರುವ ರಾಜಪುರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಹಾಗೂ ರಾಜಪುರ ಸಾರಸ್ವತ ಎಜುಕೇಷನ್ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಭಾನುವಾರ ಸಾರಸ್ವತ ಸೌಧ ಸಭಾಂಗಣದಲ್ಲಿ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ನಡೆಯಿತು.
ಅಧ್ಯಕ್ಷತೆ ವಹಿಸಿದ ರಾಜ್ಯ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಕಡಾರಿ ರವೀಂದ್ರ ಪ್ರಭು ಮಾತನಾಡಿ, ಸೊಸೈಟಿ ಸಮಾಜಮುಖಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದು, ಕಳೆದ ಕೆಲವು ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಒಂದು ಕೋಟಿ ರು.ಗೂ ಮಿಕ್ಕಿ ವಿದ್ಯಾರ್ಥಿವೇತನ ಹಾಗೂ 80 ಲಕ್ಷಕ್ಕೂ ಹೆಚ್ಚು ಸಹಾಯಧನ ವಿತರಿಸಿದೆ ಎಂದು ತಿಳಿಸಿದರು. ಆರೋಗ್ಯ ಸಮಸ್ಯೆಗಳಿಂದ ಬಳಲಿದವರಿಗೆ 11.5 ಲಕ್ಷ ರೂ. ಸಹಾಯ ನೀಡಲಾಗಿದ್ದು, ಒಟ್ಟಾರೆ 2.5 ಕೋಟಿ ರು.ಗೂ ಹೆಚ್ಚು ಹಣವನ್ನು ಸಮಾಜಮುಖಿ ಯೋಜನೆಗಳಿಗೆ ಬಳಸಲಾಗಿದೆ ಎಂದರು.ವಿದ್ಯಾರ್ಥಿಗಳು ಸ್ವಾವಲಂಬಿಗಳಾದ ಬಳಿಕ ಸಮಾಜಕ್ಕೆ ಮರಳಿ ಸೇವೆ ಸಲ್ಲಿಸಬೇಕು ಎಂದು ಸಲಹೆ ನೀಡಿದ ಅವರು, ಈ ಕಾಲ ವಿದ್ಯಾರ್ಥಿಗಳಿಗಾಗಿ ಸ್ವರ್ಣಯುಗವಾಗಿದ್ದು, ಕಾಲೇಜು ಕ್ಯಾಂಪಸ್ ನೇಮಕಾತಿಗಳ ಮೂಲಕ ಉತ್ತಮ ಉದ್ಯೋಗಗಳ ಅವಕಾಶ ಹೆಚ್ಚಾಗಿದೆ ಎಂದರು.ಸೊಸೈಟಿಯಲ್ಲಿ 5,300ಕ್ಕೂ ಹೆಚ್ಚು ಸದಸ್ಯರಿರುವುದು ಹೆಮ್ಮೆ ಎಂದ ಅವರು, ಮೇ ತಿಂಗಳಲ್ಲಿ ಅತ್ಯಾಧುನಿಕ ಬೃಹತ್ ಸಂಕೀರ್ಣದ ಉದ್ಘಾಟನೆ ನಡೆಯಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಗಣ್ಯರಿಗೆ ಆಹ್ವಾನ ನೀಡಲಾಗುತ್ತಿದೆ ಎಂದರು.ಪುಂಡಲೀಕ ನಾಯಕ್ ಮಾತನಾಡಿ, ಶಿಕ್ಷಣ ಪೂರ್ಣಗೊಳಿಸಿ ಉತ್ತಮ ಉದ್ಯೋಗ ಪಡೆಯುವ ತನಕ ಹಠಮಾರಿ ಪರಿಶ್ರಮ ಮುಂದುವರಿಸಬೇಕು ಎಂದರು.
ಟ್ರಸ್ಟ್ ಕಾರ್ಯದರ್ಶಿ ಸರ್ವೋತಮ್ ಸಾಲ್ವಣ್ಕರ್ ಈ ಬಾರಿ ಟ್ರಸ್ಟ್ ವತಿಯಿಂದ 33 ವಿದ್ಯಾರ್ಥಿಗಳಿಗೆ ಒಟ್ಟು ರು. 2,77,000 ವಿದ್ಯಾರ್ಥಿವೇತನ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.ನಿವೃತ್ತ ಪ್ರಾಂಶುಪಾಲ ಗೋವಿಂದ ಪ್ರಭು, ಟ್ರಸ್ಟಿಗಳು ಮಾರ್ಲಿ ಕೊರಗಪ್ಪ ನಾಯಕ್, ಬಾಲಕೃಷ್ಣ ಬೊರ್ಕರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.ಸೊಸೈಟಿ, ಟ್ರಸ್ಟ್, ಸಿಬ್ಬಂದಿ, ಸಮಾಜಬಂಧುಗಳು ಹಾಗೂ ಅಭಿಮಾನಿಗಳ ಸಹಯೋಗದಿಂದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕಡಾರಿ ರವೀಂದ್ರ ಪ್ರಭು ದಂಪತಿ ಮತ್ತು ಕವಯತ್ರಿ ಡಾ. ಸುಮತಿ ಆರ್. ಪ್ರಭು ಅವರನ್ನು ಸನ್ಮಾನಿಸಲಾಯಿತು.ಸೊಸೈಟಿ ನಿರ್ದೇಶಕ ಹರೀಶ್ ನಾಯಕ್ ಅಜೆಕಾರು ನಿರೂಪಿಸಿದರು.