ಕನ್ನಡಪ್ರಭ ವಾರ್ತೆ ಮೈಸೂರು
ಮಾನಸ ಗಂಗೋತ್ರಿಯ ಇಎಂಆರ್‌ಸಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಐತಿಚಂಡ ರಮೇಶ್ ಉತ್ತಪ್ಪ, ಕೆ.ನರಸಿಂಹಮೂರ್ತಿ, ಗಿರೀಶ್ ಹುಣಸೂರು, ಎಂ.ಟಿ.ಮಹದೇವ, ಆರ್.ವಿರೇಂದ್ರ ಪ್ರಸಾದ್, ಶೇಖರ್ ಗೋಪಿನಾಥಂ, ಎಂ.ಬಿ.ಪವನಮೂರ್ತಿ, ಪತ್ರಿಕಾ ಛಾಯಾಗ್ರಾಹಕ ಕೆ.ಎಚ್. ಚಂದ್ರು, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಪಿ.ಶಿವರಾಜು ಅವರಿಗೆ ರಾಜಶೇಖರ ಕೋಟಿ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮತ್ತೊರ್ವ ಪ್ರಶಸ್ತಿ ಪುರಸ್ಕೃತ ಎಂ.ಆರ್. ಸತ್ಯನಾರಾಯಣ ಗೈರಾಗಿದ್ದರು.
ಇದೇ ಸಂದರ್ಭದಲ್ಲಿ ಯುವರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಕೆ.ಮಹೇಶ್, ಪ್ರಧಾನ ಅರ್ಚಕ ಲಕ್ಷ್ಮೀಶ್ ಶರ್ಮ, ಮೈಸೂರು ವಿವಿಯಿಂದ ಚಿನ್ನದ ಪದಕ ಪಡೆದ ಎಂ.ಆರ್.ಭೂಮಿಕಾ, ಯು.ಎ.ಕಾವ್ಯಶ್ರೀ, ಪಿ.ಕೆ.ಸಂಗೀತಾ, ಎನ್.ಹರ್ಷಿತ್, ಶ್ರೀನಿವಾಸ್, ಸ್ಪೂರ್ತಿ ಮಹೇಶ್, ಬಸಮ್ಮ ಮ್ಯಾಧೂಡ್, ಎ.ಎನ್.ಸುಮತಿ, ಆರ್.ದೇವಾನಂದ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಾದ ಎನ್.ರಕ್ಷಿತಾ, ಯು.ಲಿಖಿತಶ್ರೀ, ನಿರ್ಮತ ಮಹೇಶ್, ಎಸ್.ಭೂಮಿಕಾ, ಎ.ಎಸ್.ಪ್ರಾರ್ಥನಾ, ಲಿಖಿತ ಶಿವಕುಮಾರಸ್ವಾಮಿ, ಎಸ್.ವರುಣ್ ಅವರನ್ನು ಮೈಸೂರು ಪೇಟ ಮತ್ತು ಶಾಲು ಹೊದಿಸಿ ಸ್ಮರಣಿಕೆ ನೀಡಿ, ಅಭಿನಂದಿಸಲಾಯಿತು.ನವ ವಿಶ್ವಮಾನವ ಟ್ರಸ್ಟ್ ಉದ್ಘಾಟಿಸಿದ ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ವಿಶ್ವಮಾನವ ಹೆಸರಿಗೆ ಚ್ಯುತಿ ಬರದಂತೆ ವಿಶ್ವಮಾನವ ಮೈಸೂರು ವಿಶ್ವ ವಿದ್ಯಾನಿಲಯದ ನೌಕರರ ವೇದಿಕೆ ಕಾರ್ಯನಿರ್ವಹಿಸುತ್ತಿವೆ. ಮೈಸೂರು ವಿವಿ ಇರುವವರೆಗೂ ವೇದಿಕೆ ಅಸ್ತಿತ್ವದಲ್ಲಿದ್ದು, ಸಮಾಜ ಮುಖಿ ಕೆಲಸ ಮಾಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಮಾಕತನಾಡಿ, ಮನುಷ್ಯರ ಹುಟ್ಟು ಆಕಸ್ಮಿಕ. ಆದರೆ, ಜೀವನವನ್ನು ಸಾರ್ಥಕ ಮಾಡಿ ಸಾಧನೆ ಮಾಡದರೆ ಸಾರ್ಥಕವಾಗಲಿದೆ ಎಂದರು.
‘ಆಂದೋಲನ’ ದಿನ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ರಶ್ಮಿ ಕೋಟಿ ಮಾತನಾಡಿ, ಪತ್ರಿಕೋದ್ಯಮ ಉದ್ಯೋಗವಷ್ಟೇ ಅಲ್ಲ. ಸಮಾಜಕ್ಕೆ ಧ್ವನಿಯಾಗಿ ದೊಡ್ಡ ಜವಾಬ್ದಾರಿ ಹೊಂದಿದೆ. ಪ್ರತಿಕೋದ್ಯಮ ಸತ್ಯ, ನ್ಯಾಯ ಪರ ನಿಲ್ಲಬೇಕು. ಕೇವಲ ಸುದ್ದಿ ಪ್ರಕಟಿಸುವ ಮಾಧ್ಯಮವಾಗಬಾರದು. ಸಮಾಜ ಕನ್ನಡಿಯಾಗಬೇಕು ಎಂದು ಹೇಳಿದರು.
ತ್ವರಿತ ಸುದ್ದಿ ಪ್ರವಾಹದಲ್ಲಿ ಸ್ಪರ್ಧೆಯಲ್ಲಿ ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ. ಇವು ಜನರ ಭಾವನೆಗೆ ತೀವ್ರ ಪ್ರಭಾವ ಬೀರುತ್ತಿವೆ. ಇತ್ತೀಚೆಗೆ ನಡೆದ ಉದಯಗಿರಿಯ ಪ್ರಕರಣ ಇದಕ್ಕೆ ಸಾಕ್ಷಿ. ಸಾಮಾಜಿಕ ಜಾಲತಾಣಗಳಲ್ಲಿ ಕೋಮುಗಲಭೆ ಸೃಷ್ಟಿಸುವ ಸುದ್ದಿಗಳು ಹರಿದಾಡಿದವು. ಆದರೆ, ಪತ್ರಿಕೆಗಳು ಜವಾಬ್ದಾರಿಯುತವಾಗಿ ಘಟನೆಯ ವರದಿ ಪ್ರಕಟಿಸಿ ಕೋಮು ಗಲಭೆಯಾಗದಂತೆ ಕಾರ್ಯನಿರ್ವಹಿಸಿದವು ಎಂದು ಅವರು ಹೇಳಿದರು.
ಪತ್ರಕರ್ತರಾಗುವುದು ಸುಲಭದ ವಿಷಯವಲ್ಲ. ನಿಂದನೆ, ಬೆದರಿಕೆ, ತೀವ್ರವಾದ ಅವಮಾನವನ್ನು ಎದುರಿಸಬೇಕಾಗುತ್ತದೆ. ಅದು ಹಿಂದಿಗಿಂತಲೂ ಇಂದು ಹೆಚ್ಚಾಗಿದೆ. ಪತ್ರಕರ್ತ ಮೇಲಿನ ಹಲ್ಲೆ, ವರದಿಗಳ ಮೇಲೆ ನಡೆಯುತ್ತಿರುವ ಟ್ರೋಲ್‌ಗಳು, ನಕಲಿ ಪ್ರಕರಣಗಳು ಗಾಬರಿ ಹುಟ್ಟಿಸುತ್ತಿವೆ. ಪತ್ರಿಕೆ ಸ್ವಾತಂತ್ರ್ಯವನ್ನು ಹರಣ ಮಾಡಲಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು, ಒಕ್ಕೊರಲಿನಿಂದ ಪ್ರತಿಭಟಿಸಬೇಕು ಎಂದರು.
ಪ್ರಶಸ್ತಿ ಸ್ವೀಕರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜ್ ಮಾತನಾಡಿ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಭಾಷೆಯಲ್ಲಿ ಪಿಎಚ್.ಡಿ ಪದವಿ ಪಡೆದ ಕಾರಣ ನನ್ನನ್ನು ಇಂದು ಸನ್ಮಾನಿಸಿ ವಿದ್ಯೆಗೆ ಘನತೆ ಮತ್ತು ಅಭಿಮಾನವನ್ನು ತೋರಿದ್ದಾರೆ. ಪತ್ರಕರ್ತರೊಂದಿಗೆ ನನಗೆ ಸನ್ಮಾನವಾಗಿದ್ದು, ಸಂತಸ ತಂದಿದೆ ಎಂದರು.
ಮೈಸೂರು ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ಕೆ.ಎಸ್.ರೇಖಾ ಮಾತನಾಡಿ, ಯುವ ಸಮೂಹವನ್ನು ಒಳ್ಳೆಯ ದಾರಿಯೆಡೆಗೆ ಕಂಡ್ಯೊಯುವ ಜವಾಬ್ದಾರಿ ಪತ್ರಿಕೋದ್ಯಮದ ಮೇಲೆ ಇದೆ. ಆದರೆ, ಇಂದು ಪತ್ರಿಕೋದ್ಯಮದ ಆಯಾಮ ಬದಲಾವಣೆ ಆಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳ ಸತ್ಯಾತ್ಯತೆಗಳನ್ನು ಪರಿಷ್ಕರಣೆ ಮಾಡಬೇಕಿದೆ. ದೇಶದ ಪ್ರಗತಿಗೆ ಪೂರಕವಾದ ವರದಿಗಳನ್ನು ಪ್ರಕಟಿಸಿ ವಿದ್ಯಾರ್ಥಿಗಳನ್ನು ಸರಿದಾರಿಗೆ ಕರೆದ್ಯೊಯಬೇಕು ಕೆಲಸ ಪತ್ರಿಕೋದ್ಯಮ ಮಾಡಬೇಕು ಎಂದರು.
ಶ್ರೀನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಡಾ.ಎಸ್. ಶಿವರಾಜಪ್ಪ, ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್, ಕೆ. ನರಸಿಂಹಮೂರ್ತಿ, ಸಮಾಜ ಕಾರ್ಯವಿಭಾಗದ ಪ್ರಾಧ್ಯಾಪಕಿ ಡಾ.ಎಚ್.ಪಿ. ಜ್ಯೋತಿ ಮಾತನಾಡಿದರು. ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ಡಾ.ಎಂ.ಎಸ್.ಸಪ್ನಾ, ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆಯ ಅಧ್ಯಕ್ಷ ಆರ್.ವಾಸುದೇವ, ಉಪಾಧ್ಯಕ್ಷ ಭಾಸ್ಕರ್, ಕಾರ್ಯದರ್ಶಿ ಎಸ್.ವಿನೋದ್, ಖಜಾಂಚಿ ಕೆ.ಗಣೇಶ್, ಚೆಲುವಾಂಬಿಕೆ, ಡಾ,ಗಿರೀಶ್, ಹರೀಶ್ ಮೊದಲಾದವರು ಇದ್ದರು. ಡಾ. ಬಿ.ಎಸ್.ದಿನಮಣಿ ಸ್ವಾಗತಿಸಿದರು. ಮಂಜುನಾಥ್ ಸುಬೇದಾರ್ ನಿರೂಪಿಸಿ, ವಂದಿಸಿದರು. ಅಮ್ಮ ರಾಮಚಂದ್ರ ಗೀತಗಾಯನ ನಡೆಸಿಕೊಟ್ಟರು.