ಬಳ್ಳಾರಿ: ರಾಘವ ಮೆಮೋರಿಯಲ್ ಅಸೋಸಿಯೇಷನ್‌ನಿಂದ ಇಲ್ಲಿನ ರಾಘವ ಕಲಾಮಂದಿರದಲ್ಲಿ ಕಲಾಪ್ರಪೂರ್ಣ ಬಳ್ಳಾರಿ ರಾಘವರ 144ನೇ ಜಯಂತಿ ಸಮಾರಂಭ, ರಂಗಕರ್ಮಿ ರಾಜೇಂದ್ರ ಕಾರಂತ, ಆಂಧ್ರಪ್ರದೇಶದ ತಿರುಪತಿಯ ರಂಗಕಲಾವಿದ ಕೋನೇಟಿ ಸುಬ್ಬರಾಜು ಅವರಿಗೆ ರಾಜ್ಯಮಟ್ಟದ ಬಳ್ಳಾರಿ ರಾಘವ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಹಿರಿಯ ರಂಗ ಸಾಧಕರಿಗೆ ಪ್ರಶಸ್ತಿ ಪ್ರದಾನಿಸಿ ಮಾತನಾಡಿದ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಡಾ. ಮಂಜುಳಾ ಚೆಲ್ಲೂರು, ಬಳ್ಳಾರಿ ರಾಘವರು ತಮ್ಮ ಕಲಾ ಪ್ರತಿಭೆಯಿಂದ ಅಂತರಾಷ್ಟ್ರೀಯ ಮಟ್ಟದ ಗೌರವ ಪಡೆದ ಮಹನೀಯರು. ವೃತ್ತಿಯಲ್ಲಿ ವಕೀಲರಾಗಿದ್ದು, ಪ್ರವೃತ್ತಿಯಲ್ಲಿ ರಂಗಕರ್ಮಿಯಾಗಿ ಅನನ್ಯ ಸಾಧನೆ ಮಾಡಿ, ಬಳ್ಳಾರಿಯ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ರಾರಾಜಿಸುವಂತೆ ಮಾಡಿದ್ದಾರೆ. ಮಹಾತ್ಮಗಾಂಧಿ, ರವೀಂದ್ರನಾಥ ಟ್ಯಾಗೂರ್ ಅವರಂತಹ ಮಹನೀಯರು ರಾಘವರ ಕಲಾ ನೈಪುಣ್ಯತೆ ಕಂಡು ಬೆರಗಾಗಿದ್ದರು. ವಿದೇಶದಲ್ಲಿ ಅನೇಕ ನಾಟಕಗಳನ್ನು ಪ್ರದರ್ಶನ ನೀಡಿದ ರಾಘವರು, ಅಂತಾರಾಷ್ಟ್ರೀಯ ಮಟ್ಟದ ಕಲಾಸಾಧಕರಿಂದ ಸೈ ಎನಿಸಿಕೊಂಡ ಅಪರೂಪದ ನಟರಾಗಿದ್ದರು ಎಂದು ಸ್ಮರಿಸಿದರು.ರಂಗಭೂಮಿ ಆಧುನಿಕತೆ ಅಳವಡಿಸಿಕೊಂಡು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಬೇಕು. ಯುವ ಸಮುದಾಯ ರಂಗಭೂಮಿ ಕಡೆ ಒಲವು ತೋರಿಸಬೇಕು. ರಂಗ ಪರಂಪರೆ ಮುಂದುವರಿಸಲು ಈ ಕ್ಷೇತ್ರದಲ್ಲಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಆಂಧ್ರಪ್ರದೇಶ ಪಶ್ಚಿಮ ಗೋದಾವರಿ ಜಿಲ್ಲೆಯ ಅಂತಾರಾಷ್ಟ್ರೀಯ ಖ್ಯಾತ ಕಲಾವಿದ ವಾಡ್ರೇವು ಸುಂದರರಾವ್ ಬಳ್ಳಾರಿ ರಾಘವರ ಕಲಾ ಪ್ರತಿಭೆ ಸ್ಮರಿಸಿದರು.ಜಿಲ್ಲಾ ನ್ಯಾಯಾಧೀಶೆ ಕೆ.ಜೆ. ಶಾಂತಿ ಮಾತನಾಡಿದರು. ರಾಘವ ಮೆಮೋರಿಯಲ್ ಅಸೋಸಿಯೇಷನ್ ಅಧ್ಯಕ್ಷ ಕೆ. ಕೋಟೇಶ್ವರ ರಾವ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಕುಲಸಚಿವ ಎಸ್.ಎನ್. ರುದ್ರೇಶ್ ಮಾತನಾಡಿ, ಬಳ್ಳಾರಿ ವಿವಿಯಲ್ಲಿ ನಿರ್ಮಿಸುತ್ತಿರುವ ಬಯಲು ರಂಗಮಂದಿರಕ್ಕೆ ಬಳ್ಳಾರಿ ರಾಘವರ ಹೆಸರಿಡಲು ಶಿಫಾರಸು ಮಾಡುವುದಾಗಿ ಹೇಳಿದರು. ರಾಘವ ಮೆಮೋರಿಯಲ್ ಅಸೋಸಿಯೇಷನ್‌ನ ಗೌರವಾಧ್ಯಕ್ಷ ಕೆ. ಚನ್ನಪ್ಪ ಉಪಸ್ಥಿತರಿದ್ದರು.ಎರಡು ದಿನಗಳ ಕಾರ್ಯಕ್ರಮದಲ್ಲಿ ಮರಣ ಮೃದಂಗ ಕನ್ನಡ ಹಾಗೂ ನಾನ್ನಾ ನೇನು ವಚ್ಚೇಸ್ತಾ ತೆಲುಗು ನಾಟಕಗಳು ಪ್ರದರ್ಶನಗೊಂಡವು. ನಾಮ ಪ್ರಕಾಶ್, ಸಂಧ್ಯಾ ಕೋಲಚಲಂ, ಪಿ. ಧನುಂಜಯ, ಎನ್. ಶ್ರೀನಿವಾಸ ರೆಡ್ಡಿ, ರಮಣಪ್ಪ ಭಜಂತ್ರಿ ಕಾರ್ಯಕ್ರಮ ನಿರ್ವಹಿಸಿದರು.
ಸಮಾರಂಭ ಶುರು ಮುನ್ನ ರಾಘವರ ಜಯಂತಿ ಅಂಗವಾಗಿ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದಿಂದ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ರಾಘವ ಕಲಾಮಂದಿರದಿಂದ ಶುರುಗೊಂಡ ಮೆರವಣಿಗೆ ಗಡಗಿ ಚನ್ನಪ್ಪ ವೃತ್ತದಲ್ಲಿರುವ ರಾಘವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.ಕೆ. ಕೋಟೇಶ್ವರರಾವ್ ಮೆರವಣಿಗೆಗೆ ಚಾಲನೆ ನೀಡಿದರು. ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ, ಕಾರ್ಯದರ್ಶಿ ಎಚ್. ತಿಪ್ಪೇಸ್ವಾಮಿ ಮುದ್ದಟನೂರು, ರಂಗತೋರಣದ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್, ಅಡವಿಸ್ವಾಮಿ, ರಮಣಪ್ಪ ಭಜಂತ್ರಿ, ಸುಬ್ಬಣ್ಣ, ಮಂಜುನಾಥಗೋವಿಂದವಾಡ, ಕಪ್ಪಗಲ್ ಚಂದ್ರಶೇಖರ ಆಚಾರ್, ಪುಷ್ಪಲತಾ ಹಾಗೂ ನೂರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡರು.