ಕನ್ನಡಪ್ರಭ ವಾರ್ತೆ ಕಾರ್ಕಳ
ಕಾರ್ಕಳ ಪ್ರವಾಸೋದ್ಯಮಕ್ಕೆ ಆನೆಕೆರೆ ಬಸದಿಯು ಸೇರ್ಪಡೆಯಾಗುತ್ತಿದೆ. ಸಂಪೂರ್ಣ ಶಿಲಾಮಯಗೊಂಡಿದ್ದು ಪ್ರವಾಸಿಗರ ಗಮನ ಸೆಳೆಯುತ್ತದ್ದು ಈ ಬಸದಿಯು ಪ್ರೇಕ್ಷಣೀಯವಾದ ಯಾತ್ರಾ ಸ್ಥಳವಾಗಿದೆ ಎಂದು ಆನೆಕೆರೆ ಚತುರ್ಮುಖ ಕೆರೆಬಸದಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.ಅವರು ಕಾರ್ಕಳದ ಆನೆಕೆರೆಯ ಜೀರ್ಣೋದ್ಧಾರದ ಕಾರ್ಯಾಲಯದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಆಧುನಿಕತೆಯ ಸಲುವಾಗಿ ಶಿಲಾಮಯವಾಗಿ ಅದ್ಭುತವಾಗಿ ಕೆರೆ ಬಸದಿಯೂ ನಿರ್ಮಾಣವಾಗುತ್ತಿದೆ.
ಇತಿಹಾಸ ಪ್ರಸಿದ್ದ ಆನೆಕೆರೆ ಚತುರ್ಮುಖ ಕೆರೆ ಬಸದಿಯ ಧಾಮಸಂಪ್ರೋಕ್ಷಣಾಪೂರ್ವಕ ಜಿನಬಿಂಬ ಪ್ರತಿಷ್ಠಾಪನೆ ಮತ್ತು ಮೇಗಿನ ನೆಲೆಯ ಭಗವಾನ್ ೧೦೦೮ ಶ್ರೀ ಪಾರ್ಶ್ವನಾಥ ಸ್ವಾಮಿಯ ಪಂಚಕಲ್ಯಾಣ ಮಹೋತ್ಸವ ಜ.೧೮ರಿಂದ ೨೨ ರವರೆಗೆ ನಡೆಯಲಿದ್ದು ಪ್ರತೀ ದಿನ ಧಾರ್ಮಿಕ ಹಾಗೂ ಸಾಂಸ್ಕತಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ಮಾಹಿತಿಯನ್ನು ನೀಡಿದರು.ಕಾರ್ಯಾಧ್ಯಕ್ಷ ಮಹಾವೀರ ಹೆಗ್ಡೆ ಮಾತನಾಡಿ, ಈಗಾಗಲೇ ವಿವಿಧ ೨೩ ಸಮಿತಿಗಳನ್ನು ರಚಿಸಿಕೊಂಡು ತಯಾರಿ ನಡೆಯುತ್ತಿದೆ. ಜೀರ್ಣೋದ್ದಾರ ೧೦ ವರ್ಷಗಳ ಕನಸಾಗಿತ್ತು. ಬಸದಿಯ ಕಾಮಗಾರಿಗಳು ಅಂತಿಮ ಹಂತದಲ್ಲಿದೆ. ಪಂಚ ಕಲ್ಯಾಣ ಮಹೋತ್ಸವದ ಸಂದರ್ಭದಲ್ಲಿ ೬ ಕಡೆಗಳಲ್ಲಿ ಸುಮಾರು ೪ ಸಾವಿರ ವಾಹನಗಳನ್ನು ಪಾರ್ಕ್ ಮಾಡಬಹುದಾದ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಧಾರ್ಮಿಕ ಕಾರ್ಯಕ್ರಮ ಆನೆಕೆರೆ ಬಸದಿಯ ಹೊರಾಂಗಣದಲ್ಲಿ ನಡೆಯಲಿದ್ದು, ಸಭಾಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ದಾನಶಾಲೆಯ ಬಾಹುಬಲಿ ಪ್ರವಚನ ಮಂದಿರದ ಬಳಿಯ ಭೈರವ ಅರಸು ವೇದಿಕೆಯಲ್ಲಿ ನಡೆಯಲಿದೆ. ಊಟೋಪಚಾರದ ವ್ಯವಸ್ಥೆ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆಯಲಿದೆ ಎಂದರು.
ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ೩ ಕೋಟಿ ವೆಚ್ಚದಲ್ಲಿ ಬಸದಿಯ ಕೆಲಸಗಳು ನಡೆಯುತ್ತಿದೆ ಇನ್ನೂ ಕೂಡ ಒಂದಷ್ಟು ಅಭಿವೃದ್ದಿ ಕೆಲಸಗಳು ಆಗಬೇಕಾಗಿದೆ. ಜ.೧೮ ರಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಡೆ ವಹಿಸಲಿದ್ದಾರೆ. ಶಾಸಕ, ಮಾಜಿ ಸಚಿವ ವಿ. ಸುನಿಲ್ ಕುಮಾರ್ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಿದ್ದು, ಅತಿಥಿಗಳಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಉಸ್ತುವರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಡಿ.ಸುಧಾಕರ್, ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ. ಜ.೧೯, ೨೦ ರಂದು ವಿವಿಧ ಗಣ್ಯರ ಭಾಗವಹಿಸುವಿಕೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆಯಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಗೌರವ ಸಲಹೆಗಾರ ಎಂ.ಕೆ. ವಿಜಯ ಕುಮಾರ್, ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿ ಭರತ್ ಕುಮಾರ್ ಜೈನ್, ಕೋಶಾಧಿಕಾರಿ ಶೀತಲ್ ಜೈನ್ ಶಿರ್ಲಾಲು, ಉಪಾಧ್ಯಕ್ಷ ಮಹೇಂದ್ರವರ್ಮ ಜೈನ್, ಮೆರವಣಿಗೆ ಸಮಿತಿಯ ಸಂಚಾಲಕ ಸುನಿಲ್ ಕುಮಾರ್ ಬಜಗೋಳಿ ಮತ್ತಿತರರು ಹಾಜರಿದ್ದರು.