ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಜೆಎಸ್‌ಎಸ್ ಮಹಾವಿದ್ಯಾಪೀಠದಲ್ಲಿ ನಡೆದ ಜಗದ್ಗುರು ಡಾ.ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮಿಗಳ 110ನೇ ಜಯಂತಿಯಲ್ಲಿ ಮಾತನಾಡಿದ ಅವರು, ಮಹಾಕರುಣೆ ಯಾರಲ್ಲಿರುತ್ತದೆಯೋ ಅವರೇ ನಿಜವಾದ ಶರಣರು. ರಾಜೇಂದ್ರ ಶ್ರೀಗಳವರಲ್ಲಿದ್ದ ಕರುಣೆ ಎಂಬ ಮೂಲಗುಣವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ಸಮಾಜಸೇವೆಗೆ ತಾಳ್ಮೆ ಅತ್ಯಂತ ಅಗತ್ಯ. ಸೇವೆ ಎಂಬ ಪದಕ್ಕೆ ನಿಜಾರ್ಥದಲ್ಲಿ ಗೌರವ ತಂದುಕೊಟ್ಟವರು ರಾಜೇಂದ್ರ ಶ್ರೀಗಳವರು. ಸಮಾಜಸೇವೆಯನ್ನು ಒಂದು ವ್ರತವಾಗಿ ಅವರು ಪರಿಗಣಿಸಿದ್ದರು. ಸಮಾಜದಲ್ಲಿ ಎಲ್ಲರೂ ಚೆನ್ನಾಗಿರಬೇಕೆಂಬ ಮನೋಧರ್ಮವನ್ನು ಹೊಂದಿದ್ದರು. ಎಲ್ಲರನ್ನೂ ನಗುವಿನಿಂದಲೇ ಗೆಲ್ಲುತ್ತಿದ್ದರು. ಸಂತರಾದವರು ಲಾಭ-ನಷ್ಟಗಳಿಗೆ ಅತೀತರಾಗಿರಬೇಕೆಂಬ ನಿಟ್ಟಿನಲ್ಲಿ ಶ್ರೀಗಳು ದೇವರ ಸಮಾನವಾಗಿದ್ದರು ಎಂದರು.12ನೇ ಶತಮಾನದಲ್ಲಿ ಬಸವಾದಿ ಶರಣರು ಧರ್ಮವನ್ನು ಜನಕಲ್ಯಾಣಕ್ಕಾಗಿ, ಸಮಾಜದ ಉನ್ನತಿಗಾಗಿ ಬಳಸಿಕೊಂಡರು. ರಾಜೇಂದ್ರ ಶ್ರೀಗಳು ಧರ್ಮವನ್ನು ಸಮಾಜದ ಉನ್ನತಿಗಾಗಿ ಪ್ರಾಯೋಗಿಕವಾಗಿ ಬಳಸಿಕೊಂಡರು. ಎಲ್ಲರಿಗೂ ಸಂಸ್ಕಾರವನ್ನು ಹೇಳಿಕೊಟ್ಟರು. ಸಮಾಜದ ಬಗೆಗಿನ ಅವರ ಕಳಕಳಿ ತಾಯಿಯ ತ್ಯಾಗಕ್ಕೆ ಸಮನಾದುದು. ಅವರು ಇಲ್ಲದಿದ್ದರೆ, ಕರ್ನಾಟಕದ ಶೈಕ್ಷಣಿಕ ಮಟ್ಟ ಯಾವ ರೀತಿಯಲ್ಲಿರುತ್ತಿತ್ತು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ ಎಂದು ನುಡಿದರು.
ಇದೇ ವೇಳೆ ಜೆಎಸ್‌ಎಸ್ ಮಹಾವಿದ್ಯಾಪೀಠದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಎಂ.ವಿ. ಲಲಿತಾ ಮತ್ತು ಷಣ್ಮುಖ ಅವರನ್ನು ಸನ್ಮಾನಿಸಲಾಯಿತು.
ಗೀತಾ ತಂಡದವರು ಹಾಗೂ ಮಲ್ಲಿಕಾರ್ಜುನಸ್ವಾಮಿ ಪ್ರಾರ್ಥಿಸಿದರು. ಸಾಮಾನ್ಯ ಆಡಳಿತ ವಿಭಾಗದ ನಿರ್ದೇಶಕ ಶಂಕರಪ್ಪ ಸ್ವಾಗತಿಸಿದರು. ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ.ನಿರಂಜನಮೂರ್ತಿ ವಂದಿಸಿದರು. ಎ.ಎಂ. ಶಿವಪ್ರಕಾಶ್ ನಿರೂಪಿಸಿದರು.