ಕನ್ನಡಪ್ರಭ ವಾರ್ತೆ ಬೆಂಗಳೂರು‘ಅಮೃತ ಮಹೋತ್ಸವ’ ಯೋಜನೆಯ ಅಡಿಯಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳಲು ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ರಾಜೀವ್ ಗಾಂಧಿ ವಸತಿ ನಿಗಮದ ಖಾತೆಗೆ ಬಿಬಿಎಂಪಿ ಅಧಿಕಾರಿಗಳು 27.50 ಕೋಟಿ ರು.ಗಳಷ್ಟು ಬೃಹತ್ ಮೊತ್ತವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಲೋಕಾಯುಕ್ತ ಮತ್ತು ಬಿಬಿಎಂಪಿಗೆ ದೂರು ಸಲ್ಲಿಸಿದ್ದಾರೆ.
ಅಮೃತ ಮಹೋತ್ಸವ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಅನುದಾನವನ್ನು ಮಂಜೂರು ಮಾಡಲು ಕೆಲವೊಂದು ಅರ್ಹತೆ ಮತ್ತು ಷರತ್ತುಗಳು ಹಾಗೂ ಆಯ್ಕೆಯ ವಿಧಾನ ಮತ್ತು ಅನುಷ್ಠಾನದ ಕ್ರಮಗಳನ್ನು ಒಳಗೊಂಡ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಆದರೆ ಬಿಬಿಎಂಪಿ ಕಲ್ಯಾಣ ಇಲಾಖೆಯ ಪ್ರಭಾರಿ ಸಹಾಯಕ ಆಯುಕ್ತರಾಗಿದ್ದ ನಾಗಭೂಷಣ್ (ಪ್ರಸ್ತುತ ಮಹದೇವಪುರ ವಲಯದ ಕಲ್ಯಾಣ ಇಲಾಖೆಯ ಸಹಾಯಕ ಕಂದಾಯ ಅಧಿಕಾರಿ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ) ಎಂಬ ಅಧಿಕಾರಿಯು ಎಲ್ಲವನ್ನೂ ಉಲ್ಲಂಘಿಸಿ ಅಕ್ರಮವಾಗಿ ಹಣ ಬಿಡುಗಡೆ ಮಾಡಿದ್ದಾರೆ ಎಂದು ಅವರು ಆಪಾದಿಸಿದ್ದಾರೆ.-ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಫಲಾನುಭವಿಗಳನ್ನು ನಿಯಮಾನುಸಾರ ಆಯ್ಕೆ ಮಾಡದೆಯೇ ಅವರಿಗೆ ಬೇಕಾದ ರೀತಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿರುತ್ತಾರೆ. ರಾಜೀವ್ ಗಾಂಧಿ ವಸತಿ ನಿಗಮದಿಂದ ಸಲ್ಲಿಸಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ಒಟ್ಟು 550 ಅಭ್ಯರ್ಥಿಗಳು ಬಿಬಿಎಂಪಿಯ ಎಂಟು ವಲಯಗಳ ಕಲ್ಯಾಣ ಇಲಾಖೆಯ ಯಾವುದೇ ಕಚೇರಿಗಳಿಗೆ ಪಾಲಿಕೆಯ ಮಾರ್ಗಸೂಚಿಯಂತೆ ಅಗತ್ಯ ದಾಖಲೆಗಳೊಂದಿಗೆ ಪ್ರತ್ಯೇಕವಾಗಿ ಭೌತಿಕ ಅಥವಾ ಆನ್ ಲೈನ್ ಅರ್ಜಿಗಳನ್ನು ಸಲ್ಲಿಸಿಲ್ಲ.
ಅಭ್ಯರ್ಥಿಗಳು ಸಲ್ಲಿಸಲಾಗಿರುವ ಅರ್ಜಿಗಳ ದಾಖಲೆಗಳನ್ನು ಅವರು ಪ್ರಸ್ತುತ ವಾಸವಿರುವ ವಿಳಾಸವು ಒಳಪಡುವಂತಹ ವಲಯದ ಸಂಬಂಧಪಟ್ಟ ವಿಭಾಗಗಳ ಸಹಾಯಕ ಕಂದಾಯ ಅಧಿಕಾರಿಗಳು ಪರಿಶೀಲಿಸಿ ಮಹಜರ್ ವರದಿ ಹಾಗೂ ಸೂಕ್ತ ಶಿಫಾರಸ್ಸಿನೊಂದಿಗೆ ವಲಯ ಸಮಿತಿಯ ಅನುಮೋದನೆಯನ್ನು ಪಡೆದಿರುವ ಅರ್ಜಿದಾರರ ಪೂರ್ಣ ವಿವರಗಳೊಂದಿಗೆ ಸಹಾಯಧನ ಪಾವತಿಸಲು ಪಾಲಿಕೆಯ ಮಾರ್ಗಸೂಚಿಯಂತೆ ಕ್ರಮ ವಹಿಸಬೇಕಿರುತ್ತದೆ. ಆದರೆ, ಈ ಎಲ್ಲಾ ನಿಯಮಗಳನ್ನೂ ಮೀರಿ ನೇರವಾಗಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಪಡೆದಿರುವ ಒಟ್ಟು 550 ಅಭ್ಯರ್ಥಿಗಳ ಖಾತೆಗೆ 5 ಲಕ್ಷ ರು.ಗಳಂತೆ ಒಟ್ಟು 27.50 ಕೋಟಿ ರು.ಗಳನ್ನು ಅಕ್ರಮವಾಗಿ ಜಮೆ ಮಾಡಿದ್ದಾರೆ ಎಂದು ರಮೇಶ್ ದೂರಿದ್ದಾರೆ.ಅರ್ಜಿ ಸಲ್ಲಿಸಿರುವ ಸದರಿ ಅರ್ಹ ಫಲಾನುಭವಿಗಳ ಪೈಕಿ ಅನೇಕರು ಕಡುಬಡವರು, ವಿಧವೆಯರು, ವಿಕಲಚೇತನರು ಹಾಗೂ ಹಿರಿಯ ನಾಗರಿಕರೂ ಇದ್ದು, ಭ್ರಷ್ಟ ಅಧಿಕಾರಿಗಳು ಮಾಡಿರುವ ಈ ವಂಚನೆಯಿಂದಾಗಿ ಇವರೆಲ್ಲರೂ ಅಮೃತ ಮಹೋತ್ಸವ ಯೋಜನೆಯ ಸೌಲಭ್ಯವನ್ನು ಪಡೆಯದೆಯೇ ವಂಚಿತರಾಗಿದ್ದಾರೆ. ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.