ಡಿಸಿಸಿ ಕಚೇರಿಯಲ್ಲಿ ರಾಜೀವ್ ಗಾಂಧಿಯವರ 34ನೇ ಪುಣ್ಯಸ್ಮರಣೆಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸಂಪರ್ಕ ಕ್ರಾಂತಿಯ ಮುಖಾಂತರ ಭಾರತಕ್ಕೆ ತಂತ್ರಜ್ಞಾನದ ಆಧುನಿಕ ಸ್ಪರ್ಶವನ್ನು ಕೊಟ್ಟು, 18 ವರ್ಷಕ್ಕೆ ಮತದಾನದ ಹಕ್ಕನ್ನು ಜಾರಿಗೊಳಿಸಿ, 73 ಮತ್ತು 74ನೇ ಸಂವಿಧಾನಾತ್ಮಕ ತಿದ್ದುಪಡಿಗೆ ಅಡಿಗಲ್ಲು ಹಾಕಿದ ಮೇರು ಚಿಂತಕರು ರಾಜೀವ್ ಗಾಂಧಿ ಎಂದು ಡಿಸಿಸಿ ಅಧ್ಯಕ್ಷ ತಾಜ್‍ಪೀರ್ ನುಡಿದರು.ಚಿತ್ರದುರ್ಗ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಮಂತ್ರಿ ರಾಜೀವ ಗಾಂಧಿಯವರ ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ರಾಜೀವ್‌ಗಾಂಧಿ ಅವರು ನಮ್ಮನ್ನಗಲಿ ಇಂದಿಗೆ 34 ವರ್ಷಗಳು ಕಳೆದಿದ್ದರೂ, ಅವರು ದೇಶಕ್ಕೆ ಕೊಟ್ಟಂತಹ ಕೊಡುಗೆಗಳು ಚಿರಸ್ಥಾಯಿಯಾಗಿ ಉಳಿದಿವೆ ಎಂದರು. ಭಯೋತ್ಪಾದನೆ ಎಂಬುದು ಅಶಾಂತಿ ಮತ್ತು ಅಸ್ಥಿರತೆಯ ಸಂಕೇತ, ಹಾಗಾಗಿ ರಾಜೀವ್ ಗಾಂಧಿ ಅವರು ಮಡಿದ ದಿನವನ್ನು ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನ ಎಂದು ಘೋಷಣೆ ಮಾಡಿ, ಭಯೋತ್ಪಾದನೆಯ ವಿರುದ್ಧ ಸಮರ ಸಾರಿ ಶಾಂತಿ ಮತ್ತು ಸ್ಥಿರತೆಯನ್ನು ರಾಷ್ಟ್ರದಲ್ಲಿ ನಿರ್ಮಾಣ ಮಾಡುವ ಸಂಕಲ್ಪವನ್ನು ತೊಡಲಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್‍ನ ಎಸ್‌ಟಿ ಘಟಕದ ಅಧ್ಯಕ್ಷರಾದ ಜಯ್ಯಣ್ಣ ಮಾತನಾಡಿ, ಇಂದು ನಮ್ಮ ದೇಶದ ತಂತ್ರಜ್ಞಾನದಲ್ಲಿ ದಾಪುಗಾಲು ಇಟ್ಟಿದೆ ಎಂದರೆ ಅದಕ್ಕೆ ರಾಜೀವ್ ಗಾಂಧಿಯವರು ಕಾರಣರಾಗಿದ್ದಾರೆ. ಅವರ ಅಂದು ಮುಂದುವರೆಯದೇ ಇದಿದ್ದರೆ ನಮ್ಮ ದೇಶ ತಂತ್ರಜ್ಞಾನಕ್ಕಾಗಿ ಬೇರೆ ದೇಶದ ಮುಂದೆ ಕೈಚಾಚಬೇಕಿತ್ತು, ಗಾಂಧಿ ಕುಟುಂಬ ದೇಶಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಿದ ಕುಟುಂಬವಾಗಿದೆ. ಮಹಾತ್ಮಗಾಂಧಿ, ಇಂದಿರಾಗಾಂಧಿ ಹಾಗೂ ರಾಜೀವಗಾಂಧಿಯವರು ಸಹಾ ದೇಶಕ್ಕಾಗಿ ತಮ್ಮ ಪ್ರಾಣವನ್ನೆ ನೀಡಿದ್ದಾರೆ. ಇದರ ಬಗ್ಗೆ ಬಿಜೆಪಿಯವರಿಗೆ ಅರಿವು ಇಲ್ಲವಾಗಿದೆ, ಸ್ವಾತಂತ್ರ್ಯದ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದರು.ಮಹಿಳಾ ಘಟಕದ ಅಧ್ಯಕ್ಷರಾದ ಗೀತಾ, ನಂದಿನಿಗೌಡ ಮಾತನಾಡಿ, ರಾಜೀವ್ ಗಾಂಧಿಯವರು ತಮ್ಮ ಅಧಿಕಾರದ್ದಾಗ ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ಸಿಗುವಂತೆ ಮಾಡುವುದು ಅವರ ಉದ್ದೇಶವಾಗಿತ್ತು. ಉದ್ಯೋಗ ಖಾತ್ರಿಯನ್ನು ಜಾರಿ ಮಾಡುವುದರ ಮೂಲಕ ಗ್ರಾಮಾಂತರ ಪ್ರದೇಶದ ಜನರಿಗೆ ಬದುಕಿಗೆ ಆಸರೆಯಾದರು. 33% ಮೀಸಲಾತಿಯನ್ನು ಜಾರಿ ಮಾಡುವುದರ ಮೂಲಕ ಮಹಿಳೆಯರು ರಾಜಕೀಯಕ್ಕೆ ಬರಲು ನೆರವಾದವರು ರಾಜೀವಗಾಂಧಿಯವರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮೈಲಾರಪ್ಪ, ಎಸ್.ಸಿ, ಘಟಕದ ಅಧ್ಯಕ್ಷರಾದ ಮಂಜುನಾಥ್, ಉಪಾಧ್ಯಕ್ಷರಾಧ ರವಿಕುಮಾರ್, ಸೇವಾದಳದ ಅಧ್ಯಕ್ಷರಾದ ಭೀಮರಾಜ್, ಸಾಧೀಕ್‍ವುಲ್ಲಾ, ಮುದಸಿರ್ ನವಾಜ್, ಪ್ರಕಾಶ್, ನಾಗೇಂದ್ರಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.