ದಾಬಸ್‌ಪೇಟೆ: ಪಟ್ಟಣದ ಅಗಳಕುಪ್ಪೆ ರಸ್ತೆಯ ಅಕ್ಕಪಕ್ಕದ ಜಮೀನುಗಳಲ್ಲಿ ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಡಗಳು ನಿರ್ಮಿಸಿದ್ದು, ಇದರಿಂದ ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ರಸ್ತೆಯಲ್ಲಿಯೇ ಹರಿಯುತ್ತಿದೆ. ಆದ್ದರಿಂದ ಒತ್ತುವರಿ ತೆರವು ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಾಗಿದೆ.
ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ಕಟ್ಟಡಗಳ ನಿರ್ಮಾಣ ಮಾಡಿದ್ದು ಅದನ್ನು ಸರ್ವೇ ಮಾಡಿ ಒತ್ತುವರಿ ತೆರವುಗೊಳಿಸುವಂತೆ ಸಾರ್ವಜನಿಕರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಕಳೆದ ಜೂನ್ ತಿಂಗಳಿನಲ್ಲಿ ಸರ್ವೇಯಂತೆ ಒತ್ತುವರಿ ಜಾಗ ಮೂರು ತಿಂಗಳೊಳಗೆ ತೆರವುಗೊಳಿಸಿ ವರದಿ ನೀಡುವಂತೆ ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿತ್ತು.ಇತ್ತೀಚೆಗೆ ಶಾಸಕ ಶ್ರೀನಿವಾಸ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ ಜಯರಾಂ ಎಂಬುವವರು ನಮಗೆ ಸೇರಿರುವ 36ನೇ ಸೈಟ್‌ನಲ್ಲಿ ರಾಜಕಾಲುವೆ ಹಾದುಹೋಗುತ್ತದೆ ಎಂದು ಹೇಳಿ ಅನಧಿಕೃತವಾಗಿ ಕೊಳಚೆ ನೀರು ಹರಿಯಲು ಚರಂಡಿ ನಿರ್ಮಿಸುತ್ತಿದ್ದು ಇದಕ್ಕೆ ತಡೆ ನೀಡಬೇಕೆಂದು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದಕ್ಕೆ ಸಂಬಂಧಿಸಿದಂತೆ 36ನೇ ಸೈಟಿನಲ್ಲಿ ರಾಜಕಾಲುವೆ ಹೋಗುತ್ತದೆಯೇ ಇಲ್ಲವೇ ಎಂಬ ಬಗ್ಗೆ ಸರ್ವೇ ನಡೆಸಿ ವರದಿ ನೀಡುವಂತೆ ಅಲ್ಲಿನವರೆಗೂ ಕಾಮಗಾರಿ ನಡೆಸದಂತೆ ಸರ್ಕಾರಕ್ಕೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ತಾಲೂಕು ಸರ್ವೇಯರ್ ಶ್ರೀಧರ್, ಗೋವಿಂದರಾಜು ತಂಡ ರಾಜಕಾಲುವೆ ಸರ್ವೇ ಕೈಗೊಂಡಿದ್ದು ಭಾಗಶಃ ಒತ್ತುವರಿಯಾಗಿರುವುದು ದೃಢಪಟ್ಟಿದೆ. ಒತ್ತುವರಿ ಮಾಡಿಕೊಂಡಿರುವ ಕಟ್ಟಡ ಮಾಲೀಕರ ಹೆಸರುಗಳನ್ನು ದಾಖಲಿಸಿಕೊಂಡರು.ಸರ್ವೇ ಕಾರ್ಯದಲ್ಲಿ ತಹಸೀಲ್ದಾರ್ ಅರುಂಧತಿ, ನೆಲಮಂಗಲ ತಾಪಂ ಇಓ ಮಧು, ಎಸ್.ಟಿ.ಆರ್.ಆರ್ ಸದಸ್ಯ ಕಾರ್ಯದರ್ಶಿ ವೆಂಕಟ್ ದುರ್ಗಾಪ್ರಸಾದ್, ಪೋಲೀಸ್ ಇನ್ಸ್ ಪೆಕ್ಟರ್ ರಾಜು, ರಾಜಸ್ವ ನಿರೀಕ್ಷಕ ಕುಮಾರಸ್ವಾಮಿ, ಪಿಡಿಓ ರವಿಶಂಕರ್, ಕಾರ್ಯದರ್ಶಿ ಹನುಮಂತರಾಜು ಇತರರಿದ್ದರು.
ಪೋಟೋ 3 :ತಹಸೀಲ್ದಾರ್ ಅರುಂಧತಿ ನೇತೃತ್ವದಲ್ಲಿ ಅಧಿಕಾರಿಗಳು ರಾಜಕಾಲುವೆ ಒತ್ತುವರಿ ಸರ್ವೆ ನಡೆಸಿದರು.