ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆ ಎನಿಸಿಕೊಂಡಿದ್ದ ವಿಜಯಪುರ ಲೋಕಸಭೆ ಕಳೆದ ಐದು ಚುನಾವಣೆಯಲ್ಲಿ ನಿರಂತರವಾಗಿ ನೆಲ ಕಚ್ಚಿದೆ. ಇತ್ತ ಕೇಸರಿಪಡೆ ಇದುವರೆಗೆ ಕ್ಷೇತ್ರವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದೆ. ಈ ಬಾರಿ ಕಾಂಗ್ರೆಸ್ ಚುನಾವಣೆಗೂ ಮುನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದರಿಂದ ರಣರಂಗಕ್ಕೆ ನುಗ್ಗಿದೆ. ಎರಡು ಬಾರಿ ಶಾಸಕರಾಗಿದ್ದ ಪ್ರೊ.ಎಚ್.ಆರ್.ಆಲಗೂರಗೆ ಟಿಕೆಟ್ ಲಭಿಸಿದ್ದು, ಕಾಂಗ್ರೆಸ್ ಪಾಳೆಯದಲ್ಲಿ ಸಂಚಲನ ಮೂಡಿಸಿದೆ. ಆದರೆ, ಬಿಜೆಪಿಯಲ್ಲಿ ಇನ್ನಷ್ಟೇ ಟಿಕೆಟ್ ಘೋಷಿಸಬೇಕಿರುವುದರಿಂದ ಯಾರಿಗೆ ಲಭಿಸಲಿದೆ ಎಂಬ ಲೆಕ್ಕಾಚಾರ ಕೂಡ ಶುರುವಾಗಿದೆ.
ಸಹಜವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ ಕಾಂಗ್ರೆಸ್‌ಗೆ ಲಾಭವಾಗಬೇಕು ಎಂಬುವುದು ಮೇಲ್ನೋಟದ ಲೆಕ್ಕಾಚಾರ. ಆದರೆ, ಕೇಂದ್ರದಲ್ಲಿ ಸದ್ಯ ಪರಿಸ್ಥಿತಿ ಆ ರೀತಿಯಿಲ್ಲ ಎಂಬ ಲೆಕ್ಕಾಚಾರಗಳು ಹೇಳುತ್ತಿವೆ. ಹೀಗಾಗಿ ಅದು ಇಲ್ಲಿಯೂ ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗಳೆಯುಂತಿಲ್ಲ. ಕ್ಷೇತ್ರದಲ್ಲಿ ಸಕ್ರಿಯ ಕಾರ್ಯಚಟುವಟಿಕೆಗಳನ್ನು ನಡೆಸಲಿ ಎಂಬ ಕಾರಣಕ್ಕೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಆದರೆ, ಟಿಕೆಟ್ ಆಕಾಂಕ್ಷಿಗಳಲ್ಲಿ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ಕೂಡ ಮುಖ್ಯವಾಗುತ್ತದೆ.ವಿಜಯಪುರ ಎಸ್ಸಿ ಮೀಸಲು ಕ್ಷೇತ್ರಕ್ಕೆ ಈಗ ಪ್ರೊ.ಎಚ್.ಆರ್.ಆಲಗೂರ (ರಾಜು ಆಲಗೂರ) ಅವರಿಗೆ ಕೈ ವರಿಷ್ಠರು ದೇಶಾದ್ಯಂತ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಟಿಕೆಟ್ ಪ್ರಕಟಿಸಿದ್ದಾರೆ. ನಾಗಾಠಾಣ ಮೀಸಲು ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದ ಇವರು ಈಗ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಹೌದು. ಹೀಗಾಗಿ ಇವರೇ ಸೂಕ್ತ ಅಭ್ಯರ್ಥಿ ಎಂದು ವರಿಷ್ಠರು ಸ್ಪರ್ಧೆಗೆ ಅಸ್ತು ಎಂದಿದ್ದಾರೆ.ಇನ್ನುಳಿದವರಲ್ಲಿ ಅಸಮಾಧಾನ ತರುತ್ತಾ?:
ಕಳೆದ ಐದು ಬಾರಿ ನಿರಂತರವಾಗಿ ಸೋಲನ್ನು ಅನುಭವಿಸುತ್ತಿದ್ದರೂ ವಿಜಯಪುರ ಲೋಕಸಭಾ ಟಿಕೆಟ್‌ಗಾಗಿ ಕಾಂಗ್ರೆಸ್‌ನಲ್ಲಿ ಸಾಕಷ್ಟು ಜನ ಆಕಾಂಕ್ಷಿಗಳಿದ್ದರು. ಆದ್ರೆ ಎಲ್ಲವನ್ನೂ ಮೀರಿ ಹೈಕಮಾಂಡ್ ಜಿಲ್ಲಾಧ್ಯಕ್ಷ ರಾಜು ಆಲಗೂರಗೆ ಟಿಕೇಟ್ ಫೈನಲ್ ಮಾಡಿದೆ. ಹಾಗಾಗಿ ಸಹಜವಾಗಿಯೇ ಇನ್ನುಳಿದ ಆಕಾಂಕ್ಷಿಗಳು ಬೂದಿ ಮುಚ್ಚಿದ ಕೆಂಡದಂತೆ ತೆರೆಯ ಮರೆಯಲ್ಲೇ ಅಸಮಾಧಾನ ಹೊರಹಾಕಿದರೂ ಅಚ್ಚರಿಯಿಲ್ಲ.ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಅವರ ಅಪೇಕ್ಷೆಯಂತೆ ಲೋಕಸಭೆಗೆ ಧುಮುಕಲು ರಾಜು ಆಲಗೂರ ಒಪ್ಪಿಕೊಂಡಿದ್ದಾರೆ. ಹಾಗಾಗಿ ಟಿಕೆಟ್ ಸಲೀಸಾಗಿ ಒಲಿದು ಬಂದಿದೆ ಎನ್ನಲಾಗುತ್ತಿದೆ. ಇದರೊಟ್ಟಿಗೆ ಪ್ರಬಲ ಆಕಾಂಕ್ಷಿಯಾಗಿದ್ದ ಕಾಂತಾ ನಾಯಕ (ಶಿವಕಾಂತಮ್ಮ)ಗೆ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಸ್ಥಾನ ನೀಡುವ ಮೂಲಕ ಅವರು ಸ್ಪರ್ಧೆ ಒಡ್ಡದಂತೆ ತಡೆ ಒಡ್ಡಲಾಯಿತು. ಜೊತೆಗೆ ಮೂರು ಬಾರಿ ಲೋಕಸಭೆಗೆ ಸೋತಿದ್ದರೂ ಪ್ರಕಾಶ ರಾಠೋಡ್‌ಗೆ ಎರಡುಬಾರಿ ಎಂಎಲ್‌ಸಿ ಮಾಡಿರುವುದರಿಂದ ಅವರು ಅಸಮಾಧಾನ ಮಾಡಿಕೊಳ್ಳದಂತೆ ಎಚ್ಚರಿಕೆ ಹೆಜ್ಜೆ ಇಟ್ಟಿದೆ. ಜತೆಗೆ ಮಾಜಿ ಶಾಸಕ ಮನೋಹರ ಐನಾಪುರ ಕೂಡ ಆಕಾಂಕ್ಷಿಯಾಗಿದ್ದರು. ಆದರೆ ಅವರು ಟಿಕೆಟ್ ವಂಚಿತವಾಗಿದ್ದಾರೆ.
ಹಿಂದೆ ಸರಿದಿದ್ದ ರಾಜು ಆಲಗೂರ:ಈ ಹಿಂದೆ ಎರಡುಬಾರಿ ಶಾಸಕರಾಗಿರುವ ರಾಜು ಆಲಗೂರಗೆ ಕಳೆದೆರಡು ಬಾರಿಯೂ ನಾಗಠಾಣ ಕ್ಷೇತ್ರದಿಂದ ಟಿಕೆಟ್ ಲಭಿಸುವುದು ಸಲೀಸಾಗಿತ್ತು. ಆದರೆ, ಅವರು ಮನಸು ಮಾಡದೇ ಸ್ಪರ್ಧೆಯಿಂದ ಹಿಂದೆ ಸರಿದರು. ಈ ವೇಳೆ ಬಿಜೆಪಿಯಿಂದ ವಲಸೆ ಬಂದಿದ್ದ ವಿಠ್ಠಲ ಕಟಕದೊಂಡ 2018ರಲ್ಲಿ ಸೋತರೆ, 2023ರಲ್ಲಿ ಭರ್ಜರಿ ಗೆಲವು ಸಾಧಿಸಿದ್ದಾರೆ.ರಾಜು ಆಲಗೂರ ಹಿನ್ನೆಲೆ ಏನು?:ಎಂಎ, ಎಂಫಿಲ್ ಮಾಡಿರುವ ರಾಜು ಆಲಗೂರ, ಪರಿಶಿಷ್ಟ ಜಾತಿ (ಚಲವಾದಿ ಬಲ)ಗೆ ಸೇರಿದವರು. ಸಮಾಜಸೇವೆ, ಕೃಷಿಯಲ್ಲಿ ತೊಡಗಿದ್ದಾರೆ. ಹಿಂದೆ ಮೀಸಲು ಬಳ್ಳೊಳ್ಳಿ ಕ್ಷೇತ್ರ ಇದ್ದಾಗ 1999ರಲ್ಲಿ ಒಂದು ಬಾರಿ ಹಾಗೂ ಕ್ಷೇತ್ರ ವಿಂಗಡನೆ ಆದ ಬಳಿಕ ನಾಗಠಾಣ ಮೀಸಲು ಕ್ಷೇತ್ರದಿಂದ 2013ರಲ್ಲಿ ಎರಡನೇ ಬಾರಿ ಶಾಸಕರಾಗಿದ್ದರು. ಪ್ರಸ್ತುತ ವಿಜಯಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವು ವರ್ಷಗಳಿಂದ ರಾಜ್ಯ ಮಟ್ಟದಲ್ಲಿ ದಲಿತ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. 2013 ರಿಂದ 2018 ರ ನಡುವೆ ಗೌರವಾನ್ವಿತ ಮುಖ್ಯಮಂತ್ರಿಗಳಿಗೆ ಸಂಸದೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಜತೆಗೆ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
---------ಈ ಹಿಂದೆ ಯಾರು ಗೆದ್ದಿದ್ದರು?
1998: ಎಂ ಬಿ ಪಾಟೀಲ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್1999: ಬಸನಗೌಡ ಪಾಟೀಲ್ ಯತ್ನಾಳ, ಭಾರತೀಯ ಜನತಾ ಪಕ್ಷ.
2004: ಬಸನಗೌಡ ಪಾಟೀಲ್ ಯತ್ನಾಳ, ಭಾರತೀಯ ಜನತಾ ಪಕ್ಷ.2009: ರಮೇಶ ಜಿಗಜಿಣಗಿ, ಭಾರತೀಯ ಜನತಾ ಪಕ್ಷ
2014: ರಮೇಶ ಜಿಗಜಿಣಗಿ, ಭಾರತೀಯ ಜನತಾ ಪಕ್ಷ2019: ರಮೇಶ ಜಿಗಜಿಣಗಿ, ಭಾರತೀಯ ಜನತಾ ಪಕ್ಷ
----------ಕೋಟ್.....
ಜಿಲ್ಲೆಯಲ್ಲಿ ಸಾಕಷ್ಟು ಆಕಾಂಕ್ಷಿಗಳಿದ್ದರೂ ಹೈಕಮಾಂಡ್ ನನಗೆ ಟಿಕೆಟ್ ನೀಡಿದ್ದು ಖುಶಿ ತಂದಿದೆ. ಜಿಲ್ಲೆಯ ಜನರು ಬದಲಾವಣೆ ಬಯಸಿದ್ದರಿಂದ ಈ ಬಾರಿ ಕಾಂಗ್ರೆಸ್ ಗೆಲುವು ಖಚಿತವಾಗಿದೆ. ನನಗೆ ಟಿಕೆಟ್ ನೀಡಿದ ಎಐಸಿಸಿ ಹಾಗೂ ಕೆಪಿಸಿಸಿಯ ಎಲ್ಲ ನಾಯಕರಿಗೆ ಹಾಗೂ ಜಿಲ್ಲೆಯ ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆ. ಎಲ್ಲರ ಒಗ್ಗಟ್ಟಿನಿಂದ ಈ ಬಾರಿ ನನಗೆ ಗೆಲುವು ಕಟ್ಟಿಟ್ಟ ಬುತ್ತಿ.- ರಾಜು ಆಲಗೂರ, ಕಾಂಗ್ರೆಸ್ ಅಭ್ಯರ್ಥಿ, ವಿಜಯಪುರ ಮೀಸಲು ಕ್ಷೇತ್ರ
ನಾನು ಕೂಡ ಪ್ರಬಲ ಆಕಾಂಕ್ಷಿಯಾಗಿದ್ದೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಲಂಬಾಣಿ ಸಮಾಜಕ್ಕೆ ಭಾರೀ ನಿರಾಸೆ ಮಾಡಿದೆ. ವಿಜಯಪುರದ ಲೋಕಸಭೆ ಟಿಕೆಟ್ ಲಂಬಾಣಿ ಸಮುದಾಯಕ್ಕೆ ಕೊಡುವುದಾಗಿ ನಾಯಕರು ಭರವಸೆ ನೀಡಿದ್ದರು. 28 ಕ್ಷೇತ್ರಗಳಲ್ಲಿ ಒಂದು ಕ್ಷೇತ್ರವಾದರು ಲಂಬಾಣಿಗೆ ಕೊಡಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಕೈತಪ್ಪಿದೆ. ರಾಜ್ಯದಲ್ಲಿ 45 ಲಕ್ಷ ಲಂಬಾಣಿ ಮತದಾರರಿದ್ದು, ವಿಜಯಪುರದಲ್ಲಿ ಎರಡೂವರೆ ಲಕ್ಷ ಸಮುದಾಯದ ಮತದಾರರಿದ್ದರೂ ಸಮಾಜಕ್ಕೆ ಅನ್ಯಾಯವಾಗಿದೆ.- ಮನೋಹರ ಐನಾಪುರ, ಮಾಜಿ ಶಾಸಕ.