ಕನ್ನಡಪ್ರಭ ವಾರ್ತೆ ವಿಜಯಪುರ
ವಿಜಯಪುರ ಲೋಕಸಭೆ ಕ್ಷೇತ್ರದ ಚುನಾವಣೆಯ ಎರಡನೇ ಹಂತದ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಇದೀಗ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು. ಸೂಚಕರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಅಭ್ಯರ್ಥಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರದ ವೇಳೆ ಸೂಚಕರಾದ ಅಮಸಿದ್ದ ಬಿಜ್ಜರಗಿ, ಸುರೇಶಗೌಡ ಬಿರಾದಾರ, ಬೀರಪ್ಪ ಜುಮಾನಾಳ ಸಾಥ್ ನೀಡಿದರು.ಈ ವೇಳೆ ಮಧ್ಯಮದವರೊಂದಿಗೆ ಮಾತನಾಡಿದ ರಾಜು ಆಲಗೂರ, ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಗ್ಯಾರಂಟಿ ಯೋಜನೆಗಳು ಎಲ್ಲರನ್ನು ತಲುಪಿದ್ದು, ಮತದಾರರು ಕಾಂಗ್ರೆಸ್ ಪರವಾಗಿದ್ದಾರೆ. ಈ ಬಾರಿ ಗೆಲುವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.
--ಬಾಕ್ಸ್
ರಾಜು ಆಲಗೂರಗಿಂತ ಪತ್ನಿಯೇ ಶ್ರೀಮಂತೆಕಾಂಗ್ರೆಸ್ ಹುರಿಯಾಳು ಪ್ರೊ.ಎಚ್.ಆರ್.ಆಲಗೂರ(ರಾಜು ಆಲಗೂರ) ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಅಭ್ಯರ್ಥಿ ಹಣಮಂತರಾವ ಆಲಗೂರ ಅವರಿಗಿಂತಲೂ ಅವರ ಪತ್ನಿ ಸಾವಿತ್ರಿ ಅವರೇ ಒಂದು ಕೈ ಮುಂದಿದ್ದಾರೆ. ಚರಾಸ್ತಿ ಹಾಗೂ ಸ್ಥಿರಾಸ್ತಿ ಎರಡರಲ್ಲೂ ಅವರೇ ಹೆಚ್ಚಿಗೆ ಇರುವುದು ಕಂಡುಬಂದಿದೆ.
ರಾಜೂ ಆಲಗೂರ ಆಸ್ತಿ ವಿವರ:₹5 ಲಕ್ಷ ನಗದು, ₹37 ಲಕ್ಷ ಮೌಲ್ಯದ ಟೊಯೋಟಾ ಫಾರ್ಚುನರ್ ಕಾರು, ₹15 ಲಕ್ಷ ಮೌಲ್ಯದ ಮಹಿಂದ್ರಾ ಸ್ಕಾರ್ಪಿಯೋ, ₹5 ಲಕ್ಷ 84 ಸಾವಿರ ಮೌಲ್ಯದ ಚಿನ್ನಾಭರಣ ಸೇರಿ ಒಟ್ಟು ₹91,74,326 ಚರಾಸ್ತಿ ಹೊಂದಿದ್ದಾರೆ.
₹1.12 ಕೋಟಿ ಮೌಲ್ಯದ ಒಂದು ಮನೆ, ₹45 ಲಕ್ಷ ಮೌಲ್ಯದ ಒಂದು ಮನೆ ಸೇರಿ ಎರಡು ಮನೆಗಳು, ₹1 ಕೋಟಿ 10 ಲಕ್ಷ ಮೌಲ್ಯದ 10 ಎಕರೆ ಕೃಷಿ ಜಮೀನು, ಕೃಷಿಯೇತರ ಭೂಮಿ ಹಾಗೂ ವಾಣಿಜ್ಯ ಕಟ್ಟಡಗಳು ಸೇರಿ ಒಟ್ಟು ₹4,54,87,500 ಮೌಲ್ಯದ ಆಸ್ತಿ ಹೊಂದಿದ್ದಾರೆ.ಸಾವಿತ್ರಿ ಆಲಗೂರ ಆಸ್ತಿ ವಿವರ:
₹2 ಲಕ್ಷ ನಗದು, ₹33.58 ಲಕ್ಷ ಮೌಲ್ಯದ ಟೊಯೋಟಾ ಇನ್ನೋವಾ ಕಾರು, ₹12.60 ಲಕ್ಷ ಮೌಲ್ಯದ ಮಾರುತಿ ಬ್ರೀಜಾ ಕಾರು, ₹4.70 ಲಕ್ಷ ಮೌಲ್ಯದ ನ್ಯೂ ಹಾಲೆಂಡ್ ಟ್ರ್ಯಾಕ್ಟರ್, ₹16,79,000 ಮೌಲ್ಯದ ಚಿನ್ನಾಭರಣ ಸೇರಿ ಒಟ್ಟು ₹1,67,80,894 ಚರಾಸ್ತಿ ಹೊಂದಿದ್ದಾರೆ.₹85 ಲಕ್ಷ ಮೌಲ್ಯದ ಕೃಷಿ ಭೂಮಿ, ₹6 ಕೋಟಿ ಮೌಲ್ಯದ ಹೊಟೇಲ್ ಸೇರಿ ಒಟ್ಟು ₹6,85,25,000 ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಚರಾಸ್ತಿಯಲ್ಲಿ ಪತಿಗಿಂತ ಪತ್ನಿ ₹75,96,568 ಮೌಲ್ಯದ ಆಸ್ತಿಯನ್ನು ಹೆಚ್ಚಿಗೆ ಹೊಂದಿದ್ದು, ಸ್ಥಿರಾಸ್ತಿಯಲ್ಲಿ ₹2,30,37,500 ಮೌಲ್ಯದ ಆಸ್ತಿಯನ್ನು ಹೆಚ್ಚಿಗೆ ಹೊಂದಿದ್ದಾರೆ.