ಲೋಕಾರ್ಪಣೆ । ರಾಜು ವಿರಚಿತ ಮೂರು ಕಾದಂಬರಿಗಳ ಬಿಡುಗಡೆ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣಎ.ಜಿ.ರಾಜು ಅವರು ಶಿಕ್ಷಕ ವೃತ್ತಿಯ ಜೊತೆಗೆ ರಂಗಭೂಮಿ, ಸಾಹಿತ್ಯ, ಕನ್ನಡ, ಸಂಸ್ಕೃತಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಈ ಸಮಾಜಕ್ಕೆ ಉತ್ತಮ ಕಾದಂಬರಿಗಳನ್ನು ರಚನೆ ಮಾಡಿದ್ದಾರೆ. ರಾಜುರವರು ಅತ್ಯುತ್ತಮವಾದ ಮೂರು ಕೃತಿಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಈ ಸಮಾಜಕ್ಕೆ ಹಾಗೂ ಹೊಸ ಪೀಳಿಗೆಗೆ ಆದರ್ಶ ಪ್ರಾಯರಾಗಿದ್ದಾರೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ನಗರದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಮಹಾ ವಿದ್ಯಾಲಯ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸೃಷ್ಟಿ ಪ್ರಕಾಶನ ಚನ್ನರಾಯಪಟ್ಟಣ ಜಂಟಿಯಾಗಿ ಗೌರವ ಡಾಕ್ಟರೇಟ್ ಪುರಸ್ಕೃತ ಎ.ಜಿ.ರಾಜು ರವರ ಮೂರು ಕಾದಂಬರಿಗಳಾದ ‘ಗುಬ್ಬಚ್ಚಿ ಗೂಡು’, ‘ಮೋಕ್ಷಗಾಮಿ’, ‘ನಗುವಿನ ಒಡತಿ’ ಎಂಬ ಪುಸ್ತಕಗಳನ್ನು ಲೋಕರ್ಪಣೆ ಮಾಡಿ ಮಾತನಾಡಿದರು.ರಾಜುರವರ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತಿರುವ ಇವರ ಕುಟುಂಬದ ಎಲ್ಲಾ ಸದಸ್ಯರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇವರು ಇನ್ನೂ ಹೆಚ್ಚಿನ ಕೃತಿಗಳನ್ನು ಈ ಸಮಾಜಕ್ಕೆ ನೀಡಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್.ಎನ್.ಲೋಕೇಶ್, ಬಿಜೆಪಿ ಮುಖಂಡ ಅಣತಿ ಆನಂದ್, ಜೆಡಿಎಸ್ ಮುಖಂಡ ಪರಮ ದೇವರಾಜೇಗೌಡ, ಮಕ್ಕಳ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸಿ.ಎನ್.ಅಶೋಕ್, ರಾಣಿರಾಜು, ಯುವ ಸಾಹಿತಿ ರಾಜೇಶ್, ತಾಪಂ ಮಾಜಿ ಅಧ್ಯಕ್ಷ ನವಿಲೆ ಹೊಸೂರು ಚಂದ್ರಪ್ಪ, ಟಿಎಪಿಎಂಎಸ್ ಮಾಜಿ ಅಧ್ಯಕ್ಷ ಕುಂಬಾರಹಳ್ಳಿ ರಮೇಶ್, ಗ್ರಾಪಂ ಮಾಜಿ ಅಧ್ಯಕ್ಷ ಮರಗೂರು ಅನಿಲ್, ಪ್ರಾಂಶುಪಾಲ ಲಕ್ಷ್ಮಿಕಾಂತ್, ಕಸಾಪ ಪದಾಧಿಕಾರಿಗಳಾದ ಶಿವನಗೌಡ ಪಾಟೀಲ್, ದಿಂಡಗೂರು ಗೋವಿಂದರಾಜು, ಜಬಿವುಲ್ಲಾಬೇಗ್, ಮುಳ್ಳುಕೆರೆ ಪ್ರಕಾಶ್ ಸೇರಿ ಇತರರು ಹಾಜರಿದ್ದರು.