ರಾಜು ತಾಂಡೇಲ್‌ ಕೊಡುಗೈ ದಾನಿ, ಅಪರೂಪದ ವ್ಯಕ್ತಿ: ಗಣಪತಿ ಉಳ್ವೇಕರ್

KannadaprabhaNewsNetwork |  
Published : Sep 01, 2024, 01:48 AM IST
ರಾಜು ತಾಂಡೇಲ ಅವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು  | Kannada Prabha

ಸಾರಾಂಶ

ಜಿಲ್ಲೆಯ ನಾನಾ ಭಾಗದಿಂದ ಮಹಿಳೆಯರು, ಪುರುಷರು ಎನ್ನದೇ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು, ಗಣ್ಯರು ಸೇರಿದಂತೆ ನೆಚ್ಚಿನ ರಾಜಣ್ಣನನ್ನು ನೆನೆಸಿಕೊಂಡು ಪುಷ್ಪ ನಮನ ಸಲ್ಲಿಸಿ ಭಾವಪರವಶವಾದರು.

ಕಾರವಾರ: ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾಗಿದ್ದ ದಿ. ರಾಜು ತಾಂಡೇಲರ ನುಡಿನಮನಕ್ಕೆ ಸಹಸ್ರಾರು ಜನ ಸಾಕ್ಷಿಯಾದರು.

ಜಿಲ್ಲೆಯ ಎಲ್ಲ ಮೀನುಗಾರ ಸಮುದಾಯ ಹಾಗೂ ರಾಜು ತಾಂಡೇಲ್ ಅಭಿಮಾನಿ ಬಳಗದ ವತಿಯಿಂದ ಶನಿವಾರ ನಗರದ ಸಾಗರದರ್ಶನ ಸಭಾಭವನದಲ್ಲಿ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿ ಶ್ರದ್ಧಾಂಜಲಿ ಅರ್ಪಿಸಿದರು.

ದಿ. ರಾಜು ತಾಡೇಲ್ ಪುತ್ರ ಪ್ರಫುಲ್ಲ ತಾಂಡೇಲ್ ದೀಪ ಬೆಳಗಿಸಿ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲೆಯ ನಾನಾ ಭಾಗದಿಂದ ಮಹಿಳೆಯರು, ಪುರುಷರು ಎನ್ನದೇ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು, ಗಣ್ಯರು ಸೇರಿದಂತೆ ನೆಚ್ಚಿನ ರಾಜಣ್ಣನನ್ನು ನೆನೆಸಿಕೊಂಡು ಪುಷ್ಪ ನಮನ ಸಲ್ಲಿಸಿ ಭಾವಪರವಶವಾದರು.

ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಮೀನುಗಾರ ಸಮುದಾಯದಲ್ಲಿ ಹುಟ್ಟಿದ್ದ ರಾಜು ತಾಂಡೇಲ್ ಅಗಲುವಿಕೆ ನಮಗೆಲ್ಲರಿಗೂ ದುಃಖವನ್ನುಂಟು ಮಾಡಿದೆ. ನಮ್ಮ ಸಮಾಜದ ಅಪರೂಪದ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಕೊಡುಗೈ ದಾನಿಯಾಗಿ, ಸಂಘಟನಾ ನಾಯಕನಾಗಿ ಗುರುತಿಸಿಕೊಂಡಿದ್ದ ರಾಜು ತಾಂಡೇಲರನ್ನು ಕಳೆದುಕೊಂಡಿರುವದು ಸಮಾಜಕ್ಕೆ ಸಾಕಷ್ಟು ನಷ್ಟ ಉಂಟಾಗಿದೆ ಎಂದರು.

ಮಾಜಿ ಸಚಿವ ಆನಂದ ಅಸ್ನೋಟಿಕರ್, ಜಿಲ್ಲೆಯ ಎಲ್ಲಾ ಮೀನುಗಾರ ಸಮಾಜವನ್ನು ಒಗ್ಗಟಾಗಿ ಮುನ್ನಡೆಸಿಕೊಂಡು ಹೋದ ವ್ಯಕ್ತಿ ರಾಜು ತಾಂಡೇಲ್ ಒಬ್ಬರೇ, ಯಾರೊಂದಿಗೂ ದ್ವೇಷ ಮಾಡಿಕೊಳ್ಳದೇ ಎಲ್ಲರ ಸಹಭಾಗಿತ್ವದಲ್ಲಿ ಬೆರೆತು ತನ್ನಿಂದಾದ ಸಹಾಯ ಸಹಕಾರದಿಂದ ಜನ ಮನ್ನಣೆ ಗಳಿಸಿಕೊಂಡಿದ್ದರು. ರಾಜು ತಾಂಡೇಲ್ ಎಂದರೆ ಅದು ಒಂದು ಶಕ್ತಿ, ಓರ್ವ ವ್ಯಕ್ತಿಯಾಗಿರದೇ ಒಂದು ಸಮುದಾಯವಾಗಿಸಿದ್ದರು ಎಂದರು.

ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ, ತಾನು ಹುಟ್ಟಿ ಬೆಳೆದ ಸಮುದಾಯದೊಂದಿಗೆ ಇನ್ನುಳಿದ ಸಮುದಾಯವನ್ನೂ ಮುಂದಕ್ಕೆ ಕೊಂಡೊಯ್ಯಬೇಕು ಎಂದು ದೂರದೃಷ್ಟಿ ಹೊಂದಿದ್ದ ರಾಜು ತಾಂಡೇಲ್ ನಮ್ಮಿಂದ ಅಗಲಿದ್ದಾರೆ. ಅವರ ಹೋರಾಟದ ಕಿಚ್ಚು, ಬಡವರಿಗಾಗಿ ಮಿಡಿದ ಹೃದಯವಂತರಾಗಿದ್ದ ರಾಜು ತಾಂಡೇಲರಂತೆ ಅವರ ಮಗ ಪ್ರಫುಲ್ ಬೆಳೆಯಲಿ ಎಂದು ಹಾರೈಸಿದರು.

ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಶಂಭು ಶೆಟ್ಟಿ, ಮೀನುಗಾರ ಸಮಾಜವನ್ನು ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ಯಬೇಕು ಎನ್ನುವ ಹೆಬ್ಬಯಕೆ ರಾಜು ತಾಂಡೇಲ್ ಅವರಲ್ಲಿತ್ತು. ಶೈಕ್ಷಣಿಕವಾಗಿ, ಆರ್ಥಿಕವಾಗಿ ನೆರವು ಕೇಳಿಕೊಂಡು ಬಂದವರಿಗೆ ಬರಿಗೈಲಿ ಕಳಿಸಿದವರಲ್ಲ ಎಂದರು.

ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ತಾಂಡೇಲ್ ವ್ಯಕ್ತಿತ್ವ ಅವರ ನೆನಪು ಮಾಸದಂತೆ ಮಾಡಿದೆ. ನೂರು ಕೈಯಿಂದ ಗಳಿಸು ಸಾವಿರ ಕೈಗಳಿಂದ ದಾನ ಮಾಡು ಎನ್ನುವ ಮಾತಿಗೆ ಪೂರಕವಾಗಿ ರಾಜು ತಾಂಡೇಲ್ ನಡೆದುಕೊಂಡಿದ್ದರು ಎಂದರು.

ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ, ಜಿಲ್ಲಾ ಮೀನು ಮಾರಾಟ ಫೆಡರೇಷನ್ ಉಪಾಧ್ಯಕ್ಷ ವೆಂಕಟೇಶ ತಾಂಡೇಲ್, ಚಿತ್ತಾಕುಲ ಗ್ರಾಪಂ ಉಪಾಧ್ಯಕ್ಷ ಸೂರಜ್ ದೇಸಾಯಿ, ಮೀನುಗಾರ ಮುಖಂಡ ಗಣಪತಿ ಮಾಂಗ್ರೆ, ಅಖಿಲ ಕರ್ನಾಟಕ ಪರ್ಶಿನ್ ಬೋಟ್ ಯುನಿಯನ್ ಗೌರವಾಧ್ಯಕ್ಷ ಬಾಬು ಕುಬಾಲ್, ಟಿ.ಬಿ. ಹರಿಕಾಂತ ಮಾತನಾಡಿದರು. ಶಿವಾನಂದ ತಾಂಡೇಲ್ ಕಾರ್ಯಕ್ರಮ ನಿರ್ವಹಿಸಿದರು. ಮೀನುಗಾರ ಸಂಘಟನೆಗಳು ಮತ್ತು ಸಹಕಾರ ಸಂಘಗಳು ಮತ್ತು ಇತರ ಸಮುದಾಯದ ನೂರಾರು ಪ್ರಮುಖರು ಇದ್ದರು.

ಮೀನು ಮಾರುಕಟ್ಟೆ ಸ್ಥಗಿತ

ಮಾಜಾಳಿ, ದೇವಭಾಗ ಮತ್ತು ಕಾರವಾರದ ಮೀನುಗಾರಿಕೆ ಮತ್ತು ಮೀನು ಮಾರುಕಟ್ಟೆ ಸ್ಥಗಿತಗೊಳಿಸಲಾಗಿತ್ತು. ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ನೇತೃತ್ವದಲ್ಲಿ ಜಿಲ್ಲೆಯ ಸಮಸ್ತ ಮೀನುಗಾರ ಸಮುದಾಯದವರು ಮತ್ತು ರಾಜು ತಾಂಡೇಲ್ ಅಭಿಮಾನಿ ಬಳಗದವರು ಹಲವಾರು ಸಂಘಟನೆಗಳ ಸಹಕಾರದೊಂದಿಗೆ ನುಡಿನಮನ ಕಾರ್ಯಕ್ರಮ ಸಂಘಟಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತ್ಯಾಗ, ಬಲಿದಾನ, ಆದರ್ಶಗಳ ಮೇಲೆ ಹುಟ್ಟಿದ ಕಾಂಗ್ರೆಸ್: ಎಸ್.ಆರ್. ಪಾಟೀಲ
ರೈತ ಸೃಷ್ಟಿಯ ಮೊದಲ ವಿಜ್ಞಾನಿ, ಜಮೀನು ಪ್ರಯೋಗಾಲಯ: ಮಾಜಿ ಸಚಿವ ನಿರಾಣಿ