ಆರ್‌ವಿಎನ್‌ ವಿರುದ್ಧ ಮಾಜಿ ಸಚಿವ ರಾಜೂಗೌಡ ವಾಗ್ದಾಳಿ

KannadaprabhaNewsNetwork |  
Published : Oct 17, 2023, 12:30 AM IST
ನರಸಿಂಹ ನಾಯಕ್‌ (ರಾಜೂಗೌಡ) ಮಾಜಿ ಸಚಿವರು. | Kannada Prabha

ಸಾರಾಂಶ

ಆರ್‌ವಿಎನ್‌ ವಿರುದ್ಧ ಮಾಜಿ ಸಚಿವ ರಾಜೂಗೌಡ ವಾಗ್ದಾಳಿಶಾಸಕರು ಕ್ರೀಡೆಗೆ ಎಷ್ಟು ಅನುದಾನ ತಂದಿದ್ದಾರೆಂದು ತಿಳಿಸಲಿ । ಆರೋಪಕ್ಕೆ ಮಾಜಿ ಸಚಿವ ರಾಜೂಗೌಡ ತಿರುಗೇಟು

ಶಾಸಕರು ಕ್ರೀಡೆಗೆ ಎಷ್ಟು ಅನುದಾನ ತಂದಿದ್ದಾರೆಂದು ತಿಳಿಸಲಿ । ಆರೋಪಕ್ಕೆ ಮಾಜಿ ಸಚಿವ ರಾಜೂಗೌಡ ತಿರುಗೇಟು ಕನ್ನಡಪ್ರಭ ವಾರ್ತೆ ಸುರಪುರ ಸುರಪುರದ ಕ್ರೀಡಾಂಗಣಕ್ಕೆ ಹಿಂದಿನ ಅವಧಿಯಲ್ಲಿ ಅನುದಾನ ಬಂದಿಲ್ಲ ಎಂದು ಟೀಕಿಸಿದ್ದ ಹಾಲಿ ಶಾಸಕ, ಕಾಂಗ್ರೆಸ್‌ ಪಕ್ಷದ ರಾಜಾ ವೆಂಕಟಪ್ಪ ನಾಯಕ್‌ ವಿರುದ್ಧ ಮಾಜಿ ಸಚಿವ ನರಸಿಂಹ ನಾಯಕ್ (ರಾಜೂಗೌಡ) ವಾಗ್ದಾಳಿ ನಡೆಸಿದ್ದಾರೆ. ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಇತ್ತೀಚೆಗೆ ನಡೆದ ಕ್ರೀಡಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕರು ಕ್ರೀಡಾಂಗಣಕ್ಕೆ ಅನುದಾನ ತಂದಿಲ್ಲ ಎಂದಿದ್ದಾರೆ. ಹಾಗಾದರೆ ನಾರಾಯಣಪುರ ಮತ್ತು ಕೊಡೇಕಲ್‌ನಲ್ಲಿ ನಿರ್ಮಿಸಿರುವ, ಸುರಪುರ ಕ್ರೀಡಾಂಗಣಕ್ಕೆ ಅನುದಾನ ತಂದವರು ಯಾರು ಎಂದು ಪ್ರಶ್ನಿಸಿದರು. ಸುರಪುರ ಮತಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಮತ್ತು ಆಗುತ್ತಿರುವ ಕ್ರೀಡಾಂಗಣಗಳಿಗೆ ಹಾಲಿ ಶಾಸಕರು ಎಷ್ಟು ಅನುದಾನ ತಂದಿದ್ದಾರೆ ತಿಳಿಸಬೇಕು. ಸುಖಾಸುಮ್ಮನೆ ಆರೋಪ ಮಾಡುವುದರಲ್ಲಿ ಹುರುಳಿಲ್ಲ ಎಂದು ರಾಜೂಗೌಡ ತಿರುಗೇಟು ನೀಡಿದರು. ನಾನೊಬ್ಬ ಕ್ರಿಕೆಟ್ ಪಟು, ಕ್ರೀಡಾಪಟುಗಳಿಗೆ ವೈಯಕ್ತಿಕವಾಗಿ ಸಹಾಯ ಹಸ್ತ ಚಾಚಿದ್ದೇನೆ. ಶಾಸಕನಾಗಲು ಕ್ರೀಡಾಪಟುವಾಗಿದ್ದರಿಂದ ಸಾಧ್ಯವಾಗಿದೆ. ವಿದೇಶಕ್ಕೆ ಹೋಗಲು ಸಹಾಯ ಮಾಡಿದ್ದೇನೆ. ಎಂದಿಗೂ ಜಾತಿ, ಪಕ್ಷ ಬೇಧ ಮಾಡಿಲ್ಲ. ಮತಕ್ಷೇತ್ರದ ಜನರೆಲ್ಲರೂ ನನಗೆ ಒಂದೇ ಎಂದು ತಿಳಿಸಿದರು. 2010ರಲ್ಲಿ ಬಿಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ಕಲಬುರಗಿಯಲ್ಲಿ ಕ್ಯಾಬಿನೆಟ್ ಸಭೆ ನಡೆಯಿತು. ಆಗ ವಿವಿಧ ಕಾಮಗಾರಿಗಳಿಗೆ ನಗರೋತ್ಥಾನ ಯೋಜನೆಯಡಿ 126 ಕೋಟಿ ರು.ಗಳ ನೀಡಲಾಯಿತು. ಇದರಲ್ಲಿ ಸುರಪುರ ಕ್ರೀಡಾಂಗಣಕ್ಕೆ 3 ಕೋಟಿ ರು. ನೀಡಲಾಗಿದೆ. 2009 ರಿಂದ 2015ರಲ್ಲಿ ನಿರ್ಮಾಣವಾಗಲಿಲ್ಲ. ನಿರ್ಮಿತಿ ಕೇಂದ್ರದವರೆಗೆ ಕಾಮಗಾರಿ ನೀಡಲಾಯಿತು. ಪುನಃ 2018ರಲ್ಲಿ ನಿರ್ಮಿತಿ ಕೇಂದ್ರದ ಎಸ್‌ಆರ್ ರೇಟ್‌ನಂತೆ ಕಾಮಗಾರಿ ಮಾಡಲು ಸಾಧ್ಯವಿಲ್ಲ ಅಂದಾಗ ಮತ್ತೆ ಕೆಕೆಆರ್‌ಡಿಬಿ ನಡಿ 2.50 ಕೋಟಿ ರು. ಅನುದಾನ ಇಟ್ಟಿದ್ದೇನೆ. ನಾಲ್ಕು ಬಾರಿ ಶಾಸಕರಾಗಿರುವ ಅವರು ಎಷ್ಟು ಕೋಟಿ ಅನುದಾನ ನೀಡಿದ್ದಾರೆ ಬಹಿರಂಗ ಪಡಿಸಲಿ ಎಂಬುದಾಗಿ ಶಾಸಕ ನಾಯಕರಿಗೆ ಸವಾಲೆಸೆದರು. ಇತ್ತೀಚೆಗೆ ಎಸ್‌ಟಿ ಬಾಲಕಿಯರ ವಸತಿ ನಿಲಯಕ್ಕೆ ಹಾಲಿ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು. ಅದಕ್ಕೆ ಅನುದಾನ ಯಾವ ಯೋಜನೆಯಡಿ ಬಂದಿದೆ ಬಹಿರಂಗಪಡಿಸಬೇಕು. ನಾವು (ಬಿಜೆಪಿ ಸರ್ಕಾರ) ತಂದ ಅನುದಾನಲ್ಲಿ ಉದ್ಘಾಟನಾ ಭಾಗ್ಯ ಅವರಿಗೆ ದೊರೆತಿದೆ. ವ್ಯರ್ಥ ಆರೋಪ ಮಾಡುವುದು ಗೌರವ ಮತ್ತು ಹಿರಿತನಕ್ಕೆ ಶೋಭೆ ತರುವುದಿಲ್ಲ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ್‌ ವಿರುದ್ಧ ವಾಗ್ದಾಳಿ ನಡೆಸಿದರು. =ಬಾಕ್ಸ್‌= ಕಾಂಗ್ರೆಸ್‌ ಸರ್ಕಾರ ಕೃಷಿಕರ ಮರೆತು ಕೈಗಾರಿಕೆಗೆ ಆದ್ಯತೆ ನೀಡಿದೆ ಕಾಂಗ್ರೆಸ್ ಸರಕಾರ ಕೃಷಿಕರನ್ನು ಮರೆತು ಕೈಗಾರಿಕೆಗೆ ಆದ್ಯತೆ ನೀಡಿದಂತಿದೆ. ನಮ್ಮ ಭಾಗಕ್ಕೆ ನೀರು ಬಿಡದಿದ್ದರೆ ಭತ್ತ ಒಣಗಿ ಹೋಗುತ್ತದೆ. ಡ್ಯಾಂನಲ್ಲಿರುವ ನೀರನ್ನು ಬಿಡುವಂತೆ ರಾಯಚೂರು, ಕಲಬುರಗಿ, ಯಾದಗಿರಿ ಜಿಲ್ಲೆಯ ಶಾಸಕರು ಸಂಘಟಿತರಾಗಿ ಹೋರಾಟ ಮಾಡಬೇಕು ಎಂದು ಆಗ್ರಹಿಸಿದರು. ನಾರಾಯಣಪುರ ಜಲಾಶಯದಲ್ಲಿ 50 ಟಿಎಮ್‌ಸಿ ನೀರು ಸಂಗ್ರಹವಿದೆ. ಕುಡಿಯಲು ಮತ್ತು ಕೈಗಾರಿಕೆಗೆ ಎಂಬ ಮುಂದಾಲೋಚನೆಯಲ್ಲಿ ಇಷ್ಟು ನೀರು ಸಂಗ್ರಹ ಮಾಡಿರುವುದು ಇತಿಹಾಸವೇ ಇಲ್ಲ ಎಂದರು. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ನೀರಾವರಿ ಸಲಹಾ ಸಮಿತಿ ಸಭೆಗೆ ಆಯ್ಕೆ ಮಾಡುವ ಅಧ್ಯಕ್ಷರನ್ನು ನೀರಾವರಿ ಜಿಲ್ಲೆಗಳನ್ನು ಹೊರತುಪಡಿಸಿ ಬೇರೆಯವರಿಗೆ ಅಧ್ಯಕ್ಷ ಸ್ಥಾನ ನೀಡಬೇಕು. ಕೆಲ ಜಿಲ್ಲೆಯವರಿಗೆ ಅಧ್ಯಕ್ಷ ಸ್ಥಾನ ನೀಡಿದರೆ ಅವರ ಜಿಲ್ಲೆಯ ಹಿತಕಾಪಾಡಲು ಮುಂದಾಗುತ್ತಾರೆ. ವಿಜಯಪುರ, ಬಾಗಲಕೋಟೆ ಜಿಲ್ಲೆಯ ಭಾಗದಲ್ಲಿ ಕಬ್ಬು ಅತಿಹೆಚ್ಚಾಗಿ ಬೆಳೆಯುತ್ತಾರೆ. ಇದಕ್ಕೆ ಹೆಚ್ಚು ನೀರು ಬೇಕು. ಅಲ್ಲದೆ ಅಧಿಕ ಸಕ್ಕರೆ ಕಾರ್ಖಾನೆಗಳಿವೆ. ವಾಮಮಾರ್ಗದಲ್ಲೇ ಮೋಟಾರ್‌ನಿಂದ ನೂರಾರು ಟಿಎಂಸಿನ್ನು ಕೊಳ್ಳೆ ಹೊಡೆಯುತ್ತಾರೆ. ಆಲಮಟ್ಟಿ ಮತ್ತು ನಾರಾಯಣಪುರ ಡ್ಯಾಂನಲ್ಲಿ ನೀರಿದ್ದು, ನಿರಂತರವಾಗಿ ನೀರು ಹರಿಸಬೇಕು ಎಂದು ಒತ್ತಾಯಿಸಿದರು. 2ನೇ ಬೆಳೆಗೆ ನೀರಿಲ್ಲ: ಹಿಂಗಾರು ಬೆಳೆಗೆ ಡ್ಯಾಂನಿಂದ ನೀರು ಹರಿಸುವುದಿಲ್ಲ ಎಂಬುದಾಗಿ ಈಗಾಗಲೇ ನೀರಾವರಿ ಸಚಿವರು ತಿಳಿಸಿದ್ದಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ ರಾಜೂಗೌಡ, ರೈತರ ಹಿತ ಕಾಪಾಡಲು ಎರಡನೇ ಬೆಳೆಗೆ ನೀರು ಒದಗಿಸುವ ಕೆಲಸ ಕಾಂಗ್ರೆಸ್ ಸರಕಾರ ಮಾಡಲಿ ಎಂದು ಆಗ್ರಹಿಸಿದರು. ಸುರಪುರ ಮತಕ್ಷೇತ್ರದಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದೆ. ಡಬಲ್ ಚಾರ್ಜ್ ಕೊಡುತ್ತೇವೆ, ರೈತರಿಗೆ ವಿದ್ಯುತ್ ಕೊಡಲು ಹೇಳಿ ಎಂಬುದಾಗಿ ಪೋನ್ ಮಾಡುತ್ತಾರೆ. ನಗರ ಮತ್ತು ಕೈಗಾರಿಕೆಗಳಿಗೆ ವಿದ್ಯುತ್ ಪೂರೈಸುತ್ತಾರೆ, ರೈತರಿಗೆ ಮಾತ್ರ ವಿದ್ಯುತ್‌ ಸಮಸ್ಯೆ ಎಂಬ ಸಬೂಬು. ಅಧಿಕಾರಿಗಳು ಇವರ ಜತೆ ಶಾಮೀಲಾಗಿದ್ದಾರೆ. ಅಲ್ಲದೆ ಅವರಿಂದ ಹಣ ಬರುತ್ತದೆ ಅನ್ನುವ ವ್ಯಾಮೋಹವಿದೆ. ಇದರಿಂದ ಜನರಿಗೆ ವಿದ್ಯುತ್ ಕಡಿತಗೊಳಿಸಿ ಕೈಗಾರಿಕೆಗಳಿಗೆ ನೀಡುತ್ತಾರೆ ಎಂದು ಆರೋಪಿಸಿದರು. - - - - 16ವೈಡಿಆರ್‌12 : ನರಸಿಂಹ ನಾಯಕ್‌ (ರಾಜೂಗೌಡ) ಮಾಜಿ ಸಚಿವರು. - - -

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ