ಸಾಗರ ರಂಗಕರ್ಮಿ ಚಿದಂಬರಾವ್ ಜಂಬೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

KannadaprabhaNewsNetwork |  
Published : Nov 01, 2023, 01:00 AM ISTUpdated : Nov 01, 2023, 01:01 AM IST
ಚಿದಂಬರರಾವ್ ಜಂಬೆ | Kannada Prabha

ಸಾರಾಂಶ

ಬಿ.ವಿ.ಕಾರಂತರ ಅತ್ಯಂತ ಆಪ್ತ ಶಿಷ್ಯರಲ್ಲೊಬ್ಬರು, ಕಾರಂತರ ಗರಡಿಯಲ್ಲಿ ಪಳಗಿದವರು

ಕನ್ನಡಪ್ರಭ ವಾರ್ತೆ ಸಾಗರ ನಾಡಿನ ಹೆಸರಾಂತ ರಂಗ ನಿರ್ದೇಶಕ ಚಿದಂಬರಾವ್ ಜಂಬೆ ಅವರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ. ತಾಲೂಕಿನ ಅಡ್ಡೇರಿ ಗ್ರಾಮದ ಜಂಬೆ ಅವರು ರಂಗಭೂಮಿ ಕ್ಷೇತ್ರದಲ್ಲಿ ಮಾಡಿರುವ ಅನನ್ಯ ಸೇವೆ ಪರಿಗಣಿಸಿ ರಾಜ್ಯ ಸರ್ಕಾರ ಈ ಪ್ರಶಸ್ತಿಯನ್ನು ನೀಡುತ್ತಿದೆ. ಕೆಳದಿಯ ಭಾರತಿ ಕಲಾವಿದರು ಸಂಸ್ಥೆಯ ಸಂಗ್ಯಾ-ಬಾಳ್ಯಾ ನಾಟಕದ ಮೂಲಕ ರಂಗಭೂಮಿಯನ್ನು ಪ್ರವೇಶಿಸಿದ ಜಂಬೆ ಅವರು ಅವಕಾಶಗಳನ್ನು ಅರಸಿ ಬೆಂಗಳೂರು ಸೇರಿ ಅಲ್ಲಿಂದ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ರಂಗಭೂಮಿಯ ನಿರ್ದೇಶನದಲ್ಲಿ ಪದವಿ ಪಡೆದರು. ಅನಂತರ ಹಲವು ವರ್ಷಗಳ ಕಾಲ ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ನಂತರ ಮೈಸೂರಿನ ರಂಗಾಯಣ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ನಿವೃತ್ತಿ ನಂತರವೂ ರಂಗಭೂಮಿ ನಂಟನ್ನು ಬಿಡದ ಜಂಬೆ ಅವರು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ, ಭೂಪಾಲ್, ತ್ರಿಷೂರ್ ಹೀಗೆ ದೇಶದ ಅನೇಕ ರಂಗ ಶಾಲೆಗಳಲ್ಲಿ ಅತಿಥಿ ಉಪನ್ಯಾಸಕ, ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಸಾಗರದ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಜಿ.ಎಸ್. ಭಟ್ಟರ ಗ್ಲಾನಿ ನಾಟಕವನ್ನು ಸಾಗರದ ಉದಯ ಕಲಾವಿದರಿಗೆ ನಿರ್ದೇಶಿಸುತ್ತಿದ್ದಾರೆ. ಬಿ.ವಿ.ಕಾರಂತರ ಅತ್ಯಂತ ಆಪ್ತ ಶಿಷ್ಯರಲ್ಲೊಬ್ಬರಾದ ಚಿದಂಬರ ರಾವ್‌ ಜಂಬೆ ಅವರು ಕಾರಂತರ ಗರಡಿಯಲ್ಲಿ ಪಳಗಿದವರು. ನೀನಾಸಮ್ ರಂಗ ಶಿಕ್ಷಣ ಕೇಂದ್ರದ ಹಿರಿಯ ವಿದ್ಯಾರ್ಥಿಗಳಿಂದ ರಂಗಭೂಮಿಯ ದ್ರೋಣಾಚಾರ್ಯ ಎಂದೇ ಕರೆಸಿಕೊಳ್ಳುತ್ತಿದ್ದ ಇವರು, ನೀನಾಸಮ್ ತಿರುಗಾಟಕ್ಕೆ ಚಿರೇಬಂದಿವಾಡೆ, ಮೂವರು ಅಕ್ಕತಂಗಿಯರು, ಚಾಣಕ್ಯ ಪ್ರಪಂಚ, ಪುಂಟಿಲಾ, ಭಾಸಭಾರತ, ತಲೆದಂಡ ಮುಂತಾದ ನಾಟಕಗಳನ್ನು ನಿರ್ದೇಶಿಸುವ ಮೂಲಕ ತಿರುಗಾಟಕ್ಕೊಂದು ಘನತೆ ತಂದುಕೊಟ್ಟರು. ಯಕ್ಷಗಾನವನ್ನು ಬಹುವಾಗಿ ಮೆಚ್ಚಿಕೊಂಡಿದ್ದ ಜಂಬೆ ಅವರು ಯಕ್ಷಗಾನದಲ್ಲಿನ ಸಾಧ್ಯತೆಗಳನ್ನು ನಾಟಕಗಳಲ್ಲಿ ಸಮರ್ಥವಾಗಿ ಬಳಸಿಕೊಂಡವರು. - - - -ಫೋಟೋ: ಚಿದಂಬರ ರಾವ್ ಜಂಬೆ

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ