ಶರಣು ಸೊಲಗಿ
ಅನ್ನದಾನೀಶ್ವರ ಮಹಾಶಿವಯೋಗಿಗಳು ಮೂಲತಃ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಪೀರಾಪುರ ಗ್ರಾಮದ ಹಿರೇಮಠದ ವೀರಭದ್ರಯ್ಯ ಹಾಗೂ ಬಸವಮ್ಮ ದಂಪತಿಗಳಿಗೆ ತೃತೀಯ ಪುತ್ರರಾಗಿ 1942ರ ಮೇ 4 ರಂದು ಜನಿಸಿದರು. 1969ರ ಜನೇವರಿ 31ರಂದು ಅನ್ನದಾನೀಶ್ವರ ಶ್ರೀಗಳು ಮುಂಡರಗಿ ಅನ್ನದಾನೀಶ್ವರ ಮಠದ 10ನೇ ಪೀಠಾಧಿಪತಿಯಾಗಿ ಅಧಿಕಾರ ಸ್ವೀಕರಿಸಿದರು.
ಮುಂಡರಗಿ ಅನ್ನದಾನೀಶ್ವರ ಮಠವು ಅವಿರಳಜ್ಞಾನಿ ಶ್ರೀ ಚೆನ್ನಬಸವಣ್ಣನವರ ಬಳಿವಿಡಿದು ಬಂದ ಮಠವಾಗಿದೆ. ಶ್ರೀಗಳು ಪೀಠಾಧಿಪತಿಯಾದ ನಂತರ ಮುಂಡರಗಿ ಪಟ್ಟಣವೂ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆ.ಜಿ ಯಿಂದ ಪಿ.ಜಿ. ಹಂತದವರೆಗೆ ಒಟ್ಟು 32ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ, ಗ್ರಾಮೀಣ ಭಾಗದ ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ ಮಾಡುವ ಮೂಲಕ ಅನ್ನದಾನೀಶ್ವರ ಶ್ರೀಗಳವರು ಅಕ್ಷರ ಕ್ರಾಂತಿ ಮಾಡಿದ್ದಾರೆ. ಸಾವಿರಾರು ಕುಟುಂಬಳಿಗೆ ಕೆಲಸ ಕೊಟ್ಟು ಅನ್ನಕ್ಕೆ ಆಸರೆಯಾಗಿದ್ದಾರೆ.ಶ್ರೀಗಳು ಕವಿಗಳಾಗಿ, ವಿಮರ್ಶಕರಾಗಿ, ಸಂಪಾದಕರಾಗಿ, ವ್ಯಾಖ್ಯಾನಕಾರರಾಗಿ, ವಚನಕಾರರಾಗಿ, ಚುಟುಕು ಸಾಹಿತಿಗಳಾಗಿ ಸಾಹಿತ್ಯದ ಹಲವು ಆಯಾಮಗಳಲ್ಲಿ ತಮ್ಮದೇಯಾದ ಸಾಹಿತ್ಯ ಸಾಧನೆ ಮಾಡಿದ್ದಾರೆ. ಇವರ 160 ಕ್ಕೂ ಹೆಚ್ಚು ಕೃತಿಗಳನ್ನು 19 ಸಂಪುಟಗಳಲ್ಲಿ ಪ್ರಕಟಿಸಿ ಸಾರಸ್ಪತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಶ್ರೀಮಠದಿಂದ 270 ಕ್ಕೂ ಹೆಚ್ಚು ವಿವಿಧ ಲೇಖಕರ ಕೃತಿಗಳನ್ನು ಪ್ರಕಟಿಸಿ ವಿದ್ವಾಂಸರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪ್ರತಿವರ್ಷ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಫಲಪುಷ್ಪ ಪ್ರದರ್ಶನ, ಯೋಗ ಶಿಬಿರಗಳು, ಆರೋಗ್ಯ ಶಿಬಿರದ ಮೂಲಕ ರಕ್ತದಾನ, ನೇತ್ರದಾನ, ಉಚಿತ ಕನ್ನಡಕ ವಿತರಣೆ ಹಾಗೂ ಬಡ ಮತ್ತು ಮಧ್ಯಮ ಕುಟುಂಬಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪ್ರತಿ ವರ್ಷ ಅನ್ನದಾನೀಶ್ವರ ಯಾತ್ರಾ ಮಹೋತ್ಸವದ ಸಂದರ್ಭದಲ್ಲಿ ನೂರಾರು ಸರ್ವಧರ್ಮ ಸಾಮೂಹಿಕ ವಿವಾಹಗಳನ್ನು ಮಾಡುತ್ತಾ ಬಂದಿದ್ದಾರೆ.
ಮಠವೆಂದರೆ ಕೇವಲ ಭಕ್ತಿಕೇಂದ್ರವಲ್ಲ, ಅದು ಸಮಾಜದ ಶಕ್ತಿಯಾಗಬೇಕು ಎಂಬುದನ್ನು ಕೃತಿಯಲ್ಲಿ ತೋರಿಸಿದವರು ಮುಂಡರಗಿ ಜ.ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳವರು. ಅಕ್ಷರ ಕ್ರಾಂತಿ ಹಾಗೂ ಭೂದಾನದ ಮೂಲಕ ಇಡೀ ನಾಡಿಗೆ ಮಾದರಿಯಾದ ಶ್ರೀಗಳಿಗೆ ಸಂದ ರಾಜ್ಯೋತ್ಸವ ಪ್ರಶಸ್ತಿ ಇಡೀ ಗದಗ ಜಿಲ್ಲೆಯ ಹೆಮ್ಮೆ. ಸರ್ಕಾರದಿಂದ ಅಂತಹ ಕಾರ್ಯಕ್ರಮದ ಆಯೋಜನೆ ಅವಕಾಶ ದೊರೆತಿರುವುದು ನಮ್ಮ ಸುದೈವ ಎಂದು ಗದಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಬಳ್ಳಾರಿ ತಿಳಿಸಿದ್ದಾರೆ.