ಪಾಲಾಕ್ಷ ಬಿ.ತಿಪ್ಪಳ್ಳಿ ಯಲಬುರ್ಗಾ
ಹಿಂದೂಸ್ತಾನಿ ಶಾಸ್ತ್ರೀಯ ಹಾಗೂ ಸುಗಮ ಸಂಗೀತಗಾರ ತಾಲೂಕಿನ ಮುಧೋಳ ಗ್ರಾಮದ ನಿವಾಸಿ ಪಂ.ದೇವೇಂದ್ರಕುಮಾರ ಪತ್ತಾರ್ ಅವರ ೫೦ ವರ್ಷದ ಸಂಗೀತ ಸೇವೆಗೆ ೨೦೨೫ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.ಜಾನಪದ ಕಲಾವಿದ ಯಮುನಮ್ಮ- ಮಳಿಯಪ್ಪ ಪತ್ತಾರ ದಂಪತಿಯ ಪುತ್ರ ದೇವೇಂದ್ರಕುಮಾರ ಜನಿಸಿದ್ದು ಡಿ. ೧೪ರ ೧೯೫೫ರಲ್ಲಿ. ಸಂಗೀತ ಗುರುಗಳಾದ ಡಾ. ಪಂ.ಪುಟ್ಟರಾಜ ಕವಿ ಗವಾಯಿಗಳು. ಗದಗಿನ ವಿರೇಶ್ವರ ಪುಣ್ಯಾಶ್ರಮದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ, ಗ್ವಾಲಿಯರ್ ಘರಾಣಾ ಪದ್ಧತಿಯಲ್ಲಿ ಸುಗಮ ಸಂಗೀತ ಹಾಗೂ ಪಂಚಾಕ್ಷರ ಗದಗ ಘರಾಣಾ ಪರಂಪರೆಯಲ್ಲಿ ೧೨ ವರ್ಷಗಳ ಕಾಲ ತರಬೇತಿ ಪಡೆದಿದ್ದಾರೆ. ಪತ್ನಿ ಕಸ್ತೂರಿ ಕವಿಯಿತ್ರಿ, ಪುತ್ರಿ ಚೇತನಾ ಕೂಡ ತಂದೆಯ ಹಾದಿಯಲ್ಲಿ ಸಾಗುತ್ತಿದ್ದಾರೆ.
ಹೈ ಶ್ರೇಣಿಯ ಕಲಾವಿದ: ೧೯೭೮ರಲ್ಲಿ ವಿದ್ವತ್ ಗ್ರೇಡ್ ಹಾಗೂ ಗಂಧರ್ವ ಮಹಾವಿದ್ಯಾಲಯ ಮಂಡಳಿಯ ಸಂಗೀತ ವಿಶಾರದ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ. ೧೯೮೩ರಿಂದ ಆಕಾಶವಾಣಿ ಧಾರವಾಡ-ಗುಲ್ಬರ್ಗ ಕೇಂದ್ರದ ಬಿ.ಹೈ ಶ್ರೇಣಿಯ ಕಲಾವಿದರಾಗಿ ಕಾರ್ಯಕ್ರಮ ನೀಡಿದ್ದಾರೆ. ೧೯೮೨ರಲ್ಲಿ ಸಂಡೂರಿನ ಎಸ್‌ಆರ್‌ಎಸ್ ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಆರಂಭಿಸಿ, ಗಾನಯೋಗಿ ಪಂ.ಪಂಚಾಕ್ಷರಿ ಗವಾಯಿಗಳ ಹೆಸರಿನಲ್ಲಿ ಸಂಗೀತ ಶಾಲೆ ಆರಂಭಿಸಿ ನೂರಾರು ವಿದ್ಯಾರ್ಥಿಗಳಿಗೆ ಉಚಿತ ಸಂಗೀತ ತರಬೇತಿ ನೀಡಿದ್ದಾರೆ.೯೦೦ಕ್ಕೂ ಅಧಿಕ ಧ್ವನಿಸುರುಳಿ: ದೇವೇಂದ್ರಕುಮಾರ ಪತ್ತಾರ ಅವರು ೯೦೦ಕ್ಕೂ ಅಧಿಕ ಧ್ವನಿಸುರುಳಿ, ಸಿಡಿಗಳಿಗೆ ಸಂಗೀತ ಸಂಯೋಜನೆ, ಹಾಡುಗಾರಿಕೆ ಸಂಗೀತ ನಿರ್ದೇಶನ ಮಾಡಿ ಹಲವಾರು ಧ್ವನಿಸುರುಳಿಗಳಲ್ಲಿ ಹಾಡಿದ್ದಾರೆ.
ಹಲವಾರು ಪ್ರಮುಖ ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಇವರದು. ಎದೆತುಂಬಿ ಹಾಡುವೆನು ಕಾರ್ಯಕ್ರಮದ ಮುಖ್ಯ ಅತಿಥಿ ಕಲಾವಿದರಾಗಿ ಎಸ್‌ಪಿಬಿ ಅವರೊಂದಿಗೆ ಸಂಗೀತ ಸೇವೆ, ಪಂಚಾಕ್ಷರಿ ಗವಾಯಿಗಳ ಆರಾಧನಾ ಸಂಗೀತೋತ್ಸವದಲ್ಲಿ ಪ್ರತಿವರ್ಷ ಶಾಸ್ತ್ರೀಯ ಗಾಯನ ಸೇವೆ, ಬಳ್ಳಾರಿಯಲ್ಲಿ ವಾರ್ಷಿಕ ಸಂಗೀತ ಸಮ್ಮೇಳನ ಗಾಯನ, ಹಂಪಿ, ಆನೆಗುಂದಿ, ಇಟಗಿ ಹಾಗೂ ಪುರಂದರ ಉತ್ಸವಗಳಲ್ಲಿ ಗಾಯನ ಸೇವೆ ಮಾಡಿದ್ದಾರೆ.ಹಲವಾರು ಪ್ರಶಸ್ತಿ ಪುರಸ್ಕಾರಗಳು ಒಲಿದು ಬಂದಿವೆ. ಇದೀಗ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ನನ್ನ ಜೀವನದ ೫೦ ವರ್ಷಗಳ ಸಂಗೀತ ಸೇವೆ ಮತ್ತು ಸಾಧನೆ ಗುರುತಿಸಿ ಸರ್ಕಾರ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಖುಷಿ ತಂದಿದೆ.ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಕಷ್ಟು ಸಂಗೀತ ಸೇವೆ ನೀಡಲಾಗಿದೆ. ಅಲ್ಲದೆ ನೂರಾರು ಮಕ್ಕಳಿಗೆ ಉಚಿತ ಸಂಗೀತ ಸೇವೆ ನೀಡಲಾಗಿದ್ದು ಅವರು ಒಳ್ಳೆಯ ಬದುಕು ಕಟ್ಟಿಕೊಂಡಿದ್ದಾರೆ. ಸೌಲಭ್ಯ ಇಲ್ಲದ ಕಾಲದಲ್ಲಿ ಸಂಗೀತ ಸಂಘ ಕಟ್ಟಿಕೊಂಡು ಕಾರ್ಯಕ್ರಮ ನಡೆಸಲಾಗಿದೆ. ನನ್ನ ಸಂಗೀತ ಗುರುಗಳಾದ ಪುಟ್ಟರಾಜ ಗವಾಯಿಗಳ ಆಶೀರ್ವಾದ ಮತ್ತು ನಮ್ಮ ಭಾಗದ ಜನರ ಪ್ರೀತಿಯ ಅಭಿಮಾನ, ಆರೈಕೆಗೆ ಚಿರಋಣಿ ಎಂದು ಹಿರಿಯ ಸಂಗೀತ ಕಲಾವಿದ ದೇವೇಂದ್ರಕುಮಾರ ಪತ್ತಾರ ತಿಳಿಸಿದ್ದಾರೆ.