ಬಳ್ಳಾರಿ: ಶೈಕ್ಷಣಿಕ ಸಂಶೋಧನೆಯಲ್ಲಿ ಭಾರತವು ವಿಶ್ವದ ಅಗ್ರಮಾನ್ಯ ರಾಷ್ಟ್ರಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರೊ.ಎಸ್.ವೈ. ಸುರೇಂದ್ರಕುಮಾರ್ ಅಭಿಪ್ರಾಯಪಟ್ಟರು.ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗ ಹಾಗೂ ಧಾರವಾಡದ ಬಹುಶಿಸ್ತೀಯ ಸಂಶೋಧನೆ ಮತ್ತು ಅಧ್ಯಯನ ಕೇಂದ್ರ (ಸಿಎಂಡಿಆರ್) ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನಗಳ ಸಂಶೋಧನಾ ವಿಧಾನಗಳು ಕುರಿತಾದ ರಾಷ್ಟ್ರೀಯ ಕಾರ್ಯಾಗಾರದ ದಿಕ್ಸೂಚಿ ಭಾಷಣಕಾರರಾಗಿ ಅವರು ಮಾತನಾಡಿದರು.
ಸಂಶೋಧನಾ ಲೇಖನಗಳು, ಪ್ರಬಂಧಗಳು, ಪುಸ್ತಕಗಳನ್ನು ಹೊರತರುವಲ್ಲಿ ಭಾರತವು 4ನೇ ಅತಿದೊಡ್ಡ ದೇಶವಾಗಿದೆ. ಕಾಲಕಾಲಕ್ಕೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ದಿಂದ ಮಾರ್ಪಾಟಾಗುವ ಕಾಯ್ದೆಗಳಿಂದ ಅಥವಾ ವಿಶ್ವವಿದ್ಯಾಲಯಗಳ ಆಡಳಿತ ಅಡೆ-ತಡೆಗಳಿಂದ ಉತ್ತಮ ಸಂಶೋಧನಾ ಪ್ರಾಜೆಕ್ಟ್ಗಳು ಹೊರಬರುವುದು ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿಯ ಕುಲಸಚಿವ ಸಿ.ನಾಗರಾಜು ಅವರು ಮಾತನಾಡಿ, ಸ್ವಾತಂತ್ರ್ಯ ಪೂರ್ವದಿಂದ ಇಲ್ಲಿವರೆಗೆ ಬೆಳೆಯುತ್ತಿರುವ ದೇಶದ ಆರ್ಥಿಕತೆಗೆ ಸಂಶೋಧನೆಗಳೆ ಮುಖ್ಯ ಕಾರಣವಾಗಿವೆ. ದೇಶದಲ್ಲಿ ಉಂಟಾದ ಹಸಿರು ಕ್ರಾಂತಿ, ಹಳದಿ ಕ್ರಾಂತಿ ಹಾಗೂ ಶ್ವೇತ ಕ್ರಾಂತಿಗಳು ಇದಕ್ಕೆ ಸ್ಪಷ್ಟ ನಿದರ್ಶನವಾಗಿವೆ. ನಿಜವಾದ ಸಂಶೋಧಕರು ಶಿಸ್ತು, ಶ್ರದ್ಧೆ, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡರೆ ಮಾತ್ರ ಗುಣಮಟ್ಟ ಕಾಯ್ದುಕೊಳ್ಳಬಹುದು ಎಂದು ತಿಳಿಸಿದರು.ಸಿಎಂಆರ್‌ಡಿ ಕೇಂದ್ರದ ಕೋರ್ಸ್ ನಿರ್ದೇಕರಾದ ಪ್ರೊ.ಟಿ.ಬ್ರಹ್ಮಾನಂದಮ್ ಕಾರ್ಯಕ್ರಮದ ರೂಪುರೇಷೆಗಳ ಕುರಿತು ವಿವರಿಸಿದರು.
ಸಿಎಂಆರ್‌ಡಿ ಕೇಂದ್ರದ ಸದಸ್ಯರಾದ ಡಾ.ಸಿದ್ದಲಿಂಗಯ್ಯ ಹಾಗೂ ವಿವಿಯ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ವಿಜಯಕುಮಾರ್ ವೇದಿಕೆಯಲ್ಲಿದ್ದರು.ಎರಡು ದಿನಗಳ ಕಾರ್ಯಾಗಾರದಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿರುವ 80ಕ್ಕೂ ಹೆಚ್ಚು ಅಧ್ಯಾಪಕರು, ಸಂಶೋಧನಾರ್ಥಿಗಳು ಇದ್ದರು. ಅರ್ಥಶಾಸ್ತ್ರ ವಿಭಾಗದ ಡಾ.ಪಾಂಡುರಂಗ ನಿರೂಪಿಸಿ, ವಂದಿಸಿದರು.
ವಿವಿಯ ಸಮಾಜ ವಿಜ್ಞಾನ ನಿಕಾಯದ ಡೀನರು, ಎಲ್ಲ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿ ಇದ್ದರು.