ರಾಜ್ಯೋತ್ಸವ: ಭುವನೇಶ್ವರಿ ದೇವಿಯ ಅದ್ಧೂರಿ ಮೆರವಣಿಗೆ

KannadaprabhaNewsNetwork |  
Published : Nov 19, 2026, 02:15 AM IST
ರಾಜ್ಯೋತ್ಸವ | Kannada Prabha

ಸಾರಾಂಶ

ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು, ಕನ್ನಡ ಮಣ್ಣನು ಮರಿಬ್ಯಾಡ ನೀ ಅಭಿಮಾನಿ... ಎಂದು ಕನ್ನಡ ನಾಡನ್ನು ವರ್ಣಿಸುವ ಹಾಡುಗಳ ಅಬ್ಬರ. ಅದಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ಯುವ ಸಮೂಹ. ಕಣ್ಮನ ಸೆಳೆಯುತ್ತಿದ್ದ ಸ್ತಬ್ಧಚಿತ್ರಗಳ ಸಾಲು.

ಹುಬ್ಬಳ್ಳಿ:

ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು, ಕನ್ನಡ ಮಣ್ಣನು ಮರಿಬ್ಯಾಡ ನೀ ಅಭಿಮಾನಿ... ಎಂದು ಕನ್ನಡ ನಾಡನ್ನು ವರ್ಣಿಸುವ ಹಾಡುಗಳ ಅಬ್ಬರ. ಅದಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ಯುವ ಸಮೂಹ. ಕಣ್ಮನ ಸೆಳೆಯುತ್ತಿದ್ದ ಸ್ತಬ್ಧಚಿತ್ರಗಳ ಸಾಲು. ಎಲ್ಲರ ಕೈಗಳಲ್ಲಿ ಕನ್ನಡ ಭಾವುಟ.. ಬೊಂಬೆ ಕುಣಿತು, ಡೊಳ್ಳು ಹೆಜ್ಜೆ.!

ಇವು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನಗರದಲ್ಲಿ ಬುಧವಾರ ಹಮ್ಮಿಕೊಂಡ ನಾಡದೇವಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆಯಲ್ಲಿ ಕಂಡು ಬಂದ ಝಲಕ.

ಬುಧವಾರ ನಗರದ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ, ಮೇಯರ್ ದುರ್ಗಮ್ಮ ಬಿಜವಾಡ ಮೆರವಣಿಗೆಗೆ ಚಾಲನೆ ನೀಡಿದರು. ಸಿದ್ಧಾರೂಢ ಮಠದಿಂದ ಆರಂಭವಾದ ಮೆರವಣಿಗೆ ಇಲ್ಲಿಯ ಇಂದಿರಾ ಗಾಜಿನ ಮನೆಯ ವರೆಗೆ ನಡೆಯಿತು.

ಕನ್ನಡಾಂಬೆಯ ಭಾವಚಿತ್ರ, ಕನ್ನಡಾಂಬೆಯ ಮೂರ್ತಿ, ಆನೆಯ ಮೇಲೆಯ ಭುವನೇಶ್ವರಿ ಭಾವಚಿತ್ರ, ಮಹಾನಗರ ಪಾಲಿಕೆ ವಲಯ ಕಚೇರಿ ಏಳರಿಂದ ಶ್ರೀ ಸಿದ್ಧಾರೂಢಸ್ವಾಮಿ ಮೂರ್ತಿ ಸೇರಿದಂತೆ ವಿವಿಧ ಕಲಾಕೃತಿಗಳ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಿತು. ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕನ್ನಡ ಕ್ರಿಯಾ ಸಮಿತಿಯಿಂದ ಸಿದ್ಧೂರೂಢಸ್ವಾಮಿ ಮಠದ ಕೈಲಾಸಮಂಟಪ ಹಾಗೂ ದೇವಸ್ಥಾನಗಳ ಕಲಾಕೃತಿಗಳು ಜನಮನ ಸೆಳೆದವು. ಜಗ್ಗಲಗಿ ಮೇಳ ಸೇರಿದಂತೆ ಕನ್ನಡ ಅಭಿಮಾನಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಜನಪ್ರತಿನಿಗಳು, ಆಟೋ ಚಾಲಕರು, ಕಲಾ ತಂಡಗಳು ಭಾಗವಹಿಸಿ ಮೆರವಣಿಗೆಗೆ ಮೆರುಗು ತಂದರು. ವಿವಿಧ ಕಲಾತಂಡಗಳು ಪಾಲ್ಗೊಂಡು ವೈವಿಧ್ಯಮ ಕಲೆಗಳನ್ನು ಪ್ರದರ್ಶಿಸಿದವು. ಮಕ್ಕಳು ಸೇರಿದಂತೆ ಮಹಿಳೆಯರು ಕನ್ನಡಾಂಬೆ, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವರ ವೇಷ ಧರಿಸಿ ಸಂಭ್ರಮಿಸಿದರು. ವಿಧಾನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಮಾತನಾಡಿದರು. ಮೇಯರ್ ದುರ್ಗಮ್ಮ ಬಿಜವಾಡ, ಉಪಮೇಯರ್‌ ರತ್ನಾಬಾಯಿ ನಾಝರೆ, ವಿರೋಧ ಪಕ್ಷದ ನಾಯಕ ಮಹ್ಮದ ಇಲಿಯಾಜ್ ಮನಿಯಾರ, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ಶಿವು ಮೆಣಸಿನಕಾಯಿ, ರಾಜಣ್ಣ ಕೊರವಿ, ಸಂಥೀಲಕುಮಾರ, ದೊರಾಜ್ ಮಣಿಕುಂಟ್ಲಾ, ಉಮೇಶಗೌಡ ಕೌಜಗೇರಿ, ವೀಣಾ ಬರದ್ವಾಡ, ಚಂದ್ರಿಕಾ ಮೇಸ್ತ್ರಿ, ಶೀಲಾ ಕಾಟ್ಕರ್, ಪ್ರೀತಿ ಲದವಾ, ಬೀರಪ್ಪ ಖಂಡೇಕರ್, ಇಕ್ಬಾಲ್ ನವಲೂರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಕನ್ನಡ ಭಾಷೆ, ನೆಲ, ಜಲ ಮತ್ತು ಶ್ರೀಮಂತ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯ.ಮಹೇಶ ಟೆಂಗಿನಕಾಯಿ, ಶಾಸಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ: ಕಿಶೋರ ಯಕ್ಷಗಾನ ಸಂಭ್ರಮಕ್ಕೆ ಚಾಲನೆ
ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಿ