ಬೆಳಗಾವಿ ಮೂವರು ಸಾಧಕರಿಗೆ ರಾಜ್ಯೋತ್ಸವ ಗರಿ

KannadaprabhaNewsNetwork |  
Published : Oct 31, 2026, 02:45 AM IST
ಡಿ.ಎಸ್‌.ಚೌಗಲೆ, ಕಾಡಪ್ಪ ಗಾಡಿವಡ್ಡರ, ಸುಜಾತಾ ಜಾಲಿ | Kannada Prabha

ಸಾರಾಂಶ

ಶ್ರೀಶೈಲ ಮಠದಕನ್ನಡಪ್ರಭ ವಾರ್ತೆ ಬೆಳಗಾವಿಕಲೆ, ಸಾಹಿತ್ಯ, ರಂಗಭೂಮಿ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ತಮ್ಮದೇ ಆದ ಸಾಧನೆಯ ಛಾಪು ಮೂಡಿಸಿರುವ ಬೆಳಗಾವಿ ಜಿಲ್ಲೆಯ ಮೂವರು ಗಣ್ಯರಿಗೆ 2026ನೇ ಸಾಲಿನ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಶಿಲ್ಪಕಲೆ ಕ್ಷೇತ್ರದಲ್ಲಿ ಕಾಡಪ್ಪ ಪರಶುರಾಮ ಗಾಡಿವಡ್ಡರ, ಸಂಕೀರ್ಣ ವಿಭಾಗದಲ್ಲಿ ನಾಟಕಕಾರ ಹಾಗೂ ಸಾಹಿತಿ ಡಾ.ಡಿ.ಎಸ್.ಚೌಗಲೆ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಖ್ಯಾತ ಮಕ್ಕಳ ತಜ್ಞೆ ಡಾ.ಸುಜಾತ ಮಲ್ಲಿಕಾರ್ಜುನ ಜಾಲಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿ

ಕಲೆ, ಸಾಹಿತ್ಯ, ರಂಗಭೂಮಿ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ತಮ್ಮದೇ ಆದ ಸಾಧನೆಯ ಛಾಪು ಮೂಡಿಸಿರುವ ಬೆಳಗಾವಿ ಜಿಲ್ಲೆಯ ಮೂವರು ಗಣ್ಯರಿಗೆ 2026ನೇ ಸಾಲಿನ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಶಿಲ್ಪಕಲೆ ಕ್ಷೇತ್ರದಲ್ಲಿ ಕಾಡಪ್ಪ ಪರಶುರಾಮ ಗಾಡಿವಡ್ಡರ, ಸಂಕೀರ್ಣ ವಿಭಾಗದಲ್ಲಿ ನಾಟಕಕಾರ ಹಾಗೂ ಸಾಹಿತಿ ಡಾ.ಡಿ.ಎಸ್.ಚೌಗಲೆ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಖ್ಯಾತ ಮಕ್ಕಳ ತಜ್ಞೆ ಡಾ.ಸುಜಾತ ಮಲ್ಲಿಕಾರ್ಜುನ ಜಾಲಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ರಾಜ್ಯ ಸರ್ಕಾರ ಪ್ರಕಟಿಸಿರುವ 71 ಸಾಧಕರ ಪಟ್ಟಿಯಲ್ಲಿ ಜಿಲ್ಲೆಯ ಮೂವರ ಹೆಸರು ಸೇರ್ಪಡೆಯಾಗಿರುವುದು ಬೆಳಗಾವಿಯ ಸಾಂಸ್ಕೃತಿಕ, ಕಲಾತ್ಮಕ ಹಾಗೂ ವೈದ್ಯಕೀಯ ಕ್ಷೇತ್ರದ ಸಾಧನೆಗೆ ಸಂದ ಗೌರವವಾಗಿದೆ. ನವೆಂಬರ್ 1ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು 25 ಗ್ರಾಂ ಚಿನ್ನದ ಪದಕ ಹಾಗೂ ಐದು ಲಕ್ಷ ರು. ನಗದು ಬಹುಮಾನ ಒಳಗೊಂಡಿದೆ.

----------

ಬಡತನದಿಂದ ಶಿಲ್ಪಕಲೆಯ ಉತ್ತುಂಗಕ್ಕೆ ಕಾಡಪ್ಪ ಗಾಡಿವಡ್ಡರ

ಕಲ್ಲಿಗೆ ಕಲೆಯ ಜೀವ ತುಂಬಿ, ಶಿಲೆಗಳಲ್ಲಿ ಸುಂದರ ಶಿಲ್ಪಗಳನ್ನು ಅರಳಿಸುವ ಮೂಲಕ ಗಮನ ಸೆಳೆದಿರುವ ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದ ಶಿಲ್ಪ ಕಲಾವಿದ ಕಾಡಪ್ಪ ಪರಶುರಾಮ ಗಾಡಿವಡ್ಡರ ಅವರಿಗೆ ಶಿಲ್ಪಕಲೆ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

1965ರ ಫೆಬ್ರವರಿ 24ರಂದು ಕೊಣ್ಣೂರ ಗ್ರಾಮದಲ್ಲಿ ಜನಿಸಿದ ಕಾಡಪ್ಪ ಅವರಿಗೆ ಬಾಲ್ಯದಿಂದಲೇ ಚಿತ್ರಕಲೆ ಮತ್ತು ಶಿಲ್ಪಕಲೆಯಲ್ಲಿ ಅಪಾರ ಆಸಕ್ತಿ ಇತ್ತು. ತಂದೆಯ ಕುಟುಂಬದಲ್ಲಿ ಆರು ಜನ ಮಕ್ಕಳು. ನಾಲ್ವರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು. ಕುಟುಂಬದ ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ಪ್ರಾಥಮಿಕ ಶಿಕ್ಷಣದ ನಂತರ ಓದು ಮುಂದುವರಿಸಲು ಸಾಧ್ಯವಾಗಲಿಲ್ಲ. 10ನೇ ತರಗತಿಯವರೆಗೆ ಓದಬೇಕೆಂಬ ಆಸೆ ಇದ್ದರೂ ಬಡತನ ಅಡ್ಡಿಯಾಯಿತು. ಅನಿವಾರ್ಯವಾಗಿ ಕಲ್ಲು ಕೆತ್ತನೆ ಕೆಲಸಕ್ಕೆ ಇಳಿಯಬೇಕಾಯಿತು.

ಆದರೆ, ಕಲ್ಲು ಕೆತ್ತುವ ಕಾಯಕವೇ ಅವರೊಳಗಿನ ಕಲಾವಿದನಿಗೆ ಹೊಸ ದಾರಿಯಾಯಿತು. ಕೆಲಸ ಆರಂಭಿಸಿದ ಒಂದೇ ವರ್ಷದಲ್ಲಿ ಮೂರ್ತಿಗಳನ್ನು ಕೆತ್ತುವ ಕಲೆಯನ್ನು ಕರಗತ ಮಾಡಿಕೊಂಡರು. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಶಿಲ್ಪಗಳನ್ನು ರಚಿಸುತ್ತಿದ್ದ ಅವರಿಗೆ ಕ್ರಮೇಣ ಜನಮನ್ನಣೆ ದೊರೆಯಿತು. ಕೊಣ್ಣೂರ ಗ್ರಾಮದ ಕಾಡಸಿದ್ಧೇಶ್ವರ ದೇವಸ್ಥಾನದ ಮಹಾದ್ವಾರ ನಿರ್ಮಿಸುವ ಜವಾಬ್ದಾರಿಯನ್ನು ಗ್ರಾಮದ ಹಿರಿಯರು ಅವರಿಗೆ ವಹಿಸಿದ್ದು, ಅವರ ಬದುಕಿನ ಮಹತ್ವದ ತಿರುವಾಯಿತು. ಮಹಾದ್ವಾರವನ್ನು ಸುಂದರ ಶಿಲ್ಪಕಲೆಯಿಂದ ನಿರ್ಮಿಸಿ ತಮ್ಮ ಪ್ರತಿಭೆ ಅನಾವರಣಗೊಳಿಸಿದರು. ಈ ಕೆಲಸದಿಂದ ದೊರೆತ ಮೆಚ್ಚುಗೆ ಅವರ ಶಿಲ್ಪಕಲಾ ಪಯಣಕ್ಕೆ ಹೊಸ ವೇಗ ನೀಡಿತು.

ತಮ್ಮ ಅನುಭವವನ್ನು ಮುಂದಿನ ಪೀಳಿಗೆಗೂ ಹಂಚುವ ಉದ್ದೇಶದಿಂದ ಸುಮಾರು 30ರಿಂದ 40 ಯುವಕರಿಗೆ ಶಿಲ್ಪಕಲೆಯ ತರಬೇತಿ ನೀಡಿದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ವಿವಿಧೆಡೆ 60ಕ್ಕೂ ಹೆಚ್ಚು ದೇವಸ್ಥಾನಗಳ ಮಹಾದ್ವಾರ, ಜೈನ ಮಂದಿರಗಳು ಹಾಗೂ ಮಾನಸ್ತಂಭಗಳನ್ನು ನಿರ್ಮಿಸಿದ್ದಾರೆ. ಅವರ ಕಲಾಸೇವೆಯನ್ನು ಗುರುತಿಸಿ 2003ರಲ್ಲಿ ಕರ್ನಾಟಕ ಸರ್ಕಾರ ಪ್ರಶಂಸನಾ ಪತ್ರ ನೀಡಿ ಗೌರವಿಸಿತ್ತು. ಇದೀಗ ರಾಜ್ಯೋತ್ಸವ ಪ್ರಶಸ್ತಿ ಅವರ ಸುದೀರ್ಘ ಕಲಾಸಾಧನೆಗೆ ಸಂದ ಮತ್ತೊಂದು ಮಹತ್ವದ ಮನ್ನಣೆಯಾಗಿದೆ.

ರಂಗಭೂಮಿ, ಸಾಹಿತ್ಯ, ಚಿತ್ರಕಲೆಯಲ್ಲಿ ಬಹುಮುಖ ಸಾಧಕ ಡಾ.ಚೌಗಲೆ

ನಾಟಕ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಬೆಳಗಾವಿ ಜಿಲ್ಲೆಯ ಖ್ಯಾತ ನಾಟಕಕಾರ, ಸಾಹಿತಿ ಡಾ.ಡಿ.ಎಸ್.ಚೌಗಲೆ ಅವರಿಗೆ ಸಂಕೀರ್ಣ ವಿಭಾಗದಲ್ಲಿ 2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದಲ್ಲಿ 1961ರ ಜೂನ್ 10ರಂದು ಜನಿಸಿದ ಚೌಗಲೆ ಅವರು ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದಿದ್ದಾರೆ. ಬೆಳಗಾವಿಯ ಭಾವುರಾವ ಕಾಕತಕರ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ನಾಟಕಕಾರ, ಕತೆಗಾರ, ಕಾದಂಬರಿಕಾರ, ಅನುವಾದಕ, ಅಂಕಣಕಾರ, ಚಿತ್ರಕಲಾವಿದ ಹಾಗೂ ರಂಗಕರ್ಮಿಯಾಗಿ ಬಹುಮುಖ ಸಾಧನೆ ಮಾಡಿದ್ದಾರೆ. ದಿಶಾಂತರ, ಕಸ್ತೂರಬಾ, ಸಾವಿತ್ರಿಬಾಯಿ ಫುಲೆ, ಜನಮಿತ್ರ ಅರಸು, ನಮ್ಮೊಳಗೊಬ್ಬ ಗಾಂಧಿ ಸೇರಿದಂತೆ ಹಲವು ನಾಟಕಗಳನ್ನು ರಚಿಸಿದ್ದಾರೆ. ಇವರ ದಿಶಾಂತರ ನಾಟಕ ವಿಶ್ವವಿದ್ಯಾಲಯಗಳ ಪಠ್ಯವಾಗಿದ್ದು, ಗಾಂಧಿ ವಿರುದ್ಧ ಗಾಂಧಿ ನಾಟಕ ಮೈಸೂರು ರಂಗಾಯಣದಲ್ಲಿ ಸತತ 22 ವರ್ಷಗಳ ಕಾಲ ಪ್ರದರ್ಶನಗೊಂಡು ಗಮನ ಸೆಳೆದಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿತ್ರಕಲಾ ಪ್ರದರ್ಶನಗಳನ್ನು ಆಯೋಜಿಸಿರುವ ಅವರು ಚಲನಚಿತ್ರ ಕ್ಷೇತ್ರದಲ್ಲಿಯೂ ಸಂಭಾಷಣೆಕಾರ ಹಾಗೂ ನಟನಾಗಿ ಗುರುತಿಸಿಕೊಂಡಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಅನುವಾದ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಸೇರಿದಂತೆ 16ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸಾಹಿತ್ಯ, ರಂಗಭೂಮಿ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಸಲ್ಲಿಸಿದ ಬಹುಮುಖ ಕೊಡುಗೆಗೆ ರಾಜ್ಯೋತ್ಸವ ಪ್ರಶಸ್ತಿಯ ಗೌರವ ಸಂದಿರುವುದು ಬೆಳಗಾವಿ ಜಿಲ್ಲೆಯ ಹೆಮ್ಮೆಯ ಸಂಗತಿಯಾಗಿದೆ.

ಮಕ್ಕಳ ಆರೋಗ್ಯ ಸೇವೆ; ಡಾ.ಸುಜಾತಾ ಜಾಲಿಗೆ ಒಲಿದ ಗೌರವ

ವೈದ್ಯಕೀಯ ವೃತ್ತಿ ಎಂದರೆ ಕೇವಲ ಚಿಕಿತ್ಸೆ ನೀಡುವುದಷ್ಟೇ ಅಲ್ಲ, ನೋವಿನಲ್ಲಿರುವವರ ಬದುಕಿಗೆ ಭರವಸೆಯ ಬೆಳಕಾಗುವುದು ಎಂಬುದನ್ನು ತಮ್ಮ ಸೇವೆಯ ಮೂಲಕ ಸಾಬೀತುಪಡಿಸಿರುವ ಬೆಳಗಾವಿಯ ಖ್ಯಾತ ಮಕ್ಕಳ ತಜ್ಞೆ ಡಾ. ಸುಜಾತ ಮಲ್ಲಿಕಾರ್ಜುನ ಜಾಲಿ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಬೆಳಗಾವಿಯ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಮಕ್ಕಳ ವೈದ್ಯಕೀಯ ವಿಭಾಗದ ಹಿರಿಯ ಪ್ರಾಧ್ಯಾಪಕರಾಗಿ ಹಾಗೂ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಅವರು ಮಕ್ಕಳ ಆರೋಗ್ಯ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ.

ವಿಶೇಷವಾಗಿ ಟೈಪ್-1 ಮಧುಮೇಹ, ಥಲಸ್ಸೇಮಿಯಾ ಮತ್ತು ಹಿಮೋಫಿಲಿಯಾದಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗೆ ಆದ್ಯತೆ ನೀಡಿದ್ದಾರೆ. ದೀರ್ಘಕಾಲದ ಚಿಕಿತ್ಸೆಯ ಅಗತ್ಯವಿರುವ ಮಕ್ಕಳಿಗೆ ವೈದ್ಯಕೀಯ ಆರೈಕೆಯ ಜತೆಗೆ ಮಾನಸಿಕ ಧೈರ್ಯ ತುಂಬುವ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಅವರ ವೈದ್ಯಕೀಯ ಬದುಕಿನ ಅತ್ಯಂತ ಸವಾಲಿನ ಅಧ್ಯಾಯ ಸೌದಿ ಅರೇಬಿಯಾದಲ್ಲಿ ಕಳೆದ ಒಂಬತ್ತು ವರ್ಷಗಳ ಸೇವೆ. ಅಲ್ಲಿನ ಕಿಂಗ್ ಖಾಲಿದ್ ಜನರಲ್ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞೆಯಾಗಿ ಕಾರ್ಯನಿರ್ವಹಿಸಿದ್ದ ಅವರು, ಗಲ್ಫ್ ಯುದ್ಧದ ಸಂದರ್ಭದಲ್ಲಿಯೂ ವೈದ್ಯಕೀಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಯುದ್ಧದ ಭೀಕರ ಪರಿಸ್ಥಿತಿಯ ನಡುವೆಯೂ ಗಾಯಾಳು ಸೈನಿಕರಿಗೆ ಚಿಕಿತ್ಸೆ ನೀಡಿದ ಅನುಭವ ಅವರ ವೃತ್ತಿಜೀವನದ ಅಪರೂಪದ ಮೈಲಿಗಲ್ಲಾಗಿದೆ.

ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಪ್ರತಿಷ್ಠಿತ ಫೆಲೋಶಿಪ್ ಕೂಡ ಅವರಿಗೆ ಲಭಿಸಿದೆ. ವೈದ್ಯಕೀಯ ಸಾಧನೆಗಳ ಜತೆಗೆ ಕ್ರೀಡೆ ಮತ್ತು ಕಲೆಯಲ್ಲಿಯೂ ಅವರು ಪ್ರತಿಭೆ ಮೆರೆದಿದ್ದಾರೆ. ಹೈಜಂಪ್‌ನಲ್ಲಿ ವಿಶ್ವವಿದ್ಯಾಲಯದ ದಾಖಲೆ ಹೊಂದಿದ್ದ ಕ್ರೀಡಾಪಟುವಾಗಿರುವ ಅವರು ಭರತನಾಟ್ಯ ಮತ್ತು ಕಥಕ್ಕಳಿ ನೃತ್ಯದಲ್ಲಿಯೂ ಪರಿಣತಿ ಪಡೆದಿದ್ದಾರೆ. ವಿಜ್ಞಾನ, ಕ್ರೀಡೆ ಮತ್ತು ಕಲೆಯನ್ನು ಸಮಾನವಾಗಿ ಮೈಗೂಡಿಸಿಕೊಂಡಿರುವ ಅವರ ಬಹುಮುಖ ಪ್ರತಿಭೆಗೆ ರಾಜ್ಯೋತ್ಸವ ಪ್ರಶಸ್ತಿ ಮತ್ತೊಂದು ಗರಿಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಡೆಯಾಜ್ಞೆ ಇದ್ದರೂ ಪೊಲೀಸರಿಂದ ಚಾರ್ಜ್‌ಶೀಟ್‌: ಹೈಕೋರ್ಟ್‌ ಗರಂ
ಪ್ರೀತಿಗೆ ಪೋಷಕರು ವಿರೋಧ: ಪ್ರೇಮಿಗಳಿಂದ ಆತ್ಮಹತ್ಯೆ ಯತ್ನ