ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕೌದಿ ಹೊಲೆಯುವ ಕಲೆ ಉಳಿಸಿದ ರುಕ್ಮೀಣಿಭಾಯಿ:
ಅಲೆಮಾರಿ, ಅರೆ ಅಲೆಮಾರಿ ಜನಾಂಗದ ಮಹಿಳೆಯರ ಕುಲ ವೃತ್ತಿಯ ಬಣ್ಣ, ಬಣ್ಣದ ಕೌದಿ ಹೊಲಿಯುವ ಕಸೂತಿ ಕೆಲಸ ಮಾಡುವ ಕಾಯಕವನ್ನು ರುಕ್ಮಿಣಿಬಾಯಿ ನಾಗಪ್ಪ ವಾಷ್ಠರ ಅವರು ಮುಂದುವರಿಸಿಕೊಂಡು ಬಂದಿದ್ದಾರೆ.ಇಳಕಲ್ಲ ತಾಲೂಕಿನ ಕೋಡಿಹಾಳ ಗ್ರಾಮದವರಾದ ರುಕ್ಮಿಣಿಬಾಯಿ ಅವರು ಗೋಂಧಳಿ ಬುಡಬುಡುಕಿ ಸಮುದಾಯದವರಾಗಿದ್ದಾರೆ. ಅವರ ಪತಿ ನಾಗಪ್ಪ ಅವರು ಬುಡುಬುಡುಕಿಯಾಗಿ ಭವಿಷ್ಯ ನುಡಿಯುವ ಕಾಯಕ ಮಾಡುತ್ತಿದ್ದರು. 2015ರಲ್ಲಿ ಅವರು ಮೃತಪಟ್ಟರು.
ತಂದೆಯ ಬುಡಬುಡಕಿ ವೃತ್ತಿಯನ್ನು ರುಕ್ಮಿಣಿ ಅವರ ಪುತ್ರ ಹಣಮಂತ ಅವರು ಮುಂದವರಿಸಿಕೊಂಡು ಬಂದಿದ್ದು, ನಾವು ಬಡ ಕುಟುಂಬದಲ್ಲಿದ್ದರೂ, ತಲೆಮಾರುಗಳಿಂದ ಬಂದಿರುವ ಕುಲಕಸಬು ಕೈಬಿಟ್ಟಿಲ್ಲ. ಇದಿದ್ದರಲ್ಲೇ ಖುಷಿಯಿದೆ. ತಾಯಿ ಅವರನ್ನು ಸರ್ಕಾರ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಖುಷಿ ತಂದಿದೆ ಎಂದು ಪುತ್ರ ಹಣಮಂತ ಕನ್ನಡಪ್ರಭ ಕ್ಕೆ ತಿಳಿಸಿದ್ದಾರೆ.
ಸಾಮಾಜಿಕ, ಸಾಂಸ್ಕೃತಿಕ ಹಾಗೂ ಜಾನಪದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗುರಮ್ಮ ಸಂಕೀನಮಠ ಅವರು ತಮ್ಮ ಜೀವನವನ್ನೇ ಸಮಾಜ ಸೇವೆಗೆ ಮುಡಿಪಾಗಿಟ್ಟಿದ್ದಾರೆ. 1943ರ ಫೆಬ್ರವರಿ 2ರಂದು ಶಿರೂರ ಗ್ರಾಮದಲ್ಲಿ ಪಂಪಯ್ಯ ಸಂಕೀನಮಠ ಹಾಗೂ ಬಸಮ್ಮ ದಂಪತಿಯ ಆರನೇ ಪುತ್ರಿಯಾಗಿ ಜನಿಸಿದ ಅವರು, ಬಾಲ್ಯದಲ್ಲಿಯೇ ವಿವಾಹವಾಗಿ, ಎರಡು ವರ್ಷಗಳಲ್ಲೇ ಪತಿ ಕಳೆದುಕೊಂಡು ಬಾಲ ವಿಧವೆಯಾದರು. ಜೀವನದ ಸಂಕಷ್ಟಗಳನ್ನು ಮೆಟ್ಟಿ ನಿಂತ ಗುರಮ್ಮ ಅವರು ಅಕ್ಕಮಹಾದೇವಿ ಮಂಡಳ ಸ್ಥಾಪಿಸಿ ಕಾರ್ಯದರ್ಶಿಯಾಗಿ ಹಾಗೂ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದರು.
ಬಸವಣ್ಣ, ಅಕ್ಕಮಹಾದೇವಿ ಹಾಗೂ ಅಲ್ಲಮಪ್ರಭು ವಚನಗಳ ಜೊತೆಗೆ ಜಾನಪದ ಗೀಗಿ ಪದಗಳು ಮತ್ತು ಸರ್ಕಾರದ ಯೋಜನೆಗಳ ಕುರಿತು ಸ್ವರಚಿತ ಕವನಗಳನ್ನು ರಚಿಸಿ, ಸುಮಧುರ ಕಂಠದಿಂದ ಹಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಜಾನಪದ ಕಲಾವಿದೆ ಹಾಗೂ ಆಶುಕವಿಯಾಗಿ ಕರ್ನಾಟಕದ ವಿವಿಧೆಡೆ ಗುರುತಿಸಿಕೊಂಡಿದ್ದಾರೆ. ಅವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಸೇವೆ ಗುರುತಿಸಿ ಹಲವು ರಾಜ್ಯ ಮಟ್ಟದ ಹಾಗೂ ಸಂಘ-ಸಂಸ್ಥೆಗಳ ಪ್ರಶಸ್ತಿಗಳು ಸಂದಿವೆ.
ಪ್ರಶಸ್ತಿ ಬಂದಿರುವುದು ಈ ವಯಸ್ಸಿನಲ್ಲಿ ಮಹಿಳೆಯರ ಪರವಾಗಿ ಇನ್ನಷ್ಟು ಕಾರ್ಯ ಮಾಡಲು ಸ್ಥೈರ್ಯ ಬಂದಿದೆ. ಮುಂದಿನ ದಿನಗಳಲ್ಲಿ ಮಹಿಳೆಯರ ಕುರಿತು ಕೆಲಸ ಕಾರ್ಯ ಮಾಡಲು ಶಕ್ತಿ ತುಂಬಿದಂತಾಗಿದೆ.