ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕರ್ನಾಟಕದ ಜನತೆಗೆ ಕನ್ನಡ ರಾಜ್ಯೋತ್ಸವ ನಾಡಹಬ್ಬವಾಗಿದೆ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದು ಶ್ರೀರಾಮಚಂದ್ರ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ಎಸ್.ಮಾದಯ್ಯ ತಿಳಿಸಿದರು.ನಗರದ ನ್ಯಾಯಾಲಯ ರಸ್ತೆಯಲ್ಲಿರುವ ಶ್ರೀರಾಮಚಂದ್ರ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ, ಕನ್ನಡ ಭಾಷೆಯ ಉಳಿವಿಗಾಗಿ ಬಹಳಷ್ಟು ಮಹನೀಯರು ಹೋರಾಟ ಮಾಡಿದ್ದಾರೆ. ಭಾರತ ಮಾತೆಯ ಮಡಿಲಲ್ಲಿ ಹಲವಾರು ಭಾಷೆಗಳು ಇವೆ. ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಮಾತ್ರ ಪ್ರಾಮುಖ್ಯತೆ ನೀಡಬೇಕು, ಕನ್ನಡಕ್ಕೆ ಕವಿಗಳು, ಸಾಹಿತಿಗಳ ಕೊಡುಗೆ ಹೆಚ್ಚಿದೆ. ನಮ್ಮ ಭಾಷೆ, ನಮ್ಮ ನೆಲ, ನಮ್ಮ ಭೂಮಿ ಎಂದು ನಮ್ಮಲ್ಲಿ ಪ್ರೀತಿ ಬರಬೇಕು ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಎಂ.ರುದ್ರಮುರ್ತಿ ಮಾತನಾಡಿ, ಕನ್ನಡ ಭಾಷೆಗೆ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಲಬಿಸಿವೆ. ರಾಷ್ಟ್ರಕವಿ ಕುವೆಂಪು, ದ.ರಾ.ಬೇಂದ್ರೆ, ಅನಂತಮೂರ್ತಿ ಹಾಗೂ ಇನ್ನು ಹಲವಾರು ಕವಿಗಳು ಬರವಣಿಗೆಯ ಮೂಲಕ ಕನ್ನಡ ಭಾಷೆಯನ್ನು ಶಿಖರಕ್ಕೆ ಏರಿಸಿದ್ದಾರೆ. ಶಾಲೆಗಳಲ್ಲಿ ವಿದ್ಯಾರ್ಥಿಗಳು ಬೇರೆ ಭಾಷೆಗಳನ್ನು ಪ್ರೀತಿಸಿ, ಕನ್ನಡ ಭಾಷೆಯನ್ನು ಗೌರವಿಸಿ ಎಂದು ತಿಳಿಸಿದರು.ಹೊರದೇಶಗಳಲ್ಲೂ ಕನ್ನಡದ ಹಬ್ಬವನ್ನು ಆಚರಿಸುತ್ತಾರೆ. ಜ್ಞಾನವನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ ಪುಸ್ತಕಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು. ನಮ್ಮ ರಾಜ್ಯದಲ್ಲಿ ಬೇರೆ ಭಾಷೆಗಳಿಗೂ ಮಹತ್ವವನ್ನು ನೀಡಿದ್ದೇವೆ ಎಂದು ತಿಳಿಸಿದರು. ಸಂಸ್ಥೆಯ ನಿರ್ದೇಶಕ ಮಹೇಶ್ ಎಸ್., ಶಾಲೆಯ ಮುಖ್ಯಶಿಕ್ಷಕಿ ರತ್ನಮ್ಮ, ದೈಹಿಕ ಶಿಕ್ಷಕರಾದ ರಂಗಸ್ವಾಮಿ, ಶಿಕ್ಷಕರಾದ ಕುಮಾರ್, ಯಶ್‌ಪಾಲ್, ಪರಶಿವಮೂರ್ತಿ, ಮಂಜುಳ ಹಾಗೂ ನಿವೃತ್ತ ಮುಖ್ಯ ಶಿಕ್ಷಕರಾದ ರಂಗಸ್ವಾಮಿ ಹಾಗೂ ವೀರಣ್ಣ, ಸಿ.ಆರ್.ಪಿ ಶಿವಕುಮಾರ್ ಹಾಗೂ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಂಜಯ್ಯ ಇನ್ನು ಮುಂತಾದವರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ವಯೋ ನಿವೃತ್ತಿ ಹೊಂದಿದ ನಾಗರಾಜು ಅವರಿಗೆ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಮಾದಯ್ಯ ಅವರು ಗೌರವಿಸಿ ಸನ್ಮಾನಿಸಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.