ಕನ್ನಡಪ್ರಭ ವಾರ್ತೆ ಕೆ.ಆರ್.ನಗರ
ರಾಜ್ಯೋತ್ಸವ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಅದು ನಮ್ಮೆಲ್ಲರ ಆಸ್ಮಿತೆಯ ಪ್ರತೀಕವಾಗಬೇಕು ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.ಪಟ್ಟಣದ ಪುರಸಭೆ ಬಯಲು ರಂಗ ಮಂದಿರದ ಆವರಣದಲ್ಲಿ ನಡೆದ 70 ನೇ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾಡು, ನುಡಿ, ಮತ್ತು ಭಾಷೆಯ ಬೆಳವಣಿಗೆಗೆ ಶ್ರಮಿಸಿದ ಪ್ರತಿಯೊಬ್ಬರನ್ನು ನಾವು ಗುರುತಿಸಿ ಗೌರವಿಸಬೇಕು. ಕನ್ನಡ ಭಾಷೆಯ ನಂದಾ ದೀವಿಗೆಯನ್ನು ದಶಕಗಳ ಹಿಂದೆ ನುಡಿ ಬ್ರಹ್ಮರು ಹಚ್ಚಿ ಹೋಗಿದ್ದು ಅದು ಸದಾ ನಂದಿ ಹೋಗದಂತೆ ನೋಡಿಕೊಳ್ಳುವ ಜವಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ ಎಂದರು.ಪಟ್ಟಣದ ಬಾಲಕರ ಕೃಷ್ಣರಾಜೇಂದ್ರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಿಂದ ಭುವನೇಶ್ವರಿ ಭಾವ ಚಿತ್ರವನ್ನುವಿವಿಧ ಕಲಾ ತಂಡಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡುವ ಮೂಲಕ ವೇದಿಕೆಯವರೆಗೆ ಗೌರವದಿಂದ ಕರೆ ತರಲಾಯಿತು.
ಪಟ್ಟಣದ ವಿವಿಧ ಶಾಲೆಗಳ 2 ಸಾವಿರಕ್ಕು ಅಧಿಕ ವಿದ್ಯಾರ್ಥಿಗಳು ಸಾಮೂಹಿಕವಾಗಿ ನಾಡಗೀತೆಯನ್ನು ಹಾಡುವ ಮೂಲಕ ಎಲ್ಲರ ಗಮನ ಸೆಳೆದರಲ್ಲದೆ, ಹತ್ತಾರು ಶಾಲೆಗಳಮಕ್ಕಳು ಸಾಮೂಹಿಕ ನೃತ್ಯ ಪ್ರದರ್ಶನ ಮಾಡಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿದರು.ಪತ್ರಕರ್ತರಾದ ಜಿ.ಕೆ. ನಾಗಣ್ಣ, ಜಿಟೆಕ್ ಶಂಕರ್, ಪ್ರಗತಿಪರರೈತಕೆ.ಪಿ. ಜಗದೀಶ್, ವಿವಿಧ ಕ್ಷೇತ್ರಗಳಲ್ಲಿ ಸಾಧನೆಮಾಡಿದ ಸಾಧಕರು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.
ತಾಲೂಕು ಕಸಾಪ ಅಧ್ಯಕ್ಷ ಡಿಂಡಿಮ ಶಂಕರ್, ತಹಸೀಲ್ದಾರ್‌ಗಳಾದ ಜಿ.ಸುರೇಂದ್ರಮೂರ್ತಿ, ರುಕಿಯಾಬೇಗಂ ಮಾತನಾಡಿದರು.ತಾಪಂ ಇಒಗಳಾದ ವಿ.ಪಿ.ಕುಲದೀಪ್, ಎ.ಎನ್.ರವಿ, ಬಿಇಒ ಆರ್.ಕೃಷ್ಣಪ್ಪ, ಜಾನಪದ ಪರಿಷತ್ ಅಧ್ಯಕ್ಷ ತಿಮ್ಮಶೆಟ್ಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ನಿರ್ದೇಶಕ ಸೈಯದ್ ಜಾಬೀರ್, ಪುರಸಭೆ ಸದಸ್ಯರಾದ ಪ್ರಕಾಶ್, ನಟರಾಜು, ಶಂಕರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಂ.ಎಸ್. ಮಹದೇವ್, ಉದಯಶಂಕರ್, ಜಿಪಂ ಮಾಜಿ ಸದಸ್ಯ ಜಿ.ಆರ್.ರಾಮೇಗೌಡ, ಬಿಸಿಎಂ ಇಲಾಖೆಯ ಕೆ.ಮೇಘನ, ಸಮಾಜ ಕಲ್ಯಾಣಾಧಿಕಾರಿ ಶಂಕರ್ ಮೂರ್ತಿ, ಮುಖ್ಯಾಧಿಕಾರಿ ಜಿ.ಎಸ್.ರಮೇಶ್, ಅಬಕಾರಿ ನಿರೀಕ್ಷಕ ಲೋಕೇಶ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಜೆ. ಮಲ್ಲಿಕಾರ್ಜುನ್ ಇದ್ದರು.
ವಿದ್ಯಾರ್ಥಿಗಳು ಕನ್ನಡ ನೆಲದ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಕೊಡುಗೆ ನೀಡಬೇಕು: ಎನ್. ನಾಗರಾಜುಕನ್ನಡಪ್ರಭ ವಾರ್ತೆ ನಂಜನಗೂಡು
ವಿದ್ಯಾರ್ಥಿಗಳು ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಅಧ್ಯಯನ ಮಾಡಿ, ಕನ್ನಡ ನೆಲದ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಕೊಡುಗೆ ನೀಡಬೇಕು ಎಂದು ಕನ್ನಡ ಉಪನ್ಯಾಸಕ ಎನ್. ನಾಗರಾಜ್ ಕರೆ ನೀಡಿದರು.ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ಅವರು ಕರ್ನಾಟಕದ ಏಕೀಕರಣಕ್ಕೆ ಶ್ರಮಿಸಿದ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಆಶಿಸಿದರು.
ಭೌತಶಾಸ್ತ್ರ ಉಪನ್ಯಾಸಕ ಎಚ್.ಎಸ್. ರಾಮನುಜಾ ಮಾತನಾಡಿ, ಕನ್ನಡ ಭಾಷೆಯು ನಮ್ಮ ಅಸ್ತಿತ್ವ, ಆತ್ಮವಿಶ್ವಾಸ ಮತ್ತು ಸಂಸ್ಕೃತಿಯ ಮೂಲ. ರಾಜ್ಯೋತ್ಸವ ಎಂದರೆ ಕೇವಲ ಆಚರಣೆ ಅಲ್ಲ ಕನ್ನಡಿಗನ ರೀತಿಭಾವ, ಮಾನವೀಯತೆ ಮತ್ತು ಸಾಹಿತ್ಯ ಪರಂಪರೆಯ ನೆನೆಪು. ಯುವಕರು ಕನ್ನಡವನ್ನು ಕೇವಲ ಮನೆ ಮಾತುಗಳಲ್ಲಿ ಮಾತ್ರವಲ್ಲ, ತಂತ್ರಜ್ಞಾನ, ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರಗಳಲ್ಲೂ ಬಳಸಬೇಕು. ಕನ್ನಡಕ್ಕೆ ನಮ್ಮ ಪ್ರೀತಿ ಕೃತಿಯಲ್ಲಿ ವ್ಯಕ್ತವಾಗಬೇಕು ಎಂದು ಹೇಳಿದರು.ಆಂಗ್ಲ ಭಾಷಾ ಉಪನ್ಯಾಸಕ ರಂಗಸ್ವಾಮಿ ಮಾತನಾಡಿ, ಭಾಷೆ ಒಂದು ಜನಾಂಗದ ಒಗ್ಗಟ್ಟಿನ ಸಂಕೇತ, ಕನ್ನಡ ನಮ್ಮ ಅಸ್ತಿತ್ವ. ಕನ್ನಡಿಗರು ತಮ್ಮ ಭಾಷೆಯನ್ನು ಗೌರವಿಸಿದಾಗಲೇ ನಾಡು ಗೌರವ ಪಡೆಯುತ್ತದೆ. ಕನ್ನಡಕ್ಕೆ ಬೆಳಕನ್ನು ನೀಡೋಣ.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸಿ.ಆರ್. ದಿನೇಶ್ ಮಾತನಾಡಿ, ಕನ್ನಡವು ಕೇವಲ ಭಾಷೆ ಅಲ್ಲ ಅದು ಸಾವಿರಾರು ವರ್ಷಗಳ ಸಂಸ್ಕೃತಿ, ಸಾಹಿತ್ಯ ಮತ್ತು ಮೌಲ್ಯಗಳ ಸಂಗ್ರಹ. ಇಂದಿನ ಕಾಲದಲ್ಲಿ ಕನ್ನಡದ ಬಳಕೆ ಹೆಚ್ಚಿಸುವುದು ಪ್ರತಿ ಯುವಕರ ಜವಾಬ್ದಾರಿ. ಸರ್ಕಾರದಿಂದ ಮಾತ್ರ ಭಾಷೆ ಉಳಿಯುವುದಿಲ್ಲ. ಸರ್ಕಾರಿ ಉದ್ಯೋಗಿ, ವಿದ್ಯಾರ್ಥಿ, ಶಿಕ್ಷಕ, ವ್ಯಾಪಾರಿ-ಯಾರೇ ಆಗಲಿ, ತಮ್ಮ ದಿನನಿತ್ಯದ ಜೀವನದಲ್ಲಿ ಕನ್ನಡ ಬಳಕೆ ಮಾಡಿದಾಗಲೇ ನಾಡು ಶಕ್ತಿಯಾಗಿ ಹೊರಹೊಮ್ಮುತ್ತದೆ. ಕನ್ನಡ ರಾಜ್ಯೋತ್ಸವವು ನಮ್ಮಲ್ಲಿ ಭಾಷಾಭಿಮಾನ ಮತ್ತು ಕರ್ತವ್ಯಭಾವಗಳನ್ನು ಬೆಳೆಸುವ ದಿನ ಎಂದರು.ಎಚ್.ಕೆ. ಪ್ರಕಾಶ್ ಸ್ಬಾಗತಿಸಿದರು. ಎನ್. ದಿನೇಶ್ ವಂದಿಸಿದರು, ಎಂ.ಬಿ ಪದ್ಮಾವತಿ ನಿರೂಪಿಸಿದರು.