ಕಾರವಾರ: ಅಣ್ಣ-ತಂಗಿಯರ ನಡುವಿನ ಪವಿತ್ರ ಬಾಂಧವ್ಯವನ್ನು ಸಾರುವ ರಕ್ಷಾ ದಿನದಂದು ಮಹಿಳೆಯರ ಘನತೆ ಎತ್ತಿ ಹಿಡಿಯುವ ಮತ್ತು ಅವರಿಗೆ ಸದಾ ಗೌರವ ಹಾಗೂ ಸುರಕ್ಷಿತ ವಾತಾವರಣ ಕಲ್ಪಿಸುವ ಸಂಕಲ್ಪವನ್ನು ಮಾಡೋಣ ಎಂದು ಮುಂಡಗೋಡ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಟಿ.ವೈ. ದಾಸನಕೊಪ್ಪ ಹೇಳಿದರು.
ಉದ್ಯೋಗ ಖಾತರಿಯಡಿ ಹೆಚ್ಚಿನ ಶ್ರಮ ಬೇಡುವ ಮತ್ತು ಗ್ರಾಮದಿಂದ ಸಾಕಷ್ಟು ದೂರದಲ್ಲಿರುವ ಕೆರೆ ಪುನಶ್ಚೇತನ, ಅರಣ್ಯದಲ್ಲಿ ಟ್ರೆಂಚ್ ನಿರ್ಮಾಣದಂತಹ ಮುಂತಾದ ಕಾಮಗಾರಿಗಳಲ್ಲಿ ಮಹಿಳೆಯರು ಕೆಲಸ ಮಾಡುವುದು ಕಷ್ಟ. ಅಂತಹ ಸಂದರ್ಭಗಳಲ್ಲಿ ಪುರುಷರು ಕೆಲಸದಲ್ಲಿ ನೆರವಾಗುವುದು ಮಾತ್ರವಲ್ಲದೇ, ಅವರು ಮನೆಯಿಂದ ಹೊರಟು ಮತ್ತೆ ಸುರಕ್ಷಿತವಾಗಿ ಮನೆ ಸೇರುವವರೆಗೂ ವಿಶೇಷ ಕಾಳಜಿ ವಹಿಸುತ್ತಾರೆ. ಕೂಡು ಕುಟುಂಬದಂತೆ ಆಸರ-ಬೇಸರಕ್ಕೆ ಜೊತೆಯಾಗಿರುತ್ತಾರೆ. ಹೀಗಾಗಿ ಇಂತಹ ವಿಶೇಷ ಬಾಂಧವ್ಯವನ್ನು ಇನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ತಾಲೂಕಿನ ಹಲವು ಕಾಮಗಾರಿ ಸ್ಥಳಗಳಲ್ಲಿ ಮುಂಡಗೋಡ ತಾಲೂಕು ಪಂಚಾಯತಿನಿಂದ ರಕ್ಷಾ ಬಂಧನ ಹಬ್ಬ ಆಚರಿಸಲಾಗುತ್ತಿದೆ ಎಂದರು.
ತಾಪಂ ಸಹಾಯಕ ನಿರ್ದೇಶಕ ಸೋಮಲಿಂಗಪ್ಪ ಛಬ್ಬಿ, ಯೋಜನೆಯಡಿ ಗಂಡು ಮತ್ತು ಹೆಣ್ಣಿಗೆ ಸಮಾನ ಕೆಲಸಕ್ಕೆ ಸಮಾನ ವೇತನವಿದೆ. ಕಾಮಗಾರಿ ಸ್ಥಳದಲ್ಲಿ ಪರಸ್ಪರ ಸೌಹಾರ್ದದಿಂದ, ಸಹೋದರಿಯರಿಗೆ ಸಹೋದರರಂತೆ ಆಸರೆಯಾಗಿ, ಅವರನ್ನು ಸಮಾಜದ ಸರಿಸಮಾನವಾಗಿ ಬೆಳೆಸಲು ಕೈಜೋಡಿಸೋಣ ಎಂದರು.ಐಇಸಿ ಸಂಯೋಜಕ ಕಿರಣ ಜೋತೆಪ್ಪನವರ ಕೂಲಿಕಾರರಿಗೆ ಅಗತ್ಯ ಮಾಹಿತಿ ನೀಡಿದರು.
ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಪುರುಷ ಕೂಲಿಕಾರರಿಗೆ ಮಹಿಳಾ ಕೂಲಿಕಾರರು ಪವಿತ್ರ ರಾಖಿಯನ್ನು ಕಟ್ಟಿ, ಸಿಹಿ ತಿನಿಸಿ, ಆರತಿ ಬೆಳಗಿ ಮನಸಾರೆ ಹಾರೈಸಿದರು. ಮತ್ತು ಎಲ್ಲ ಪುರುಷರು ಅವರ ರಕ್ಷಣೆಗೆ ಸದಾ ನಿಲ್ಲುವುದಾಗಿ ಸಂಕಲ್ಪ ತೊಟ್ಟರು.ಮಳಗಿ ಗ್ರಾಪಂ ಕಾರ್ಯದರ್ಶಿ ಜಯಶ್ರೀ ಹಜಾರೆ, ಊರ ಪ್ರಮುಖರಾದ ನಾಗೇಂದ್ರ ಕರಗಸಕರ,ಬಿಎಫ್‌ಟಿ ಹನುಮಂತ ಇಡಗೋಡ, ಮಂಜು ಪೂಜಾರ, ಸಂತೋಷ ಹಿರೇಮಠ, ಎಲ್‌ವಿಕೆ ಸಿಬ್ಬಂದಿ ಶ್ರೀದೇವಿ ಭದ್ರಾಪುರ, ರೇಣುಕಾ ಚಲವಾದಿ ಮತ್ತಿತರರು ಇದ್ದರು.