-ಅಣ್ಣ ತಂಗಿಯರ ಬಾಂಧವ್ಯದ ಹಬ್ಬ
- ರಾಖಿಯ ದಾರದಲ್ಲಿ ಬಾಲ್ಯದ ನೆನಪು, ಒಡಹುಟ್ಟಿದವರ ಪ್ರೀತಿ, ಕಾಳಜಿ, ಭರವಸೆ
----“ರಕ್ಷಾ” ಎಂದರೆ ರಕ್ಷಣೆ, “ಬಂಧನ” ಎಂದರೆ ಬಂಧ ಅಥವಾ ಸಂಬಂಧ. ಅಂದರೆ, ರಾಖಿಯ ಮೂಲಕ ಸಹೋದರ - ಸಹೋದರಿಯರ ನಡುವಿನ ಪ್ರೀತಿಯ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಹಬ್ಬವೇ ರಕ್ಷಾ ಬಂಧನ. ಇದು ಕೇವಲ ರಾಖಿ ಕಟ್ಟುವ ಅಥವಾ ಉಡುಗೊರೆ ಕೊಡುವ ಹಬ್ಬವಲ್ಲ.
ರಕ್ಷಾ ಬಂಧನವು ಸಹೋದರ ಸಹೋದರಿಯರ ಪ್ರೀತಿ, ವಿಶ್ವಾಸ ಮತ್ತು ಬಾಂಧವ್ಯವನ್ನು ಆಚರಿಸುವ ಹಬ್ಬ. ಈ ದಿನ ಸಹೋದರಿ ತನ್ನ ಸಹೋದರನ ಕೈಗೆ ರಾಖಿ ಕಟ್ಟುತ್ತಾಳೆ. ಸಹೋದರನು ಸಹೋದರಿಯ ಸಂತೋಷ ಮತ್ತು ಒಳಿತಿಗಾಗಿ ಸದಾ ಜೊತೆಯಾಗಿರುವ ಭರವಸೆಯನ್ನು ನೀಡುತ್ತಾನೆ.
ಬೆಳೆದಂತೆ ಜೀವನದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಕೆಲಸ, ಮದುವೆ, ಕುಟುಂಬ, ದೂರದ ಊರುಗಳು, ಇವೆಲ್ಲ ಕಾರಣಗಳಿಂದ ಸಹೋದರ, ಸಹೋದರಿಯರು ಮೊದಲಿನಂತೆ ಪ್ರತಿದಿನ ಭೇಟಿಯಾಗಲು ಸಾಧ್ಯವಾಗುವುದಿಲ್ಲ. ಆದರೆ, ಮನಸ್ಸಿನಲ್ಲಿರುವ ಆ ಬಂಧ ಮಾತ್ರ ಎಂದಿಗೂ ಕಡಿಮೆಯಾಗುವುದಿಲ್ಲ. ಎಷ್ಟೇ ದೂರವಿದ್ದರೂ ಸಹೋದರನಿಗೆ ತಂಗಿಯ ಕಾಳಜಿ, ತಂಗಿಗೆ ಅಣ್ಣನ ಮೇಲಿನ ಪ್ರೀತಿ ಸದಾ ಇರುತ್ತದೆ. ರಕ್ಷಾ ಬಂಧನದ ದಿನ ಸಹೋದರಿ ಪ್ರೀತಿಯಿಂದ ರಾಖಿಯನ್ನು ಸಹೋದರನ ಕೈಗೆ ಕಟ್ಟುತ್ತಾಳೆ. ಆ ರಾಖಿಯ ದಾರದಲ್ಲಿ ಕೇವಲ ಬಣ್ಣಗಳಿಲ್ಲ; ಬಾಲ್ಯದ ನೆನಪುಗಳು, ಒಡಹುಟ್ಟಿದವರ ಪ್ರೀತಿ, ಪರಸ್ಪರ ಕಾಳಜಿ ಮತ್ತು ಜೀವನಪೂರ್ತಿ ಜೊತೆಯಾಗಿರುವ ಭರವಸೆ ಅಡಗಿರುತ್ತದೆ.
ಸಹೋದರ-ಸಹೋದರಿಯರ ಸಂಬಂಧದಲ್ಲಿ ಕೊಡುಕೊಳ್ಳುವಿಕೆಗಿಂತ ಪ್ರೀತಿಗೆ ಹೆಚ್ಚಿನ ಸ್ಥಾನವಿದೆ. ಅಣ್ಣನಿಗೆ ತಂಗಿ ಬಾಲ್ಯದ ಪುಟ್ಟ ಮಗು ಎಂದೇ ಕಾಣಬಹುದು. ತಂಗಿಗೆ ಅಣ್ಣ ಎಂದರೆ ಕಷ್ಟದ ಸಮಯದಲ್ಲಿ ಧೈರ್ಯ ತುಂಬುವ ವ್ಯಕ್ತಿಯಾಗಿರಬಹುದು. ಹಾಗೆಯೇ ತಮ್ಮನಿಗೆ ಅಕ್ಕ ತಾಯಿಯಂತೆಯೇ ಕಾಳಜಿ ತೋರಬಹುದು. ಜೀವನದ ಪ್ರತಿಯೊಂದು ಹಂತದಲ್ಲೂ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುವ ಈ ಬಂಧ ನಿಜಕ್ಕೂ ಅಮೂಲ್ಯ.
ಸಹೋದರನು ಕೂಡ ತನ್ನ ಸಹೋದರಿಯ ಸಂತೋಷ ಮತ್ತು ಸುರಕ್ಷತೆಗಾಗಿ ಸದಾ ಬೆಂಬಲವಾಗಿ ನಿಲ್ಲುವ ಭರವಸೆ ನೀಡುತ್ತಾನೆ.
ಈ ಹಬ್ಬದ ನಿಜವಾದ ಉದ್ದೇಶ ಒಂದು ದಿನ ಮಾತ್ರ ಪ್ರೀತಿಯನ್ನು ತೋರಿಸುವುದಲ್ಲ. ವರ್ಷದ ಪ್ರತಿದಿನವೂ ಒಬ್ಬರನ್ನೊಬ್ಬರು ಗೌರವಿಸುವುದು, ಅಗತ್ಯವಿದ್ದಾಗ ಸಹಾಯ ಮಾಡುವುದು ಮತ್ತು ಕಷ್ಟದ ಸಮಯದಲ್ಲಿ ಜೊತೆಯಾಗಿರುವುದೇ ಈ ಸಂಬಂಧದ ಸಾರ್ಥಕತೆ.
ಕೊನೆಗೆ ಹೇಳುವುದಾದರೆ, ಸಂಬಂಧದ ಮೌಲ್ಯವನ್ನು ರಕ್ತ ನಿರ್ಧರಿಸುವುದಿಲ್ಲ; ನಮ್ಮ ನಡೆ, ಪ್ರೀತಿ, ವಿಶ್ವಾಸ ಮತ್ತು ಕಾಳಜಿ ನಿರ್ಧರಿಸುತ್ತವೆ. ರಕ್ತದಿಂದ ಹುಟ್ಟಿದ ಸಂಬಂಧ ಸಹೋದರತೆಯಾಗಬಹುದು, ಆದರೆ, ಹೃದಯದಿಂದ ಬೆಸೆದುಕೊಂಡ ಸಂಬಂಧವೇ ನಿಜವಾದ ಸಹೋದರತೆಯಾಗಿ ಜೀವನಪೂರ್ತಿ ಉಳಿಯುತ್ತದೆ. ಎಲ್ಲ ಸೋದರ ಸಃಹೋದರಿಯರು ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಿ. ರಕ್ಷಾ ಬಂಧನದ ಶುಭಾಶಯ.
-ಲೇಖಕರು : ಹರಿತಾ ಸಾಯಿ, ಬರಹಗಾರ್ತಿ; ಪತ್ರಿಕೋದ್ಯಮ, ಯಾದಗಿರಿ. (27ವೈಡಿಆರ್3)
-27ವೈಡಿಆರ್2 : ರಕ್ಷಾಬಂಧನದ ಸಾಂದರ್ಭಿಕ ಚಿತ್ರ