ಶಿವಮೊಗ್ಗ: ರಕ್ಷಾಬಂಧನ ಸ್ನೇಹದ, ಪ್ರೀತಿಯ ಭ್ರಾತೃತ್ವದ, ಶಕ್ತಿಯ ಸಂಕೇತವಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ರಕ್ಷಾ ಬಂಧನದ ನೂಲಿನಲ್ಲಿ ಸಂಘಟನೆಯ ಶಕ್ತಿಯಿದೆ. ನಮ್ಮ ಸಂಸ್ಕೃತಿ ದೇಶದ ನೆಲೆಗಟ್ಟು, ಭಾವೈಕ್ಯತೆ ಅಡಗಿದೆ. ಪ್ರಪಂಚ ಒಂದು ಕುಟುಂಬ ಎನ್ನುವ ಸಂಸ್ಕೃತಿಯ ರಾಷ್ಟ್ರೀಯ ಹರಿಕಾರರು ನಾವು. ದೇಶವನ್ನು ಸಂಕ್ಷರಣೆ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ರಕ್ಷಾಬಂಧನ ಬರೀ ಅಣ್ಣತಂಗಿಯ ಸಂಬಂಧ ಮಾತ್ರವಲ್ಲ, ಅದರಲ್ಲಿ ಉದಾತ್ತ ಧ್ಯೇಯೋದ್ದೇಶಗಳಿವೆ ಎಂದು ತಿಳಿಸಿದರು.
ಪ್ರತಿ ಮನೆಮನೆಗಳಲ್ಲಿ ರಕ್ಷಾಬಂಧನದ ಕಾರ್ಯಕ್ರಮ ನಡೆಯಬೇಕಿದೆ. ಹಿರಿಯರು ಸುಮ್ಮನೆ ಇದನ್ನೆಲ್ಲಾ ಮಾಡಿಲ್ಲ. ಅದರ ಹಿಂದೆ ಒಳ್ಳೆಯ ಉದ್ದೇಶವಿದೆ ಎಂದರು.ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ ನಡೆದಾಗ ಅವರು ಭಯೋತ್ಪಾದಕರೇ ಎಂದು ಪ್ರಶ್ನೆ ಕೇಳಿದವರು ನಮ್ಮ ನಡುವೆ ಇದ್ದಾರೆ. ಧರ್ಮಸ್ಥಳದಲ್ಲಿ ನಡೆಯುತ್ತಿರುವುದು ನೋವಿನ ಸಂಗತಿಯಾಗಿದೆ. ನಾಳೆ ಅವರು ಸುಬ್ರಹ್ಮಣ್ಯಕ್ಕೂ ಬರುತ್ತಾರೆ. ತಿರುಪತಿಯಿಂದ ವಿವಾದ ಹುಟ್ಟುಹಾಕಿ, ಶಬರಿಮಲೈಗೆ ಕೈಹಾಕಿದರು. ಗೋಕರ್ಣದಲ್ಲೂ ಪ್ರಯತ್ನ ನಡೆದಿತ್ತು. ಒಳ್ಳೆಯವರು ಸುಮ್ಮನಿದ್ದಾಗ ಇಂತಹ ಘಟನೆಗಳು ನಡೆಯುತ್ತವೆ. ಗೊಂದಲ ಸೃಷ್ಟಿಮಾಡುವ ಕಾರ್ಯಮಾಡುತ್ತಾರೆ. ಎಸ್‌ಐಟಿ ಬ್ರಹ್ಮನಿಂದ ಹುಟ್ಟಿದ್ದಲ್ಲ, ಸಿಎಂ ಮೂಗಿನ ಕೆಳಗೆ ಇರುವ ಒಂದು ಸಂಸ್ಥೆ ಅವರು ಹೇಳಿದ್ದನ್ನೇ ಇವರು ಮಾಡುತ್ತಾರೆ ಎಂದು ವಿವರಿಸಿದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಪ್ರಧಾನಿ ಮೋದಿಯವರು ಆಪರೇಷನ್ ಸಿಂದೂರದ ಮೂಲಕ ನಮ್ಮ ದೇಶದ ಹೆಣ್ಣು ಮಕ್ಕಳಿಗೆ ಅನ್ಯಾಯ ಮಾಡಿದರೆ, ಏನಾಗುತ್ತದೆ ಎಂಬುದನ್ನು ವಿಶ್ವಕ್ಕೆ ತೋರಿಸಿದ್ದಾರೆ. ಸಂಸ್ಕೃತಿಯ ಚಿಂತನೆಯನ್ನು ಎತ್ತಿಹಿಡಿಯುವ ಪಕ್ಷ ಬಿಜೆಪಿಯಾಗಿದೆ. ಅದನ್ನು ಕಾರ್ಯಕರ್ತರು ಮುಂದುವರೆಸಿ, ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.
ಇದೇ ವೇಳೆ ಮಹಿಳಾ ಮೋರ್ಚಾದಿಂದ ಬಿಜೆಪಿಯ ಎಲ್ಲಾ ಕಾರ್ಯಕರ್ತರು ಮತ್ತು ಶಾಸಕರಿಗೂ ತಿಲಕವಿಟ್ಟು, ರಕ್ಷಾಬಂಧನವನ್ನು ಕಟ್ಟಿ ಸಿಹಿ ಹಂಚಲಾಯಿತು.