ಆರೋಗ್ಯ ಹಕ್ಕಿನ ಕಾಯಿದೆ ಜಾರಿಗೆ ಆಗ್ರಹಿಸಿ ನಾಳೆ ಜಾಥಾ

KannadaprabhaNewsNetwork |  
Published : Feb 06, 2026, 02:15 AM IST
5ಎಚ್‌ವಿಆರ್2 | Kannada Prabha

ಸಾರಾಂಶ

ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಉತ್ತಮ ಗುಣಮಟ್ಟದ ಔಷಧಗಳು ಲಭ್ಯವಾಗಬೇಕು. ರಾಜ್ಯದಲ್ಲಿ ಆರೋಗ್ಯ ಹಕ್ಕಿನ ಕಾಯಿದೆ ಜಾರಿಯಾಗಬೇಕು ಎಂಬ ಬೇಡಿಕೆಯೊಂದಿಗೆ ಡ್ರಗ್ ಆ್ಯಕ್ಷನ್ ಫೋರಂ-ಕರ್ನಾಟಕ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಫೆ. 7ರಂದು ನಗರದಲ್ಲಿ ಆರೋಗ್ಯ ಹಕ್ಕಿನ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡ್ರಗ್ ಆ್ಯಕ್ಷನ್ ಫೋರಂನ ಕಾರ್ಯದರ್ಶಿ ಡಾ. ಎಸ್.ಎಲ್. ಪವಾರ ತಿಳಿಸಿದರು.

ಹಾವೇರಿ: ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಉತ್ತಮ ಗುಣಮಟ್ಟದ ಔಷಧಗಳು ಲಭ್ಯವಾಗಬೇಕು. ರಾಜ್ಯದಲ್ಲಿ ಆರೋಗ್ಯ ಹಕ್ಕಿನ ಕಾಯಿದೆ ಜಾರಿಯಾಗಬೇಕು ಎಂಬ ಬೇಡಿಕೆಯೊಂದಿಗೆ ಡ್ರಗ್ ಆ್ಯಕ್ಷನ್ ಫೋರಂ-ಕರ್ನಾಟಕ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಫೆ. 7ರಂದು ನಗರದಲ್ಲಿ ಆರೋಗ್ಯ ಹಕ್ಕಿನ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡ್ರಗ್ ಆ್ಯಕ್ಷನ್ ಫೋರಂನ ಕಾರ್ಯದರ್ಶಿ ಡಾ. ಎಸ್.ಎಲ್. ಪವಾರ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಎಲ್ಲಾ ಸರ್ಕಾರಿ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಔಷಧಗಳು ಉಚಿತವಾಗಿ ಲಭ್ಯವಾಗುತ್ತಿರಬೇಕು. ಸರ್ಕಾರಿ ಆಸ್ಪತ್ರೆ ವೈದ್ಯರು ಯಾವುದೇ ಕಾರಣಕ್ಕೂ ಔಷಧಗಳನ್ನು ಹೊರಗಡೆ ಬರೆದುಕೊಡಬಾರದು. ಸಾರ್ವತ್ರಿಕ ಆರೋಗ್ಯ ಆಂದೋಲನ ಸಂಘಟನೆ ಈ ಹಿಂದೆ 12 ಜಿಲ್ಲೆಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ 568 ರೋಗಿಗಳು ಔಷಧಕ್ಕಾಗಿ 4,05,140 ರು. ಖರ್ಚು ಮಾಡಿದ್ದು ಕಂಡುಬಂದಿದೆ. ಹಾಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುವ ಔಷಧ ಗುಣಮಟ್ಟ ಉತ್ತಮವಾಗಿರಬೇಕೆನ್ನುವ ಜವಾಬ್ದಾರಿ ಸರ್ಕಾರ ವಹಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದರು. ಕರ್ನಾಟಕದಲ್ಲಿ ಆರೊಗ್ಯ ಹಕ್ಕಿನ ಕಾಯಿದೆಯನ್ನು ಜಾರಿಗೆ ತರಬೇಕು. ನಮ್ಮ ದೇಶದಲ್ಲಿ ರಾಜಸ್ಥಾನ ಮಾತ್ರ ಈ ಕಾಯಿದೆ ಜಾರಿಗೆ ತಂದಿದ್ದು, ಸುತ್ತಮುತ್ತಲಿನ ದೇಶಗಳಲ್ಲಿ ಚಿಕಿತ್ಸೆ ಸಂಪೂರ್ಣ ಉಚಿತವಾಗಿ ಸಿಗುತ್ತಿದೆ. 73ದೇಶಗಳಲ್ಲಿ ವೈದ್ಯಕೀಯ ಸೇವೆಗಳ ಹಕ್ಕು ಜಾರಿಯಲ್ಲಿದ್ದು, ಕರ್ನಾಟಕದಲ್ಲೂ ಜಾರಿಯಾಗಬೇಕೆಂಬುದು ಬೇಡಿಕೆಯಾಗಿದೆ. ಖಾಸಗಿ ವಲಯದಲ್ಲಿ ಆಸ್ಪತ್ರೆ ಶುಲ್ಕಗಳಿಗೆ ಮಿತಿ ಇಲ್ಲದ ಕಾರಣ ರೋಗಿಗಳು ಶೋಷಣೆಗೆ ಒಳಗಾಗುತ್ತಿದ್ದಾರೆ. ಇದು ಆರೋಗ್ಯ ಸೇವೆ ದುಬಾರಿ ಮಾಡುವುದಲ್ಲದೇ ಜನರನ್ನು ಬಡತನ ಮತ್ತು ಸಾಲದ ಕಡೆಗೆ ತಳ್ಳುತ್ತದೆ. ಎಲ್ಲಾ ಆಸ್ಪತ್ರೆಗಳ ಶುಲ್ಕಗಳ ಮೇಲೆ ಮಿತಿ ಹಾಕುವ ಸಾಂವಿಧಾನಿಕ ಕರ್ತವ್ಯ ಸರ್ಕಾರದ್ದಾಗಿದೆ ಎಂದರು.ರಾಜ್ಯ ಸರ್ಕಾರ ಏಳು ಜಿಲ್ಲಾಸ್ಪತ್ರೆಗಳನ್ನು ಪಿಪಿಪಿ ಮಾದರಿಯಲ್ಲಿ ಖಾಸಗೀಕರಣ ಮಾಡಲು ಮುಂದಾಗಿದೆ. ಇದು ಜನವಿರೋಧಿ ಹಾಗೂ ಸಂವಿಧಾನ ವಿರೋಧಿಯಾಗಿದೆ. ಒಂದು ವೇಳೆ ಖಾಸಗಿಯವರಿಗೆ ಕೊಟ್ಟರೆ ಬಡಜನರಿಗೆ ಚಿಕಿತ್ಸೆ ನಿರಾಕರಣೆ, ದುಬಾರಿ ಚಿಕಿತ್ಸೆ ಮಾಡುವುದಕ್ಕೆ ದಾರಿ ಸುಗಮವಾಗುತ್ತದೆ. ಹಾಗಾಗಿ ವಿಜಯಪುರದಲ್ಲಿ ನೀಡಿದ ಭರವಸೆಯಂತೆ ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣವನ್ನು ಸಂಪೂರ್ಣವಾಗಿ ಕೈ ಬಿಡಬೇಕು ಎಂದು ಒತ್ತಾಯಿಸಿದರು.ರಾಜ್ಯದಲ್ಲಿ ಆರೊಗ್ಯ ಎಲ್ಲಾ ಲಿಂಗ, ವರ್ಗ, ಜಾತಿಯವರ ಹಕ್ಕಾಗಬೇಕು. ಬಡವರಿಗೆ, ಎಲ್ಲಾ ಕಾರ್ಮಿಕರಿಗೆ, ದಲಿತ ಸಮುದಾಯಗಳಿಗೆ, ಆದಿವಾಸಿ ಸಮುದಾಯಗಳಿಗೆ, ಸ್ಲಂ ನಿವಾಸಿಗಳಿಗೆ, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗೆ ಹಾಗೂ ಇತರೆ ಎಲ್ಲ ಶೋಷಿತ ಸಮುದಾಯಗಳಿಗೆ ಉಚಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಸಿಗಬೇಕೆಂಬುದು ಸಂಘಟನೆ ಉದ್ದೇಶವಾಗಿದೆ ಎಂದು ವಿವರಿಸಿದರು.ಆರೋಗ್ಯ ಹಕ್ಕಿನ ಜಾಥಾಕ್ಕೆ ಬೆಂಬಲ ಸೂಚಿಸಿರುವ ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ಧರ್ಮರಾಜ ಬಿಂದಲಗಿ ಮಾತನಾಡಿ, ಫೆ. 7ರಂದು ಬೆಳಗ್ಗೆ 11ಕ್ಕೆ ಪ್ರವಾಸಿ ಮಂದಿರದಿಂದ ಜಾಥಾ ಹೊರಟು ಹೊಸಮನಿ ಸಿದ್ದಪ್ಪ ವೃತ್ತ, ಮೈಲಾರ ಮಹದೇವಪ್ಪ ವೃತ್ತ, ಎಂ.ಜಿ. ರಸ್ತೆ ಮಾರ್ಗವಾಗಿ ತಹಸೀಲ್ದಾರ್ ಕಚೇರಿ ತಲುಪಲಿದೆ. ಜಾಥಾದಲ್ಲಿ ಪಕ್ಷಾತೀತ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಕೆಆರ್‌ಎಸ್ ಪಕ್ಷದ ಮುಖಂಡರಾದ ಅಮರನಾಥ ಭೂತೆ, ಗಂಗಾ ಕೋರಿ, ಚರಣ್‌ರಾಜ ರೊಡ್ಡನವರ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದಿಂದ ಮಹಿಳೆಯರ ಪ್ರಬಲರಾಗಲು ಸಾಧ್ಯ
ಉದ್ಯಾನ ಜಾಗ ಕಬಳಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹ