ಹೊನ್ನಾವರ:
ಜನವರಿ 22ರಂದು ಅಯೋಧ್ಯೆಯಲ್ಲಿ ಲೋಕಾರ್ಪಣೆಯಾಗುವ ರಾಮಮಂದಿರವು ಔಪಚಾರಿಕ ಸಂಘರ್ಷದ ಗೆಲುವಾಗಿದೆ. ಹಿಂದೂ ಸಮಾಜದ ಬೆವರು ಹಾಗೂ ರಕ್ತದಿಂದ ಕಟ್ಟಿದ ಭವ್ಯ ಮಂದಿರವಾಗಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡಿದ ಸಂಸದರು, ಹಿಂದೂ ಕಾರ್ಯಕರ್ತರು, ಕರ ಸೇವಕರ ಬಲಿದಾನ ಹಾಗೂ ಹೋರಾಟದ ಪ್ರತಿಫಲವಾಗಿ ಭವ್ಯ ಮಂದಿರ ನಿರ್ಮಾಣವಾಗಿದೆ. ಹಿಂದೂ ಸಮಾಜದ ಅಜೆಂಡಾ ಇಲ್ಲಿಂದ ಪ್ರಾರಂಭವಾಗಲಿದೆ. ಈ ಹಿಂದೆ ಸೋಮನಾಥೇಶ್ವರ ದೇವಾಲಯ ಸರ್ಕಾರದ ವತಿಯಿಂದ ರಾಷ್ಟ್ರಪತಿಗಳು ನಿರ್ಮಾಣ ಮಾಡಿದ್ದರು. ಅಯೋಧ್ಯೆಯ ರಾಮಮಂದಿರವು ಹಿಂದೂ ಸಮಾಜದಿಂದ ನಿರ್ಮಾಣವಾಗಿದೆ ಎಂದರು.೫೦೦ ವರ್ಷಗಳ ಹೋರಾಟದ ಪರಿಣಾಮ ರಾಮಮಂದಿರ ನಿರ್ಮಾಣವಾಗಿದೆ. ಕಾಶಿ, ಮಥುರಾ ಮುಂದಿನ ದಿನದಲ್ಲಿ ಸೇರ್ಪಡೆಯಾಗಲಿದೆ. ಶಿರಸಿಯ ಸಿ.ಪಿ. ಬಜಾರ ಮಸೀದಿಯು ಹಿಂದಿನ ವಿಜಯ ವಿಠ್ಠಲ್ ದೇವಸ್ಥಾನವಾಗಿದ್ದು ಇದು ಈ ಕುರಿತು ವಿಚಾರಣೆ ಕೋರ್ಟ್‌ನಲ್ಲಿದೆ. ಎಲ್ಲಿಯವರೆಗೆ ಹಿಂದೂ ಸಮಾಜಕ್ಕೆ ನ್ಯಾಯ ಸಿಗುವುದಿಲ್ಲವೋ, ಅಲ್ಲಿಯ ವರೆಗೆ ಹೋರಾಟ ನಿರಂತರವಾಗಿರಲಿದೆ ಎಂದು ಸಂಸದರು ಹೇಳಿದರು.
ಮುಂದಿನ ದಿನದಲ್ಲಿ ಸಂಗ್ರಾಮ ನಡೆಯಲಿದ್ದು, ಅದ್ಭುತ ಗೆಲುವು ನಮ್ಮ ಕ್ಷೇತ್ರದಲ್ಲಿ ಆಗಬೇಕು ಎಂದು ಕರೆ ನೀಡಿದ ಅನಂತಕುಮಾರ, ದೇಶದಲ್ಲಿ ವಿರೋಧ ಪಕ್ಷವೇ ಇಲ್ಲ. ಪ್ರಧಾನಿ ಅಭ್ಯರ್ಥಿ ಆಯ್ಕೆಗೆ ದೊಂಬರಾಟ ನಡೆಯುತ್ತಿದೆ. ಚುನಾವಣೆಯಿಂದ ಚುನಾವಣೆಗೆ ಹೆಚ್ಚಿನ ಬೆಂಬಲ ನಮ್ಮ ಕ್ಷೇತ್ರದಲ್ಲಿ ವ್ಯಕ್ತವಾಗಿದೆ. ಲೋಕ ಸಮರದಲ್ಲಿ ಈ ಹಿಂದಿನಿಂದಲೂ ಅಭ್ಯರ್ಥಿ ನೋಡಿ ಮತ ನೀಡಿಲ್ಲ. ಬಿಜೆಪಿಗೆ ಮತ ನೀಡಿದ್ದು, ಮುಂದಿನ ದಿನದಲ್ಲಿ ಅಭ್ಯರ್ಥಿ ಯಾರೆ ಆದರೂ ಪಕ್ಷಕ್ಕೆ ಮತ ನೀಡಬೇಕು. ಇಲ್ಲಿವರೆಗೆ ನೀಡಿದ ಗೆಲುವಿಗಿಂತ ಹೆಚ್ಚಿನ ಮತ ನೀಡಿ ಹೊಸ ದಾಖಲೆಯ ಗೆಲುವು ಈ ಬಾರಿ ಆಗಬೇಕು. ಕಾರ್ಯಕರ್ತರ ಶ್ರಮ, ಜನರ ತೀರ್ಮಾನ ಹೊಸ ದಾಖಲೆಯೊಂದಿಗೆ ಈ ಬಾರಿ ಬೆಂಬಲ ತೋರಿ ಯಾರೆ ಅಭ್ಯರ್ಥಿಯಾದರೂ ಗೆಲುವಾಗಬೇಕು ಎಂದರು.ಈ ವೇಳೆ ಬಿಜೆಪಿ ತಾಲೂಕಾಧ್ಯಕ್ಷ ರಾಜೇಶ ಭಂಡಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಎಸಳೆ, ಜಿಲ್ಲಾ ಉಪಾಧ್ಯಕ್ಷ ಉಮೇಶ ನಾಯ್ಕ, ಭಾಗ್ಯ ಲೊಕೇಶ ಮೇಸ್ತ, ಜಿಲ್ಲಾ ಕಾರ್ಯದರ್ಶಿ ವಿನೋದ ನಾಯ್ಕ ರಾಯಲಕೇರಿ, ತಾಲೂಕು ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕ ದೇರುಸೊಪ್ಪ, ಸುರೇಶ ಹರಿಕಂತ್ರ, ದೀಪಕ ನಾಯ್ಕ, ಗಣೇಶ ಪೈ, ಪಪಂ, ಗ್ರಾಪಂ.ಸದಸ್ಯರು, ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.