ವಿಜಯನಗರ ಜಿಲ್ಲೆಯಲ್ಲಿ ಮೊಳಗಿದ ಶ್ರೀರಾಮನಾಮ ಜಪ

KannadaprabhaNewsNetwork | Published : Apr 7, 2025 12:37 AM

ಸಾರಾಂಶ

ಶ್ರೀ ರಾಮನವಮಿ ಪ್ರಯುಕ್ತ ನಗರದ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶ್ರೀರಾಮ ಹಾಗೂ ಆಂಜನೇಯ ದೇಗುಲಗಳಲ್ಲಿ ಭಾನುವಾರ ಶ್ರದ್ಧಾ ಭಕ್ತಿಯಿಂದ ಪೂಜೆಗಳು ಜರುಗಿತು. ಜತೆಗೆ ಎಲ್ಲೆಲ್ಲೂ ಶ್ರೀ ರಾಮನಾಮ ಜಪ ಮೊಳಗಿತು.

ಹೊಸಪೇಟೆ: ಶ್ರೀ ರಾಮನವಮಿ ಪ್ರಯುಕ್ತ ನಗರದ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶ್ರೀರಾಮ ಹಾಗೂ ಆಂಜನೇಯ ದೇಗುಲಗಳಲ್ಲಿ ಭಾನುವಾರ ಶ್ರದ್ಧಾ ಭಕ್ತಿಯಿಂದ ಪೂಜೆಗಳು ಜರುಗಿತು. ಜತೆಗೆ ಎಲ್ಲೆಲ್ಲೂ ಶ್ರೀ ರಾಮನಾಮ ಜಪ ಮೊಳಗಿತು.

ಭಕ್ತರು ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ಜತೆಗೆ ರಾಮನಾಮ ಜಪಿಸುತ್ತಿರುವುದು ಕಂಡುಬಂದಿತು. ಹಂಪಿಯ ಕೋದಂಡರಾಮ ದೇವಾಲಯ, ಶ್ರೀ ಮಾಲ್ಯವಂತ ರಘುನಾಥ ದೇವಾಲಯ ದೇಗುಲಗಳಲ್ಲೂ ವಿಶೇಷ ಪೂಜೆಗಳು ನೆರೆವೇರಿದವು. ದೇಗುಲಗಳಲ್ಲಿ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು.

ಬೆಳಗ್ಗೆಯಿಂದ ಶ್ರೀರಾಮ ಹಾಗೂ ಆಂಜನೇಯ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆದವು. ಇನ್ನು ಪುರಾತನ ಪ್ರಸಿದ್ಧ ಶ್ರೀ ಮಾಲ್ಯವಂತ ಶ್ರೀರಘುನಾಥ ದೇವಾಲಯದಲ್ಲಿ ಹೋಮ, ಹವನ ನೆರವೇರಿತು. ಸಂಜೆ ಶ್ರೀರಾಮನ ಬ್ರಹ್ಮರಥೋತ್ಸವ ನಡೆಯಿತು. ಇನ್ನೂ ಮರಿಯಮ್ಮನಹಳ್ಳಿಯ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ಹಾಗೂ ಆಂಜನೇಯ ಸ್ವಾಮಿ ನೂತನ ಜೋಡಿ ರಥೋತ್ಸವ ಸಕಲ ಭಕ್ತರ ಸಮುಖದಲ್ಲಿ ರಥೋತ್ಸವ ನಡೆಯಿತು‌.

ನಗರದ ದೇಗುಲಗಳ ಬಳಿ ಕೇಸರಿ ಬಾವುಟಗಳು ಗಮನ ಸೆಳೆದವು. ಹಿಂದೆಂದಿಗಿಂತಲೂ ಈ ಬಾರಿ ನಗರದ ಎಲ್ಲೆಡೆ ಕೇಸರಿ ಬಾವುಟಗಳು ಹಾರಾಡಿದವು, ಶ್ರೀರಾಮ ಭಕ್ತರು ಕೇಸರಿ ಪೇಟ ಧರಿಸಿ ಗಮನ ಸೆಳೆದರು. ನಗರದ ರಾಣಿಪೇಟೆಯಲ್ಲಿ ನಡೆದ ಶ್ರೀರಾಮನವಮಿ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಅವರು ಕೂಡ ಭಾಗಿಯಾಗಿದ್ದರು.

ಹರಪನಹಳ್ಳಿಯಲ್ಲಿ ವೈಭವದ ರಾಮನವಮಿ ಉತ್ಸವ:

ಹರಪನಹಳ್ಳಿ ಪಟ್ಟಣದ 7ನೇ ವಾರ್ಡ್‌ ತೆಲುಗರ ಓಣಿಯಲ್ಲಿರುವ ರಾಮಾಂಜನೇಯ ದೇವಸ್ಥಾನದಲ್ಲಿ ರಾಮಾಂಜನೇಯ ಸೇವಾ ಟ್ರಸ್ಟ್‌ ಹಾಗೂ ಸವಿತಾ ಸಮಾಜದ ವತಿಯಿಂದ ಶ್ರೀರಾಮ ನವಮಿ ಅಂಗವಾಗಿ ರಾಮನವಮಿ ಉತ್ಸವ ವೈಭವದಿಂದ ಭಾನುವಾರ ಜರುಗಿತು.ಬೆಳಗ್ಗೆ 5 ಗಂಟೆಗೆ ಸುಪ್ರಭಾತ ಸೇವೆ ಮತ್ತು ಪಂಚಾಮೃತ ಅಭಿಷೇಕ, 8 ಗಂಟೆಗೆ ಪುಣ್ಯಾಹವಾಚನ ನಾಂದಿ, 9 ಗಂಟೆಗೆ ಶ್ರೀರಾಮ ತಾರಕ ಹೋಮ ಜರುಗಿತು.ಮಧ್ಯಾಹ್ನ ಶ್ರೀ ಸೀತಾರಾಮ ಕಲ್ಯಾಣ ಮಹೋತ್ಸವ ಹಾಗೂ ಶ್ರೀ ರಾಮಾನಂಜನೇಯ ದೇವರಿಗೆ ವಿಶೇಷ ಅಲಂಕಾರ ಮತ್ತು ಪೂಜೆ ಜರುಗಿತು. ಭಕ್ತರಿಗೆ ಪಾನಕ, ಕೋಸಂಬರಿ ಪ್ರಸಾದ ವಿತರಿಸಲಾಯಿತು.

ಸಂಜೆ ಸೆಕ್ಸೋಫೋನ್ ವಾದನ ಕಾರ್ಯಕ್ರಮ ಜರುಗಿತು. ಸವಿತಾ ಸಮಾಜದ ಅಧ್ಯಕ್ಷ ಸಂತೋಷ ಲಕ್ಷ್ಮೀಪುರಂ, ಉಪಾಧ್ಯಕ್ಷ ಎಚ್‌. ಸಂತೋಷ, ಕಾರ್ಯದರ್ಶಿ ಸುನೀತಾ, ಖಜಾಂಚಿ ವೆಂಕಟಸ್ವಾಮಿ ಹಾಗೂ ಮುಖಂಡರಾದ ಮಾನಪಾಡು ವೆಂಕಟೇಶ, ಆನಂದ, ಸಾಯಿಪ್ರಸಾದ್, ನರಸಿಂಹಲು, ಎನ್‌. ಶಂಕರ ಇತರರು ಉಪಸ್ಥಿತರಿದ್ದರು.

Share this article