ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ

KannadaprabhaNewsNetwork |  
Published : Jun 27, 2026, 12:15 AM IST
ಸುದ್ದಿಗೋಷ್ಠಿಯಲ್ಲಿ ಎಸ್ಪಿ ಮಾತನಾಡಿದರು. | Kannada Prabha

ಸಾರಾಂಶ

ಬಾಬರ್ ಧ್ವಂಸ ಮಾಡಿದ ಜಾಗದಲ್ಲಿ ಅಯೋಧ್ಯೆಯ ಭವ್ಯವಾದ ರಾಮಮಂದಿರ ಕಟ್ಟಲಾಗಿದೆ. ಸರ್ಕಾರದ ಹಣವಿಲ್ಲದೇ, ಭಕ್ತರ ಹಣದಿಂದ ರಾಮಮಂದಿರ ಕಟ್ಟಲಾಯಿತು.

ವಿಶ್ವದಾದ್ಯಂತ ರಾಮಭಕ್ತರಿಗೆ ಆಘಾತ । ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು: ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ ಘಟನೆ ವಿಶ್ವದಾದ್ಯಂತ ಇರೋ ರಾಮಭಕ್ತರಿಗೆ ಆಘಾತ ತಂದಿದೆ. ಈ ಲೂಟಿ ಕೂಡ ದೊಡ್ಡ ಎಚ್ಚರಿಕೆ ಗಂಟೆ. ಈ ಕೃತ್ಯದಲ್ಲಿ ಯಾರೇ ಇದ್ದರೂ ಉಗ್ರವಾದ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಬರ್ ಧ್ವಂಸ ಮಾಡಿದ ಜಾಗದಲ್ಲಿ ಅಯೋಧ್ಯೆಯ ಭವ್ಯವಾದ ರಾಮಮಂದಿರ ಕಟ್ಟಲಾಗಿದೆ. ಸರ್ಕಾರದ ಹಣವಿಲ್ಲದೇ, ಭಕ್ತರ ಹಣದಿಂದ ರಾಮಮಂದಿರ ಕಟ್ಟಲಾಯಿತು. ಈಗ ಕಳೆದ 6 ತಿಂಗಳ ಹಿಂದೆ ದೇವಾಲಯದ ಸಿಸಿಟಿವಿ ಹಾಳು ಮಾಡಿ 200 ಬೆಳ್ಳಿಯ ಇಟ್ಟಿಗೆ, ಬಂಗಾರದ ಆಭರಣಗಳನ್ನು ದೋಚಿರುವುದು ಆಶ್ಚರ್ಯ ಮತ್ತು ನೋವು ತಂದಿದೆ ಎಂದರು.

ರಾಮಮಂದಿರವನ್ನು ಕಟ್ಟುವುದನ್ನು ವಿರೋಧಿಸುತ್ತಿರುವ ಕೂಗು ಈಗ ಜೋರಾಗಿದೆ. ಈ ವಿಚಾರವನ್ನು ಬಿಜೆಪಿ, ಆರ್‌ಎಸ್‌ಎಸ್‌ ಅನ್ನು ಮಧ್ಯೆ ತಂದು ರಾಜಕೀಯ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ ಅಲ್ಲಿ ಆಡಳಿತ ಮಂಡಳಿಯು ಜವಬ್ದಾರಿ ತೆಗೆದುಕೊಂಡು ಇದನ್ನು ಬೇಧಿಸಬೇಕಿದೆ. ಇಲ್ಲದಿದ್ದರೆ ಪುಣ್ಯ ಕ್ಷೇತ್ರದ ಬಗ್ಗೆ ಇರುವ ಗೌರವ ಕಡಿಮೆ ಆಗಲಿದೆ. ಈ ಪ್ರಕರಣದಲ್ಲಿ ಅಯೋಧ್ಯೆಯ ದೇವಾಲಯದ ಟ್ರಸ್ಟಿಗಳೇ ಇದ್ದರೂ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು. ಈ ಮೂಲಕ ಟೀಕಾಕಾರರಿಗೆ ಈ ಮೂಲಕ ಉತ್ತರ ನೀಡಲಿ ಎಂದರು.

ಹಲವಾರು ಜನರು ಈ ಘಟನೆ ಬಗ್ಗೆ ಈಗ ಬಹಳ ಟೀಕೆ ಮೂಲಕ ಮಾತನಾಡುತ್ತಿದ್ದಾರೆ. ಕುಟುಂಬದಲ್ಲಿ ಯಾರೋ ಒಬ್ಬ ಕಳ್ಳ ಇದ್ದ ಕೂಡಲೇ ಇಡೀ ಕುಟುಂಬ ಕಳ್ಳತನ ಮಾಡಿದೆ ಎಂದಲ್ಲ. ಯಾರು ಅಲ್ಲಿ ಕಳ್ಳತನ ಮಾಡಿದ್ದಾರೋ ಅವರ ವಿರುದ್ಧ ಕಠಿಣ ಕ್ರಮ ಆಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಾಕ್ಸ್‌...

ಬಿಜೆಪಿಗೆ ಬಂದ ಶಾಸಕರು ಪಕ್ಷ ಕಟ್ಟಲು ಬಂದವರಲ್ಲಈ ಹಿಂದೆ ಬಿಜೆಪಿಗೆ ಬಂದ 17 ಜನ ಶಾಸಕರು ಪಕ್ಷ ಕಟ್ಟಲು ಬಂದಿರಲಿಲ್ಲ, ತಾವು ಯಾವುದೇ ಒಬ್ಬ ನಿರ್ದಿಷ್ಟ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಈ ಮಾತು ಹೇಳಿಲ್ಲ. ಬದಲಿಗೆ ಪ್ರಸ್ತುತ ರಾಜಕೀಯದಲ್ಲಿ ನಡೆಯುತ್ತಿರುವ ಹಣದ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿರುವುದಾಗಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಸ್ಪಷ್ಟಪಡಿಸಿದರು.

ಇತ್ತೀಚೆಗೆ ನಡೆದ ರಾಜ್ಯಸಭೆ ಹಾಗೂ ಎಂಎಲ್‌ಸಿ ಚುನಾವಣೆಯ ಅಡ್ಡಮತದಾನದ ಕುರಿತು ನಾನು ಮಾತನಾಡಿದ್ದೆ. ಈ ವೇಳೆ ಬಿ.ಸಿ. ಪಾಟೀಲ್, ಅಥವಾ ಶಿವರಾಂ ಹೆಬ್ಬಾರ್ ಅವರ ಹೆಸರನ್ನು ನಾನು ಎಲ್ಲೂ ಪ್ರಸ್ತಾಪಿಸಿಲ್ಲ. ಆದರೆ, ಕೆಲವರು ನನ್ನ ಹೇಳಿಕೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಿ ರಾಜಕೀಯ ಮಾಡುತ್ತಿದ್ದಾರೆ. ಅಂದು ಆ ಶಾಸಕರು ಬಂದಿದ್ದಕ್ಕೇ ಬಿಜೆಪಿ ಅಧಿಕಾರಕ್ಕೆ ಬಂದಿತು ಎಂದು ಕೆಲವರು ವಾದಿಸುತ್ತಿದ್ದಾರೆ. ಆದರೆ, ಅವರ್ಯಾರೂ ಪಕ್ಷ ಕಟ್ಟುವ ಉದ್ದೇಶದಿಂದ ಬಿಜೆಪಿಗೆ ಬಂದಿರಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಇತ್ತೀಚಿನ ಎಂಎಲ್‌ಸಿ ಚುನಾವಣೆಯಲ್ಲಿ ಇದೇ ಕಾಂಗ್ರೆಸ್ ಸರ್ಕಾರ ಕೂಡ ಶಾಸಕರನ್ನು ಖರೀದಿಸಿರುವುದು ನಿಜ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ತಕ್ಷಣ ಈ ಕುದುರೆ ವ್ಯಾಪಾರವನ್ನು ಗಮನಿಸಬೇಕಿದೆ. ರಾಜಕೀಯದಲ್ಲಿ ಇದೇ ರೀತಿ ಶಾಸಕರ ಖರೀದಿ ಪ್ರಕ್ರಿಯೆ ಮುಂದುವರಿದರೆ, ರಾಜ್ಯದ ಈಗಿನ ಕಾಂಗ್ರೆಸ್ ಸರ್ಕಾರವೂ ಪತನವಾಗುವುದು ನೂರಕ್ಕೆ ನೂರು ಗ್ಯಾರಂಟಿ ಎಂದು ಹೇಳಿದರು.

-----

ಕೋಟ್‌...

ಎನ್‌ಸಿಇಆರ್‌ಟಿಯ 6ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕಕ್ಕೆ ‘ಕೃಷ್ಣ’ ಎಂದು ಹೆಸರಿಸಿದ್ದಾರೆ. ಇದು ಈಗ ದೇಶಾದ್ಯಂತ ವ್ಯಾಪಕ ಟೀಕೆಗೆ ಒಳಗಾಗಿದೆ. ಈ ದೇಶದ ಜನ ಅದಕ್ಕೆ ಬೆಂಬಲ ಕೊಡುವುದಿಲ್ಲ. ಇಲ್ಲಿ ಕಂಸನ ವಂಶಸ್ಥರೂ ಇದ್ದಾರೆ. ಹಿಂದೂ ಧರ್ಮದ ಬಗ್ಗೆ ಆಕ್ರಮಣ ಇದೇ ಮೊದಲಲ್ಲ. ಕೃಷ್ಣ ರಾಮನ ಬಗ್ಗೆ ಟೀಕೆ ಮಾಡುವವರು ಈ ದೇಶದಲ್ಲಿದ್ದಾರೆ.

-ಕೆ.ಎಸ್‌.ಈಶ್ವರಪ್ಪ, ಮಾಜಿ ಡಿಸಿಎಂ.

----------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೊಲೀಸರಿಂದ ಅಕ್ರಮ ಕೈ ಕೋಳ: ಮಾನನಷ್ಟ ಮೊಕದ್ದಮೆ
ಮುಸ್ಲಿಂರೇ ಇಲ್ಲದ ಊರಲ್ಲಿ ಮೊಹರಂ ಉತ್ಸವ