ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಸುಗಮ ಸಂಗೀತಗಂಗಾ ನೇತೃತ್ವದಲ್ಲಿ ಬಸವನಹಳ್ಳಿ ರಂಗಣ್ಣನವರ ಛತ್ರದಲ್ಲಿ ಆಯೋಜಿಸಿದ್ದ ಶ್ರೀರಾಮ ಸಾಂಸ್ಕೃತಿಕ ಸಂಭ್ರಮದಲ್ಲಿ ಮಾತನಾಡಿದರು. ಸಮಾಜದ ಒಳಿತಿಗೆ ರಾಮ, ಸೀತಾಮಾತೆ, ಲಕ್ಷ್ಮಣ ಸೇರಿ ರಾಮಾಯಣ ಮಾರ್ಗದರ್ಶಿಯಾಗಿದೆ. ಮಕ್ಕಳಿಗೆ ರಾಮಾಯಣ ಮತ್ತು ಮಹಾಭಾರತದಂತಹ ಆದರ್ಶ ಕೃತಿ ಕಲಿಸುವುದು ಇಂದಿನ ಅಗತ್ಯ ಎಂದರು.
ರಾಜನಾದ ಶ್ರೀರಾಮಚಂದ್ರ ತಂದೆಗೆ ಆದರ್ಶ ಮಗನೂ, ಆದರ್ಶ ಸಹೋದರನಾಗಿಯೂ ನಿಲ್ಲುತ್ತಾನೆ. ಒಟ್ಟಾರೆ ಸದ್ಗುಣಗಳ ಗಣಿಯಾದ ಶ್ರೀರಾಮನದು ಆದರ್ಶ ಜೀವನ. ರಾಮನ ಹೆಸರಿನಲ್ಲೆ ಬಿಸಿ ಮತ್ತು ತಂಪು ಎರಡೂ ಇದೆ. ದೇಶದ ಆರಾಧ್ಯ ದೈವವೂ ಹೌದು ಎಂದ ಡಾ.ಜೆ.ಪಿ.ಕೆ, ಶ್ರೇಷ್ಠ ಪ್ರಧಾನಿ ನರೇಂದ್ರ ಮೋದಿರನ್ನೂ ಭವ್ಯರಾಮ ಮಂದಿರ ನಿರ್ಮಾಣಕ್ಕಾಗಿ ಶ್ರೀರಾಮನೇ ಕರೆಸಿಕೊಂಡ ಎಂಬ ರಥಯಾತ್ರಾ ರೂವಾರಿ ಎಲ್.ಕೆ.ಅಡ್ವಾನಿಯವರ ಮಾತುಗಳಲ್ಲಿ ಸತ್ಯವಿದೆ ಎಂದು ಹೇಳಿದರು.ರಾಮನಿಗೂ ಕನ್ನಡನಾಡಿಗೂ ನಿಕಟ ಸಂಬಂಧವಿದೆ. ಹಿರೇಮಗಳೂರಿನಲ್ಲಿರುವ ಕೋದಂಡರಾಮನ ಬಲಭಾಗದಲ್ಲಿ ಸೀತಾಮಾತೆ ಇರುವ ವಿಗ್ರಹ ಜಗತ್ತಿನ ಬೇರೆಲ್ಲೂ ಇಲ್ಲ. ಯುಗದ ಕವಿ ಕುವೆಂಪು 8 ವರ್ಷಗಳ ಕಾಲ ರಚಿಸಿದ ರಾಮಾಯಣದರ್ಶನಂ ವಾಲ್ಮೀಕಿ ರಾಮಾಯಣಕ್ಕಿಂತಲೂ ಚೆನ್ನಾಗಿದೆ ಎಂದರು.
ಅಧಿಕಾರ ನಿರಾಕರಣೆ, ಪಿತೃವಾಕ್ಯ ಪರಿಪಾಲನೆ, ತಮ್ಮಂದಿರಿಗೆ ಮಾರ್ಗದರ್ಶನ, ಉತ್ತಮ ಸ್ನೇಹಿತನಾಗಿ ರಾಮ ನಮ್ಮೆದುರು ನಿಲ್ಲುತ್ತಾನೆ. ವಾಲಿಯನ್ನು ಸೋಲಿಸಿ ರಾಜ್ಯವನ್ನು ಸುಗ್ರೀವನಿಗೆ ಒಪ್ಪಿಸುತ್ತಾನೆ. ಲಂಕೆ ಗೆದ್ದರೂ ವಿಭೀಷಣನಿಗೆ ರಾಜ್ಯಕೊಟ್ಟ. ಸ್ವರ್ಣಮಯವಾದ ಲಂಕೆಬೇಡ, ಮಾತೃಭೂಮಿ ಬೇಕೆಂದ ರಾಮ, ಎಂದೂ ರಾಜ್ಯ ವಿಸ್ತರಣೆ, ಆಕ್ರಮಣ ಆಸೆ ಹೊಂದಿರಲಿಲ್ಲ ಎಂದರು.
ವಿವೇಕಜಾಗೃತ ಬಳಗ ತಂಡದ ಶ್ರೀರಾಮ ರಕ್ಷಾಸ್ತೋತ್ರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಾಂಸ್ಕೃತಿಕ ಸಂಭ್ರಮದಲ್ಲಿ ಪಾವನಿ ವೀಣಾಶಾಲೆಯ ತಂಡದ ವೀಣಾವಾದನ, ಮಲ್ಲಿಗೆ ಸುಧೀರ್ ಕಂಠದಲ್ಲಿ ರಾಮನ ಕಥೆ ವಿವರಿಸುವ ರಾಮನ ಅವತಾರ ಇದು ರಘುಕುಲ ಗಾಯನಕ್ಕೆ ಹಿರಿಯ ಚಿತ್ರಕಲಾ ಶಿಕ್ಷಕ ಕಟ್ಟಿಮನಿ ರಚಿಸಿದ ರಾಮನಚಿತ್ರ ಗಮನಸೆಳೆಯಿತು.
ಯಕ್ಷಸಿರಿ ನಾಟ್ಯವೃಂದ ವೈಭವಯುತವಾದ ಶ್ರೀರಾಮ ಪಟ್ಟಾಭಿಷೇಕ ಅಭಿನಯಿಸಿ ಮೆರಗು ತಂದರೆ, ವಿಷ್ಣು ಸಮಾಜದ ಭಜನೆ ಮತ್ತು ಗುಜರಾತಿ ಪರಿವಾರದ ಗರ್ಭಾನೃತ್ಯ ಜಗದಾನಂದಕಾರಕ ಸಮೂಹಗಾಯನ ಮೂಲಕ ಅರ್ಥಪೂರ್ಣ ಸಾಂಸ್ಕೃತಿಕ ಕಾರ್‍ಯಕ್ರಮ ಸಂಪನ್ನಗೊಂಡಿತು. ವಿವಿಧ ನೃತ್ಯಶಾಲೆ ಕಲಾವಿದರು, ಭಜನಾಮಂಡಳಿ ಸದಸ್ಯರು ಶ್ರೀರಾಮನಿಗೆ ಕಲಾಸೇವೆ ಸಲ್ಲಿಸಿದರು. ಮಂಜುನಾಥ ಕಾಮತ್, ಅರವಿಂದ ದೀಕ್ಷಿತ್, ಸುಧೀರ್, ವೀಣಾ ಅರವಿಂದ್, ರೇಖಾ ನೇತೃತ್ವದ ತಂಡ ಅಪರೂಪದ ಸಾಂಸ್ಕೃತಿಕ ಸೊಬಗಿಗೆ ಕರ್ಣಧಾರತ್ವವಹಿಸಿದ್ದರು. ಕೃಷ್ಣಭಟ್‌ರಿಂದ ಮಹಾಮಂಗಳಾರತಿ ನೆರವೇರಿತು.