ಹೇಮೆಯ ತಟದಲ್ಲಿ ರಾಮನ ಪಾದುಕೆಗಳು ಗೋಚರ

KannadaprabhaNewsNetwork | Published : Dec 29, 2023 1:30 AM

ಸಾರಾಂಶ

ಜನವರಿ ೨೨ ರಂದು ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯಾಗಲಿದೆ. ಆದರ್ಶ ಪುರುಷ ಶ್ರೀ ರಾಮ ಆಲೂರು ತಾಲೂಕಿಗೆ ಭೇಟಿ ನೀಡಿದ್ದ ಎಂಬ ಪೂರ್ವಿಕರ ಮಾತುಗಳಿಗೆ ಈ ಕುರುಹುಗಳು ಪುಷ್ಟಿ ನೀಡಿವೆ.

ಕಾಗನೂರಿನ ಹೇಮಾವತಿ ನದಿಯ ಪಾದಾರೆಕಲ್ಲು ಬಳಿ ಪತ್ತೆ । ತಂಡೋಪತಂಡವಾಗಿ ಸಾರ್ವಜನಿಕರಿಂದ ಪೂಜೆ

ಕನ್ನಡಪ್ರಭವಾರ್ತೆ ಆಲೂರು

ಲಕ್ಷಾಂತರ ಕರ ಸೇವಕರ ಪ್ರಾಣ ತ್ಯಾಗ, ನೂರಾರು ವರ್ಷಗಳ ಹೋರಾಟದ ಬಳಿಕ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ಶ್ರೀ ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದ್ದು, ಮತ್ತೊಂದೆಡೆ ತಾಲೂಕಿನ ಕಾಗನೂರು ಗ್ರಾಮದಲ್ಲಿ ಶ್ರೀರಾಮ ತನ್ನ ವನವಾಸದ ಸಂದರ್ಭದಲ್ಲಿ ಸಂಚರಿಸಿದ್ದ ಎಂಬುದಕ್ಕೆ ಸಾಕ್ಷಿಯಾಗಿ ಪಾದುಕೆಗಳು ಗೋಚರವಾಗಿವೆ. ಜನವರಿ ೨೨ ರಂದು ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯಾಗಲಿದೆ. ಆದರ್ಶ ಪುರುಷ ಶ್ರೀ ರಾಮ ಆಲೂರು ತಾಲೂಕಿಗೆ ಭೇಟಿ ನೀಡಿದ್ದ ಎಂಬ ಪೂರ್ವಿಕರ ಮಾತುಗಳಿಗೆ ಈ ಕುರುಹುಗಳು ಪುಷ್ಟಿ ನೀಡಿದ್ದು, ಸಾರ್ವಜನಿಕರು ತಂಡೋಪತಂಡವಾಗಿ ಬಂದು ಪೂಜೆ ಸಲ್ಲಿಸುವ ಮೂಲಕ ಭಕ್ತಿ ಮೆರೆಯುತ್ತಿದ್ದಾರೆ. ಕಾಗನೂರು ಗ್ರಾಮದಲ್ಲಿರುವ ಆಂಜನೇಯ ದೇವರಿಗೆ ಕುಂಭಸ್ನಾನ, ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ಹಣ್ಣು-ತುಪ್ಪ, ರಸಾಯನ, ಪಂಚ ಕಜ್ಜಾಯ ನೈವಿದ್ಯ, ಮಹಾಮಂಗಳಾರತಿ ನೆರವೇರಿಸುವುದು ವಾಡಿಕೆ. ಆದರೆ, ಇದೇ ಮೊದಲ ಬಾರಿಗೆ ಗೋಚರವಾದ ಪ್ರಾಚೀನ ಕಾಲದ ಕುರುಹುಗಳನ್ನು ಜನರು ಆಶ್ಚರ್ಯದಿಂದ ನೋಡುತ್ತಿದ್ದಾರೆ. ಆಂಜನೇಯ ದೇವಾಲಯದಿಂದ ಅರ್ಧ ಕಿಮೀ ದೂರದ ಹೇಮಾವತಿ ನದಿ ತೀರದಲ್ಲಿ ಪಾದಾರೆಕಲ್ಲು ಎಂಬ ಸ್ಥಳವಿದ್ದು, ಅಲ್ಲಿಯೂ ಪೂಜೆ ಸಲ್ಲಿಸಲಾಗುತ್ತಿದೆ. ಇಲ್ಲಿ ಈಶ್ವರ ಲಿಂಗದ ಜೊತೆಯಾಗಿರುವ ಎರಡು ಪಾದಗಳು, ಮಸುಕಾಗಿ ಕಾಣುವ ಮತ್ತೊಂದು ದೊಡ್ಡ ಪಾದ, ತ್ರಿಕೋನಾಕೃತಿಯ ಪಗಡೆ ಹಾಸಿನಂತಹ ಆಕೃತಿ ಒಂದೇ ಬಂಡೆಯ ಮೇಲೆ ಮೂಡಿವೆ. ಆಂಜನೇಯ ಶ್ರೀರಾಮನನ್ನು ಹೊತ್ತೊಯ್ದಿರುವ ಕುರುಹಾಗಿ ಇರುವ ದೊಡ್ಡ ಪಾದ ಆಂಜನೇಯನದು. ಆಟದ ವಿಚಾರ ಪಗಡೆ ಹಾಸಿನಿಂದ ತಿಳಿಯುತ್ತದೆ. ವಿಶೇಷತೆಯುಳ್ಳ ಈ ಬಂಡೆಗೆ ಹೇಮಾವತಿ ಹಿನ್ನೀರು ಆವರಿಸುವುದರಿಂದ ಸಂಪೂರ್ಣ ಮುಚ್ಚಿ ಹೋಗುತ್ತದೆ. ಹೀಗಾಗಿ ಈ ಸ್ಥಳಕ್ಕೆ ಸಾರ್ವಜನಿಕರು ಶ್ರದ್ಧಾಭಕ್ತಿಯಿಂದ ಬರುತ್ತಿದ್ದಾರೆ.ಈ ಸ್ಥಳದಲ್ಲಿ ನೆಲೆಸದ ಶ್ರೀ ರಾಮ: ಶ್ರೀ ರಾಮನು ರಾವಣನ ಸಂಹಾರದ ನಂತರ ಬ್ರಹ್ಮಹತ್ಯಾ ದೋಷ ಪರಿಹಾರಕ್ಕಾಗಿ ಲೋಕ ಸಂಚಾರ ಕೈಗೊಂಡಿದ್ದಾಗ ಗ್ರಾಮಕ್ಕೆ ಬಂದಿದ್ದ. ಇಲ್ಲಿ ಶಿವಲಿಂಗ ಮೂರ್ತಿ ಸೃಷ್ಟಿಸಿದ್ದ ಎಂದು ಇತಿಹಾಸ ಹೇಳುತ್ತವೆ. ಪಕ್ಕದಲ್ಲಿಯೇ ಹರಿಯುವ ಹೇಮಾವತಿ ನದಿಯನ್ನು ವ್ಯಕ್ತಿಯೊಬ್ಬ ದಾಟುತ್ತಿದ್ದ. ತನ್ನ ತಾಯಿಯನ್ನು ನಡೆಸಿಕೊಂಡು, ಪತ್ನಿಯನ್ನು ಹೆಗಲಲ್ಲಿ ಕುಳ್ಳಿರಿಸಿ ಕರೆದೊಯ್ಯುವ ದೃಶ್ಯ ನೋಡಿ ಶ್ರೀ ರಾಮನು ತಾನು ನೆಲೆಸಲು ಈ ಸ್ಥಳ ಯೋಗ್ಯವಲ್ಲವೆಂದು ಮುಂದಿನ ಪ್ರಯಾಣಕ್ಕೆ ಅಣಿಯಾಗುತ್ತಾರೆ. ತಾಯಿ ಕಾಲ್ನಡಿಗೆಯಲ್ಲಿ ಬರುವುದು, ಹೆಂಡತಿ ಹೆಗಲ ಮೇಲೆ ಬರುವುದು ಮಾನವೀಯತೆಯಲ್ಲ ಎಂಬುದು ರಾಮನ ನಿಲುವಾಗಿರುತ್ತದೆ. ಈ ಸ್ಥಳದಲ್ಲಿ ಆಹಾರ, ವಿಹಾರ, ವಿನೋದಗಳು ನಡೆದ ಲಕ್ಷಣಗಳಿವೆ. ಹಾಗಾಗಿ ಜಾಗ ಬದಲಿಸಿದ್ದಾರೆ ಎಂಬ ಪ್ರತೀತಿಯಿದೆ. ಕೊಡಗಿನತ್ತ ಪಯಣ;ಆಲೂರು ತಾಲೂಕಿನ ಕಾಗನೂರು ವಾಸ್ತವ್ಯಕ್ಕೆ ಪ್ರಶಸ್ತ ಸ್ಥಳವಲ್ಲ ಎಂಬುದನ್ನು ಅರಿತ ಶ್ರೀರಾಮನು ಕೊಡಗಿನ ಕಡೆಗೆ ಪ್ರಯಾಣ ಬೆಳೆಸುತ್ತಾರೆ. ಕೊಡಗಿನಲ್ಲಿ ಸಣ್ಣ ಮಂಟಪ ನಿರ್ಮಿಸಿಕೊಂಡು ಸೀತಾಮಾತೆ ಅಲ್ಲಿಯೇ ಸ್ನಾನ ಮಾಡಿದ್ದರು ಎಂಬುದಕ್ಕೆ ಪ್ರತೀತಿ ಇದೆ. ನಂತರ ಅಲ್ಲಿಂದ ಬಾಗೇರಿಯಲ್ಲಿ ವಾಸ್ತವ್ಯ ಹೂಡಿದ್ದ ಶ್ರೀರಾಮ, ಅಲ್ಲಿ ರಾಮೇಶ್ವರ ದೇವಾಲಯವನ್ನು ನಿರ್ಮಿಸಿದ್ದಾನೆ. ಇತಿಹಾಸದ ಪುಟಗಳನ್ನು ಕೆದಕುತ್ತಾ ಹೋದರೆ ಇನ್ನು ಸಾಕಷ್ಟು ಮಾಹಿತಿ ಲಭ್ಯವಾಗುತ್ತವೆ. ಈ ನಿಟ್ಟಿನಲ್ಲಿ ಸಂಶೋಧಕರು ಗಮನ ಹರಿಸಬೇಕು ಎನ್ನುತ್ತಾರೆ ಹರಿಹಳ್ಳಿ ಗ್ರಾಮದ ಸತ್ಯನಾರಾಯಣ.-----

Share this article