ಸಡಗರ, ಸಂಭ್ರಮದಿಂದ ರಂಜಾನ್‌ ಆಚರಣೆ

KannadaprabhaNewsNetwork | Published : Apr 1, 2025 12:48 AM

ಸಾರಾಂಶ

ನಗರ ಹಾಗೂ ತಾಲೂಕಿನಾದ್ಯಂತ ಈದ್- ಉಲ್- ಫಿತ್ರ ಹಬ್ಬವನ್ನು (ರಂಜಾನ್‌) ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಮುಸ್ಲಿಂ ಬಾಂಧವರು ಒಂದು ತಿಂಗಳಿಂದ ಆಚರಿಸುತ್ತಿದ್ದ ರೋಜಾ(ಉಪವಾಸ) ಮುಕ್ತಾಯಗೊಳಿಸಿ ನಮಾಜ್ ಸಲ್ಲಿಸಿ ಸೋಮವಾರ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ನಗರ ಹಾಗೂ ತಾಲೂಕಿನಾದ್ಯಂತ ಈದ್- ಉಲ್- ಫಿತ್ರ ಹಬ್ಬವನ್ನು (ರಂಜಾನ್‌) ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಮುಸ್ಲಿಂ ಬಾಂಧವರು ಒಂದು ತಿಂಗಳಿಂದ ಆಚರಿಸುತ್ತಿದ್ದ ರೋಜಾ(ಉಪವಾಸ) ಮುಕ್ತಾಯಗೊಳಿಸಿ ನಮಾಜ್ ಸಲ್ಲಿಸಿ ಸೋಮವಾರ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದರು.

ಇಲ್ಲಿಯ ರಾಣಿ ಚನ್ನಮ್ಮ ಮೈದಾನ(ಈದ್ಗಾ), ಹಳೇ ಹುಬ್ಬಳ್ಳಿ ಮಸೀದಿ ಹಾಗೂ ವಿವಿಧ ಮಸೀದಿಗಳಿಗೆ ತೆರಳಿ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಹೊಸ ಬಟ್ಟೆ ಧರಿಸಿಕೊಂಡು ಹಿರಿಯ ನಾಗರಿಕರಿಂದ ಚಿಕ್ಕಮಕ್ಕಳವರೆಗೂ ಹಬ್ಬದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಧರ್ಮಗುರು ಮೌಲಾನಾ ಜಹಿರುದ್ದೀನ್ ಖಾಜಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಪ್ರಸ್ತುತ ವರ್ಷ ಮಳೆ, ಬೆಳೆ ಹಾಗೂ ಎಲ್ಲರೂ ಚೆನ್ನಾಗಿರುವಂತೆ ಆ ದೇವರಲ್ಲಿ ಬೇಡಿಕೊಂಡರು. ನಮಾಜ್ ಪೂರ್ಣಗೊಂಡ ಬಳಿಕ ಪರಸ್ಪರ ಈದ್ ಮುಬಾರಕ, ಈದ್ ಮುಬಾರಕ್ ಎಂದು ಶುಭಾಶಯ ವಿನಿಮಯ ಮಾಡಿಕೊಂಡರು.

ನಮಾಜ್ ಸಲ್ಲಿಸಿದ ನಂತರ ಮನೆಯಲ್ಲಿ ಈದ್ ಪ್ರಯುಕ್ತ ಸಿದ್ಧಪಡಿಸಲಾಗುವ ಹಾಲು, ಒಣ ಹಣ್ಣುಗಳಿಂದ ತಯಾರಿಸಿದ ಸುರಕುರಮಾ ಸವಿದರು.ರಂಜಾನ ಆಚರಣೆ:

ತಾಲೂಕಿನಾದ್ಯಂತವೂ ರಂಜಾನ್‌ ಹಬ್ಬ ಸಂಭ್ರಮದಿಂದ ನಡೆಯಿತು. ಬೆಳಗ್ಗೆ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ತಮ್ಮ ಸ್ನೇಹಿತರು ಹಾಗೂ ಕುಟುಂಬ ಸಂಬಂಧಿಕರೊಂದಿಗೆ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಒಗ್ಗಟಿನಿಂದ ಪ್ರಗತಿ: ಧರ್ಮಗುರು ಖಾಜಿಭಾರತ ಸರ್ವ ಜನಾಂಗದ ನಾಡಾಗಿದ್ದು, ವಿವಿಧತೆಯಲ್ಲಿ ಏಕತೆ ಕಾಣುವ ನಾವು, ಪ್ರೀತಿ-ವಿಶ್ವಾಸದಿಂದ ಬದುಕಬೇಕು. ಒಗ್ಗಟ್ಟಿನಿಂದ ಪ್ರಗತಿ ಸಾಧಿಸಬೇಕು. ಮಾನವೀಯತೆ ಸದ್ಗುಣ ಬೆಳೆಸಿಕೊಂಡು ಒಂದಾಗಿ ಬಾಳಬೇಕು ಎಂದು ಮೌಲಾನಾ ಜಹಿರುದ್ದೀನ್ ಖಾಜಿ ಧರ್ಮ ಸಂದೇಶ ನೀಡಿದರು.ಪವಿತ್ರ ರಂಜನ್ ಮಾಸದಲ್ಲಿ ಉಪವಾಸ ಮಾಡಿ ದೇವರ ಕೃಪೆಗೆ ಪಾತ್ರರಾಗಿದ್ದೀರಿ. ದೇವರು ಮತ್ತು ಧರ್ಮದಲ್ಲಿ ನಂಬಿಕೆಯಿಟ್ಟು ಧರ್ಮ ಅನುಸರಿಸಿದರೆ ದೇವರ ದಯೆ ಇರುತ್ತದೆ. ದೇವರ ನಾಮಸ್ಮರಣೆಯಿಂದ ಜೀವನ ಪಾವನವಾಗಲಿದೆ. ಇಸ್ಲಾಂ ಸಂದೇಶದಂತೆ ಶಾಂತಿ, ಸೌಹಾರ್ದತೆಯಿಂದ ಧರ್ಮ ಸಹಿಷ್ಣುಗಳಾಗಿ ಬಾಳಿ ಬದುಕಬೇಕು ಎಂದು ಹೇಳಿದರು.ಹುಬ್ಬಳ್ಳಿ ಅಂಜುಮನ್‌ ಏ ಇಸ್ಲಾಂ ಸಂಸ್ಥೆ ಅಧ್ಯಕ್ಷ ಎ.ಎಂ. ಹಿಂಡಸಗೇರಿ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಮುಖ್ಯವಾಗಿದ್ದು, ಎಷ್ಟೇ ಕಷ್ಟವಾದರೂ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ. ಪ್ರಸ್ತುತ ತಂತ್ರಜ್ಞಾನ ಯುಗದಲ್ಲಿ ಇಂಗ್ಲಿಷ್ ಕಲಿಕೆ ಅನಿವಾರ್ಯ. ಆದರೆ, ಮಾತೃಭಾಷೆಯೂ ಅಷ್ಟೇ ಮುಖ್ಯ. ಅದರಲ್ಲಿ ಸಂಸ್ಕಾರ ಮಿಳಿತವಾಗಿರುತ್ತದೆ ಎಂದರು.ಶಾಸಕ ಪ್ರಸಾದ ಅಬ್ಬಯ್ಯ, ಸದಾನಂದ ಡಂಗನವರ, ಸಿರಾಜ್ ಅಹ್ಮದ್ ಕುಡಚಿವಾಲೆ ಹಾಗೂ ಇತರ ಮುಖಂಡರು ಪಾಲ್ಗೊಂಡಿದ್ದರು. ಮುಂಜಾಗ್ರತಾ ಕ್ರಮವಾಗಿ ಈದ್ಗಾ ಮೈದಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿತ್ತು.

ಮೂರುಸಾವಿರ ಮಠಕ್ಕೆ ಭೇಟಿ: ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಇಲ್ಲಿಯ ಮೂರುಸಾವಿರ ಮಠಕ್ಕೆ ಭೇಟಿ ನೀಡಿ ಶ್ರೀಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಅಂಜುಮನ್ ಸಂಸ್ಥೆ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಸದಾನಂದ ಡಂಗನವರ, ಯುಸೂಪ್ ಸವಣೂರ, ಅಲ್ತಾಪ್ ಹಳ್ಳೂರ ಇದ್ದರು.

Share this article