ಕನ್ನಡಪ್ರಭ ವಾರ್ತೆ ಅರಸೀಕೆರೆ
ಇಲ್ಲಿನ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಿದರು.ಮೊದಲು ಬಾಣಾವರದ ಸುನ್ನಿ ಜುಮ್ಮಾ ಮಸೀದಿಯಿಂದ ಮೆರವಣಿಗೆಯಲ್ಲಿ ಹೊರಟು ಅಲ್ಲಾಹನ ನಾಮವನ್ನು ಪಠಿಸುತ್ತ ಹುಳಿಯಾರು ರಸ್ತೆ ಮಾರ್ಗವಾಗಿ ಜಾವಗಲ್ ರಸ್ತೆಯಲ್ಲಿರುವ ಈದ್ಗಾವನ್ನು ತಲುಪಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನೆರೆವೇರಿಸಿದರು.
ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬವನ್ನು ಕುರಿತು ಮಾತನಾಡಿದ ಧರ್ಮ ಗುರುಗಳಾದ ಸರ್ಫರಾಜ್ ರಜಾ, ಇಸ್ಲಾಂ ಧರ್ಮವು ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಶಾಂತಿಯನ್ನು ಸಾರುವ ಧರ್ಮವಾಗಿದ್ದು ಇಸ್ಲಾಂ ಧರ್ಮದ ಪ್ರಕಾರ ಸಮಾಜದಲ್ಲಿ ವಾಸಿಸುವ ಎಲ್ಲರೂ ಸಹ ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕಬೇಕು. ಅಲ್ಲದೆ ಎಲ್ಲಿಯೂ ಯಾರಿಗೂ ಸಹ ನೋವಾದಾಗ ಅವರಿಗೆ ತನ್ನ ಕೈಲಾದ ಸೇವೆಯನ್ನ ಸಲ್ಲಿಸುತ್ತಾ ನೆರೆಹೊರೆಯವರ ಕಷ್ಟ- ಸುಖಗಳಿಗೆ ಸ್ಪಂದಿಸುತ್ತಾ ಅವರ ಸಂಕಷ್ಟಗಳಿಗೆ ಸಹಕರಿಸುತ್ತಾ ಬದುಕಬೇಕು ಎಂಬುದನ್ನು ಇಸ್ಲಾಂ ಧರ್ಮವು ತಿಳಿಸಿಕೊಟ್ಟಿದೆ. ಅಲ್ಲದೆ ತಾನು ಹುಟ್ಟಿದ ನೆಲ ನಾಡು-ನುಡಿ ಇವುಗಳ ಸಂರಕ್ಷಣೆಯನ್ನು ಮಾಡುವುದು ಪ್ರತಿಯೊಬ್ಬ ಮಾನವನ ಕರ್ತವ್ಯವಾಗಿದೆ. ಸಮಾಜದಲ್ಲಿ ಎಂದಿಗೂ ಶಾಂತಿ ನೆಲೆಸಲಿ ಉತ್ತಮವಾದ ಮಳೆ ಬೆಳೆಯಾಗಿ ನಾಡು ಸಮೃದ್ಧಿಯಾಗಲಿ. ಮನುಕುಲ ಸಂತಸದಿಂದ ಬದುಕುವಂತಾಗಲಿ ಎಂದು ಅಲ್ಲಾಹನಲ್ಲಿ ಪ್ರಾರ್ಥಿಸಿದರು.ಈ ಸಂದರ್ಭದಲ್ಲಿ ಸುನ್ನಿ ಮುಸ್ಲಿಂ ಜಮಾತ್ ಕಮಿಟಿಯ ಅಧ್ಯಕ್ಷರಾದ ಸೈಯದ್ ರಹಿಂಸಾಬ್, ಕಾರ್ಯದರ್ಶಿ ಶರ್ಫಾನ್, ಖಜಾಂಚಿ ಶಬ್ಬೀರ್, ಸಮಾಜದ ಮಾಜಿ ಅಧ್ಯಕ್ಷರಾದ ಕೆ ಸಿ ಖಾದರ್ ಭಾಷಾ ಸಾಬ್, ಶಫಿ ಅಹಮದ್ ಸಾಬ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಸಯ್ಯದ್ ಆಸಿಫ್, ಮೋಮಿನ್, ಇಮ್ತಿಯಾಜ್, ವಜೀರ್, ಮುಖಂಡರುಗಳಾದ ಪ್ಯಾರೋ ಸಾಹೇಬ್, ಡಾ. ಖಾಸಿಂ, ಪಿರಾನ್ ಸಾಹೇಬ್, ಸಮೀವಲ್ಲಾ ಶರೀಫ್, ವಕ್ಫ್ ಬೋರ್ಡ್ ಮಾಜಿ ನಿರ್ದೇಶಕ ಆರಿಫ್ ಜಾನ್, ಮೊಹಮ್ಮದ್ ಫಾಝಿಲ್ ಸೇರಿದಂತೆ ಬಾಣಾವರ ಹಾಗೂ ಅಕ್ಕಪಕ್ಕದ ಗ್ರಾಮದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ರಂಜಾನ್ ಹಬ್ಬದ ನಮಾಜ್ ಅನ್ನು ನೆರವೇರಿಸಿದರು.