ರಂಜಾನ್ ಮಾನವೀಯತೆ ಬೆಳೆಸುವ ಆಚರಣೆ

KannadaprabhaNewsNetwork |  
Published : Mar 18, 2026, 02:30 AM IST
17ಕೆಪಿಎಲ್5:ಕೊಪ್ಪಳ ನಗರದ ಜೆಕೆಎಸ್ ಸಭಾಂಗಣದಲ್ಲಿ ವಿಜನ್ ಚಾರಿಟಬಲ್ ಟ್ರಸ್ಟ್ ವತಿಯಿಂದ  ಇಫ್ತಾರ್ ಸೌಹಾರ್ದ ಕೂಟ ಜರುಗಿತು.   | Kannada Prabha

ಸಾರಾಂಶ

ಉಪವಾಸದ ಪರಿಕಲ್ಪನೆ ಹಿಂದೂ,ಬೌದ್ಧ ಹಾಗೂ ಜೈನ ಧರ್ಮಗಳಲ್ಲಿಯೂ ಉಲ್ಲೇಖಿತವಾಗಿದೆ

ಕೊಪ್ಪಳ: ರಂಜಾನ್ ಮಾಸಾಚರಣೆಯಲ್ಲಿ ಉಪವಾಸ ಕೇವಲ ಆಹಾರ ತ್ಯಾಗವಲ್ಲ,ಅದು ಆತ್ಮನಿಯಂತ್ರಣ,ಸತ್ಯನಿಷ್ಠೆ ಹಾಗೂ ಮಾನವೀಯತೆ ಬೆಳೆಸುವ ಪವಿತ್ರ ಆಚರಣೆಯಾಗಿದೆ ಎಂದು ಇಲಕಲ್‌ನ ಅರಬಿ ಶಿಕ್ಷಕ ಲಾಲ ಹುಸೇನಿ ಕಂದಗಲ್ ಹೇಳಿದರು.

ನಗರದ ಜೆಕೆಎಸ್ ಸಭಾಂಗಣದಲ್ಲಿ ವಿಜನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಇಫ್ತಾರ್ ಸೌಹಾರ್ದ ಕೂಟದಲ್ಲಿ ಮಾತನಾಡಿದ ಅವರು,

ಉಪವಾಸದ ಪರಿಕಲ್ಪನೆ ಹಿಂದೂ,ಬೌದ್ಧ ಹಾಗೂ ಜೈನ ಧರ್ಮಗಳಲ್ಲಿಯೂ ಉಲ್ಲೇಖಿತವಾಗಿದೆ.ರೋಗಿಗಳು,ಗರ್ಭಿಣಿಯರು ಹಾಗೂ ಮೊಲೆಹಾಲು ಕುಡಿಸುವ ತಾಯಿ ಹೊರತುಪಡಿಸಿ ಮುಸ್ಲಿಂ ಸಮುದಾಯದವರಿಗೆ ರಂಜಾನ್ ತಿಂಗಳ ಉಪವಾಸ ಕಡ್ಡಾಯವಾಗಿದೆ.ದೇವರ ಆದೇಶದಂತೆ ನಿಗದಿತ ಸಮಯದವರೆಗೆ ನೀರು ಸೇರಿದಂತೆ ಯಾವುದೇ ಆಹಾರ ಸೇವಿಸದೆ ಉಪವಾಸ ಆಚರಿಸುವುದು ಸವಾಲಿನ ಕೆಲಸವಾಗಿದ್ದು, ಇದರಿಂದ ಆತ್ಮನಿಗ್ರಹ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಮನುಷ್ಯನು ಎಲ್ಲರನ್ನು ವಂಚಿಸಬಹುದು, ಆದರೆ ದೇವರನ್ನು ವಂಚಿಸಲು ಸಾಧ್ಯವಿಲ್ಲ. ದೇವರ ಭಯ ಮನುಷ್ಯನಲ್ಲಿ ಸದಾ ಇರಬೇಕು.ಉಪವಾಸದಲ್ಲಿ ಆಹಾರ ನಿಯಂತ್ರಣದ ಜತೆಗೆ ನಾಲಿಗೆಯ ನಿಯಂತ್ರಣವೂ ಅಗತ್ಯ.ನಾವು ಮಾತನಾಡುವ ಮಾತು ಯಾರಿಗೂ ನೋವಾಗದಂತೆ ಇರಬೇಕು. ನಾಲಿಗೆ ನಿಯಂತ್ರಣದಲ್ಲಿ ಇದ್ದರೆ ಬದುಕು ಸುಂದರವಾಗುತ್ತದೆ ಎಂದರು.

ಇಂದಿನ ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧಗಳು ಸ್ವಾರ್ಥ ಹಾಗೂ ಪ್ರತಿಷ್ಠೆಯ ಕಾರಣದಿಂದ ನಡೆಯುತ್ತಿವೆ. ಮಹಾಭಾರತ ಮತ್ತು ರಾಮಾಯಣದಲ್ಲಿ ನಡೆದ ಯುದ್ಧಗಳಿಗೆ ಧರ್ಮ ಅಧರ್ಮದ ನಡುವಿನ ಯುದ್ದವಾಗಿತ್ತು. ಆದರೆ ಇಂದು ನಡೆಯುತ್ತಿರುವ ರಕ್ತಪಾತ ಮಾನವೀಯತೆ ಮರೆಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಖುರಾನ್ ಇಸ್ಲಾಂ ಧರ್ಮೀಯರ ಸ್ವತ್ತಷ್ಟೇ ಅಲ್ಲ, ಅದು ಮಾನವಕುಲದ ಗ್ರಂಥವಾಗಿದ್ದು, ಅದರ ಸಂದೇಶ ಜನರಿಗೆ ತಲುಪಿಸುವ ಜವಾಬ್ದಾರಿ ನಮಗಿದೆ ಎಂದು ಹೇಳಿದರು.

ಸದ್ಭಾವನಾ ವೇದಿಕೆಯ ಡಾ. ಸುಶೀಲ್ ಕಲಾಲ್ ಮಾತನಾಡಿ, ಇಸ್ಲಾಂ ಜಗತ್ತಿನ ಎರಡನೇ ಅತಿ ದೊಡ್ಡ ಧರ್ಮವಾಗಿದ್ದು, ಖುರಾನ್ ಜಗತ್ತಿನಲ್ಲಿ ಹೆಚ್ಚು ಓದಲ್ಪಡುವ ಗ್ರಂಥವಾಗಿದೆ. ರಂಜಾನ್ ತಿಂಗಳು ಮುಸ್ಲಿಂ ಸಮುದಾಯಕ್ಕೆ ಅತ್ಯಂತ ಪವಿತ್ರವಾಗಿದ್ದು, ಉಪವಾಸದ ಮೂಲಕ ಮನಸ್ಸು ಹಾಗೂ ದೇಹ ಪರಿಶುದ್ಧಗೊಳಿಸುವುದು ಶ್ಲಾಘನೀಯ ಕಾರ್ಯವಾಗಿದೆ. ಉಪವಾಸದಿಂದ ಮಾನಸಿಕ ನಿಯಂತ್ರಣ ಹಾಗೂ ದೈಹಿಕ ಆರೋಗ್ಯವೂ ಉತ್ತಮವಾಗುತ್ತದೆ.

ಉದ್ಯಮಿ ಬಸವರಾಜ ಬೊಳ್ಳಳ್ಳಿ ಮಾತನಾಡಿ, ತಮ್ಮ ಧರ್ಮದ ಜತೆಗೆ ಇತರೆ ಧರ್ಮಗಳನ್ನೂ ಪ್ರೀತಿಸುವ ಮನೋಭಾವ ಸಮಾಜದಲ್ಲಿ ಬೆಳೆಬೇಕು ಎಂದು ಹೇಳಿದರು.ಇಫ್ತಾರ್ ಕೂಟದಲ್ಲಿ ಶಾಮೀದ್ ಹುಸೇನ್ ತಹಸೀಲ್ದಾರ, ಈಶಣ್ಣ ಕೊರ್ಲಹಳ್ಳಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈ ಬಾರಿ 10-13ನೇ ಸ್ಥಾನದ ಮೇಲೆ ವಿಜಯನಗರ ಕಣ್ಣು
ಹುಡುಗಿಗಾಗಿ ತಮ್ಮನನ್ನೇ ಕೊಲೆ ಮಾಡಿದ ಅಣ್ಣ!