ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಮೇ ತಿಂಗಳ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವನ್ನು ರೋಸಾರಿಯೋ ಚರ್ಚ್ ಮುಖ್ಯಸ್ಥ ಫಾ. ವಲೇರಿಯನ್ ಡಿ’ಸೋಜಾ ಹಾಗೂ ಎಂ.ಆರ್.ಪಿ.ಎಲ್ ಸಂಸ್ಥೆಯ ನಿರ್ದೇಶಕ ಬಿ.ಎಚ್.ವಿ. ಪ್ರಸಾದ್ ಹಸಿರು ನಿಶಾನೆಯ ಮೂಲಕ ಭಾನುವಾರ ಚಾಲನೆ ನೀಡಿದರು. ಈ ಸಂದರ್ಭ ಎಂ.ಆರ್.ಪಿ.ಎಲ್ ಸಂಸ್ಥೆಯ ಕೇಶವ ಪಟ್ಟಾಳಿ, ನಿವೃತ್ತ ಸೇನಾನಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಡಾ. ಧನೇಶ್ ಕುಮಾರ್, ಪ್ರಮುಖರಾದ ಕಮಲಾಕ್ಷ ಪೈ, ದಿಲ್‌ರಾಜ್ ಆಳ್ವ ಹಾಗೂ ರಂಜನ್ ಬೆಳ್ಳರ್ಪಾಡಿ ಇದ್ದರು. ಫಾ. ವಲೇರಿಯನ್ ಡಿ’ಸೋಜಾ ಮಾತನಾಡಿ, ಯುವಕರು ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿ ನಗರವನ್ನು ಸ್ವಚ್ಛವಾಗಿಡಲು ತಮ್ಮ ಸಮಯವನ್ನು ಕೊಡುಗೆ ನೀಡುತ್ತಿರುವುದು ಸಂತೋಷಕರವಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ನಾಗರಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಮಿಷನ್‌ಗೆ ನನ್ನ ಅಭಿನಂದನೆಗಳು ಎಂದರು.
ಅನಧಿಕೃತ ವಾಹನ ನಿಲುಗಡೆಗೆ ತಡೆಗೆ ಮನವಿ: ಈ ಶ್ರಮದಾನದ ವೇಳೆ ರೋಸಾರಿಯೋ ಹಾಲ್‌ನಿಂದ ಸ್ಟೇಟ್ ಬ್ಯಾಂಕ್ ಸಂಪರ್ಕ ರಸ್ತೆಯವರೆಗೆ ಅನೇಕ ಲಾರಿಗಳು, ಕಾರುಗಳು ಮತ್ತು ಹಳೆಯ ವಾಹನಗಳನ್ನು ದೀರ್ಘಕಾಲ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದು, ಸಾರ್ವಜನಿಕ ರಸ್ತೆಯನ್ನು ಖಾಸಗಿ ಪಾಕಿಂಗ್ ಸ್ಥಳವಾಗಿ ಬಳಸಲಾಗುತ್ತಿದೆ. ಈ ರೀತಿಯ ಅನಧಿಕೃತ ಪಾಕಿಂಗ್‌ನಿಂದ ಕತ್ತಲು ಪ್ರದೇಶಗಳು ಉಂಟಾಗಿ, ಬ್ಲ್ಯಾಕ್ ಸ್ಪಾಟ್‌ಗಳು ರೂಪುಗೊಳ್ಳುತ್ತಿವೆ ಹಾಗೂ ಅಕ್ರಮ ಚಟುವಟಿಕೆಗಳಿಗೆ ಅವಕಾಶವಾಗಬಹುದು. ಇದರಿಂದ ಪ್ರತಿದಿನ ಸಂಚರಿಸುವ ವಿದ್ಯಾರ್ಥಿಗಳು ಮತ್ತು ಮಕ್ಕಳ ಆರೋಗ್ಯ ಹಾಗೂ ಭದ್ರತೆಗೆ ಅಪಾಯ ಉಂಟಾಗಬಹುದು. ಇಂತಹ ಪಾಕಿಂಗ್‌ಗೆ ತಡೆ ನೀಡಿ ಅಥವಾ ಪೇ ಪಾಕಿಂಗ್ ವ್ಯವಸ್ಥೆ ಜಾರಿಗೊಳಿಸಿ, ಸಾರ್ವಜನಿಕ ಶಿಸ್ತಿನೊಂದಿಗೆ ಆದಾಯವೂ ಸೃಷ್ಟಿಯಾಗುವಂತೆ ಕ್ರಮ ಕೈಗೊಳ್ಳಬಹುದು ಎಂದು ಅಭಿಯಾನದ ಸ್ವಯಂಸೇವಕರು ನಗರ ಪಾಲಿಕೆಗೆ ಮನವಿ ಸಲ್ಲಿಸಲಿದ್ದಾರೆ.