ಇಷ್ಟಾರ್ಥಸಿದ್ಧಿ ಎಂದೇ ಪ್ರಸಿದ್ಧಿ ಪಡೆದ ರಾಮಲಿಂಗ ಕಾಮಣ್ಣ

KannadaprabhaNewsNetwork | Published : Mar 12, 2025 12:51 AM

ಸಾರಾಂಶ

ಮಂಗಳವಾರ ನವಲಗುಂದಕ್ಕೆ ಬಂದಿದ್ದ ರಾಜ್ಯ- ಹೊರ ರಾಜ್ಯಗಳ ಸಾವಿರಾರು ಭಕ್ತರು ಇಲ್ಲಿನ ಇತಿಹಾಸ ಪ್ರಸಿದ್ಧ ರಾಮಲಿಂಗ ಕಾಮಣ್ಣನ ದರ್ಶನ ಪಡೆದರು.

ನವಲಗುಂದ: ವರ್ಷದೊಳಗ ನಂಗ ಮದ್ವಿ ಆಗ್ತೈತಿ.. ವರ್ಷ ಮುಗಿಯೊದ್ರೊಳಗ ನಮ್ಗ ಮಕ್ಕಳಾಗ್ತಾವ.. ಇಷ್ಟರಾಗ ನಾ ಮನಿ ಕಟ್ಟತೇನಿ.. ನೋಡ್‌ ನೋಡ್ತಿದ್ದಂಗ ನನ್ನ ಆರೋಗ್ಯ ಸುಧಾರಸ್ತೈತಿ.. ಯಾಕಂದ್ರ ನಾ ರಾಮಲಿಂಗ ಕಾಮಣ್ಣಂಗ ಹರಕಿ ಹೊತ್ತೇನಿ.. ಅಂವಾ ಈಡೇರಿಸೇ ಈಡೇರಿಸ್ತಾನ..

ಇಂತಹ ನಂಬಿಕೆಯೊಂದಿಗೆ ಮಂಗಳವಾರ ನವಲಗುಂದಕ್ಕೆ ಬಂದಿದ್ದ ರಾಜ್ಯ- ಹೊರ ರಾಜ್ಯಗಳ ಸಾವಿರಾರು ಭಕ್ತರು ಇಲ್ಲಿನ ಇತಿಹಾಸ ಪ್ರಸಿದ್ಧ ರಾಮಲಿಂಗ ಕಾಮಣ್ಣನ ದರ್ಶನ ಪಡೆದರು.

ಮಾ. 10ರ ಮಧ್ಯರಾತ್ರಿ ಪ್ರತಿಷ್ಠಾಪನೆಯಾಗಿರುವ ರಾಮಲಿಂಗ ಕಾಮಣ್ಣ ಮಾ. 11 ಮಂಗಳವಾರ ಬೆಳಗ್ಗೆ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿದ್ದು, ಮಾ. 16ರಂದು ಕಾಮದಹನವಾಗಲಿದೆ.

ಕೇವಲ ಬಣ್ಣ, ಓಕುಳಿ, ಹಲಗೆ ವಾದನಕ್ಕಷ್ಟೆ ಸೀಮಿತಗೊಳ್ಳದೇ ಭಯ ಭಕ್ತಿಗೆ ಒಲಿವ, ಬೇಡಿದ್ದನ್ನು ಕರುಣಿಸುವ ಮಹಿಮಾನ್ವಿತ ದೈವ. ಸಂತಾನಹೀನರಿಗೆ ಸಂತಾನಭಾಗ್ಯ, ನೆಲೆಯಿಲ್ಲದವರಿಗೆ ನೆಲೆ, ಅನಾರೋಗ್ಯಪೀಡಿತರಿಗೆ ಆರೋಗ್ಯ ನೀಡುತ್ತಾನೆ. ಭಕ್ತಿಯಿಂದ ಭಜಿಸುವವರಿಗೆ ಈ ಕಾಮಣ್ಣ ಕಾಮಧೇನು ಕಲ್ಪವೃಕ್ಷವಾಗಿದ್ದಾನೆ.

ಈ ರಾಮಲಿಂಗನಿಗೆ ಇಂತಹ ಸಿದ್ಧಿ ಲಭಿಸಿದ್ದು ಒಬ್ಬ ತಪೋನಿರತ ಸಿದ್ಧ ಪುರುಷನ ಹಸ್ತದಿಂದ. ಎಲ್ಲೆಡೆ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹಬ್ಬ ಆಚರಿಸುತ್ತಿರುವುದನ್ನು ಗಮನಿಸಿ ಸಿದ್ಧ ಪುರುಷ ಕಾಮಣ್ಣ ಕೇವಲ ಸಾಂಕೇತಿಕ ಮೂರ್ತಿಯಾಗದೇ ಆರಾಧಿಸುವವರಿಗೆ ಆರಾಧ್ಯ ದೈವವಾಗಬೇಕು ಎಂಬ ಅಪೇಕ್ಷೆಯಿಂದ ವಿಶಿಷ್ಟ ಮೂರ್ತಿ ರಚನೆಯ ಸಂಕಲ್ಪಕ್ಕೆ ಮುಂದಾದ.

ಆತ ಆಯ್ದುಕೊಂಡುದು ಸಾಮಾನ್ಯ ಕಟ್ಟಿಗೆಯನ್ನಲ್ಲ! ವಿಶಿಷ್ಟ ಶಕ್ತಿಯ ಗಿಡಮೂಲಿಕೆಯ ಕಟ್ಟಿಗೆಗಳು. ಅದೂ ಕೂಡ ವಿಶೇಷ ನಕ್ಷತ್ರಗಳಂದು ಒಂದೊಂದು ಗಿಡಮೂಲಿಕೆಯನ್ನಾಯ್ದು ಮೂರ್ತಿ ರಚನೆಗೆ ಬಳಸಿದ. ಆತನ ಸಂಕಲ್ಪ101 ಗಿಡಮೂಲಿಕೆ ಬಳಕೆ. ಆದರೆ, ಲಭಿಸಿದುದು 100 ಬಗೆಯ ಗಿಡಮೂಲಿಕೆಗಳು! ಅಂತೂ 100 ಬಗೆಯ ಗಿಡಮೂಲಿಕೆ ಸಂಗ್ರಹಿಸಿ ರಚನೆ ಇನ್ನೇನು ಮುಕ್ತಾಯದ ಹಂತದಲ್ಲಿರುವಾಗ ಈ ಸಿದ್ಧಪುರುಷ ದೈವಾಧೀನನಾದ.

ಇನ್ನೊಂದು ಮೂಲಿಕೆ ಪಡೆದು ಮೂರ್ತಿ ರಚಿಸಿದ್ದರೆ ಆತನ ಅಲೌಕಿಕ ಮೂರ್ತಿಗೆ ಜೀವಕಳೆ ಉದ್ಭವಿಸಲಿತ್ತು ಎಂಬುದು ತಿಳಿದಬಂದ ಸಂಗತಿ. ಇನ್ನೊಂದು ಮೂಲಿಕೆ ಜೋಡಣೆಗಾಗಿ ಆತ ಕೊರೆದ 2 ರಂಧ್ರಗಳನ್ನು ಇಂದಿಗೂ ಕಾಣಬಹುದಾಗಿದೆ. ಸವಣೂರಿನಿಂದ ಈ ಕಾಮದೇವನ ಮೂರ್ತಿಯನ್ನು ನವಲಗುಂದಕ್ಕೆ ಯಾರು ಬರಮಾಡಿಕೊಂಡರೆಂಬುದು ಮಾತ್ರ ಇಂದಿಗೂ ನಿಗೂಢ. ಆದರೆ, ಈತನ ಪವಾಡ ಸದೃಶ್ಯ ಮಹಿಮೆಗಳಿಂದಾಗಿ ನವಲಗುಂದಕ್ಕೆ ಒಂದು ಕ್ಷೇತ್ರದ ಹಾಗೂ ಜಾತ್ರೆಯ ಸ್ವರೂಪ ದೊರೆತಿರುವುದು ಮಾತ್ರ ಪಟ್ಟಣದ ಸೌಭಾಗ್ಯ!

ಈ ಕಾಮದೇವ ನೊಂದವರ ಕಂಬನಿ ಒರೆಸುವ ಕರುಣಾಳು. ಇಷ್ಟಾರ್ಥ ಪೂರೈಸುವ ಅಧಿದೇವತೆಯಾಗಿರುವುದು ಸತ್ಯ. ಸಂತಾನವಿಲ್ಲದೇ ನಲುಗುವ ದಂಪತಿಗಳಿಗೆ ಸಂತಾನ ಕರುಣಿಸಬಲ್ಲ. ಇದಕ್ಕೆ ಬೆಳ್ಳಿಯ ತೊಟ್ಟಿಲು ಹರಕೆಹೊತ್ತರೆ ಸಾಕು. ಮದುವೆಯ ಭಾಗ್ಯಕ್ಕಾಗಿ ಹಾತೊರೆಯುವ ದಂಪತಿಗಳಿಗೆ ಬೆಳ್ಳಿಯ ಬಾಸಿಂಗ ಅರ್ಪಿಸಿ ಬೇಡಿಕೊಂಡರಾಯಿತು ಕೈಗಳಿಗೆ ಸೌಭಾಗ್ಯ ಕಂಕಣ ಶತಸ್ಸಿದ್ಧ.

ಅನಾರೋಗ್ಯ ಪೀಡಿತರು ಬೆಳ್ಳಿ ಕುದುರೆಯ ಹರಕೆ ಹೊತ್ತು ಪೂಜಿಸಿದರೆ ಆತ ಕುದುರೆಯಂತೆ ಉತ್ಸಾಹಿಯಾಗುವುದು ಖಚಿತ. ಮನೆ ಇಲ್ಲದವರು ಬೆಳ್ಳಿಯ ಛತ್ರಿ, ಉದ್ಯೋಗ, ಬದುಕಿಗೆ ನೆಲೆ ಬಯಸುವವರು ಬೆಳ್ಳಿಯ ಪಾದದ ಹರಕೆ ಹೊತ್ತು ಹರಕೆಯ ಸಾಮಗ್ರಿಗಳನ್ನು ಪೂಜಿಸಿದರೆ ಅವರ ಬೇಡಿಕೆ ಈಡೇರಿದಂತೆಯೇ ಎಂಬುದು ಭಕ್ತರ ನಂಬಿಕೆ, ಪ್ರತೀತಿಯೂ ಹೌದು. ಹರಕೆ ತೀರಿದ ನಂತರ ಸಮರ್ಪಿಸಿದ ಬೆಳ್ಳಿಯ ಸಲಕರಣೆಗಳೇ ಕ್ವಿಂಟಲ್‌ಗಿಂತ ಹೆಚ್ಚು ಎಂಬುದು ಮತ್ತೊಂದು ವಿಶೇಷ.

ಹೋಳಿ ಹುಣ್ಣಿಮೆ ಹಬ್ಬದ ಐದೂ ದಿನ ನವಲಗುಂದದಲ್ಲಿ ಜಾತ್ರೆಯ ವಾತಾವರಣ ಕಂಗೊಳಿಸುತ್ತದೆ. ಎಲ್ಲಿಂದಲೋ ಜನ ರಾಮಲಿಂಗನ ಓಣಿಯತ್ತ ಧಾವಿಸುತ್ತಾರೆ. ಲಕ್ಷಾಂತರ ಭಕ್ತರು ಬಂದು ಕಿ.ಮೀ ವರೆಗೂ ಹೆಚ್ಚು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಾರೆ.

16ರಂದು ಕಾಮದಹನ

ಮಾ. 10ರ ಏಕಾದಶಿ ರಾತ್ರಿಯಂದು ರಾಮಲಿಂಗ ಕಾಮಣ್ಣನ ಪ್ರತಿಸ್ಥಾಪನೆಯಾಗಿದೆ. ಮಾ. 11ರ ಬೆಳಗಿನಿಂದ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಮಾ. 14 ಹೋಳಿ ಹುಣ್ಣಿಮೆ ಆಚರಣೆ ಜರುಗಿದರೆ ಮಾ.15 ರಂದು ಬಣ್ಣದಾಟ (ಓಕುಳಿ) ರಾತ್ರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾಮಲಿಂಗ ಕಾಮಣ್ಣ ಹಾಗೂ ವಿವಿಧ 14 ಕಡೆಗಳಲ್ಲಿ ಪ್ರತಿಷ್ಠಾಪಿಸಿದ ಕಾಮಣ್ಣ ಮೂರ್ತಿಗಳ ಅದ್ಧೂರಿ ಮೆರವಣಿಗೆ ನಡೆಯಲಿದೆ. ಉಳಿದ ಕಾಮಣ್ಣಗಳ ಅಗ್ನಿಸ್ಪರ್ಶದ ಬಳಿಕ ಇಷ್ಟಾರ್ಥ ಸಿದ್ದಿ ರಾಮಲಿಂಗ ಕಾಮಣ್ಣನ ದಹನವಾಗುತ್ತದೆ.

Share this article